ಮಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ತಪ್ಪಿಸಲು ಕಮಿಷನರ್ ಕಸರತ್ತು ; ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಎಸಿಪಿಗಳಿಗೆ ಹೆಚ್ಚುವರಿ ಹೊಣೆ, ಬೀಟ್ ಮೀಟಿಂಗ್ ಬಗ್ಗೆ ನಿಗಾ 

14-03-23 06:41 pm       Richard, Mangalore HK Correspondent   ಕರಾವಳಿ

ಮಂಗಳೂರು ನಗರದಲ್ಲಿ ಆಗುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ತಪ್ಪಿಸಲು ಕಮಿಷನರ್ ಕುಲದೀಪ್ ಜೈನ್ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಮತ್ತೊಂದು ಕಡೆ ಪ್ರತಿ ಠಾಣೆಯಲ್ಲೂ ಆಯಾ ಭಾಗದ ಎಸಿಪಿ ನೇತೃತ್ವದಲ್ಲಿ ಟ್ರಾಫಿಕ್ ಮತ್ತಿತರ ಪ್ರಕರಣಗಳ ಬಗ್ಗೆ ನಿಗಾ ವಹಿಸಲು ಸೂಚನೆ ನೀಡಿದ್ದಾರೆ.

ಮಂಗಳೂರು, ಮಾ.13: ಮಂಗಳೂರು ನಗರದಲ್ಲಿ ಆಗುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ತಪ್ಪಿಸಲು ಕಮಿಷನರ್ ಕುಲದೀಪ್ ಜೈನ್ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಪ್ರಾಯೋಗಿಕವಾಗಿ ಒಂದೊಂದು ಕಡೆ ಟ್ರಾಫಿಕ್ ಡೈವರ್ಟ್ ಮಾಡಿ ವಾಹನಗಳ ಸಂಚಾರಕ್ಕೆ ನಿಯಂತ್ರಣ ಹೇರಿದರೆ, ಮತ್ತೊಂದು ಕಡೆ ಪ್ರತಿ ಠಾಣೆಯಲ್ಲೂ ಆಯಾ ಭಾಗದ ಎಸಿಪಿ ನೇತೃತ್ವದಲ್ಲಿ ಟ್ರಾಫಿಕ್ ಮತ್ತಿತರ ಪ್ರಕರಣಗಳ ಬಗ್ಗೆ ನಿಗಾ ವಹಿಸಲು ಸೂಚನೆ ನೀಡಿದ್ದಾರೆ. 

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರತಿ ನಾಲ್ಕು ಠಾಣೆಗಳಿಗೊಬ್ಬರಂತೆ ಎಸಿಪಿ ದರ್ಜೆಯ ಅಧಿಕಾರಿ ಇದ್ದಾರೆ. ಆಯಾ ಠಾಣೆಗಳಲ್ಲಿ ನಡೆಯುವ ಅಪರಾಧ ಚಟುವಟಿಕೆ, ಈ ಹಿಂದಿನ ಪ್ರಕರಣಗಳ ಬಗ್ಗೆ ಟ್ರಯಲ್ ಕೋರ್ಟಿನಲ್ಲಾಗುವ ಪ್ರಕ್ರಿಯೆಗಳ ಬಗ್ಗೆ ಎಸಿಪಿ ದರ್ಜೆಯ ಅಧಿಕಾರಿ ನಿಗಾ ವಹಿಸಲು ಹೊಣೆ ನೀಡಿದ್ದಾರೆ. ಅಧಿಕಾರ ಸ್ವೀಕರಿಸಿದ ಆರಂಭದಲ್ಲಿಯೇ ಅಪರಾಧ ಪತ್ತೆ ಹಚ್ಚುವುದು ಮಾತ್ರ ತಮ್ಮ ಜವಾಬ್ದಾರಿಯಲ್ಲ, ಅಪರಾಧಿಗಳಿಗೆ ಶಿಕ್ಷೆ ಕೊಡಿಸುವುದು ಕೂಡ ಪೊಲೀಸರ ಕರ್ತವ್ಯ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಕಮಿಷನರ್ ಕುಲದೀಪ್ ಜೈನ್ ಹೇಳಿದ್ದರು. ಅದರಂತೆ, ನಾಲ್ಕು ಉಪ ವಿಭಾಗದ ಎಸಿಪಿಗಳಿಗೆ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಹೆಚ್ಚುವರಿ ಹೊಣೆ ನೀಡಲಾಗಿದೆ. ಇದೇ ಉದ್ದೇಶದಲ್ಲಿ ಪೊಲೀಸರ ಪರವಾಗಿ ಕೋರ್ಟಿನಲ್ಲಿ ವಾದಿಸುವ ಪಬ್ಲಿಕ್ ಪ್ರಾಸಿಕ್ಯೂಟರ್ ನಾರಾಯಣ ಶೇರಿಗಾರ್ ಅವರನ್ನು ಇತ್ತೀಚೆಗೆ ಕಮಿಷನರ್ ಸನ್ಮಾನಿಸಿದ್ದರು.

ಇದಲ್ಲದೆ, ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಬೀಟ್ ವ್ಯವಸ್ಥೆ ಮತ್ತು ಮೊಹಲ್ಲಾಗಳ ಸಭೆಯನ್ನೂ ಕಡ್ಡಾಯ ಮಾಡಿದ್ದಾರೆ. ಠಾಣಾ ವ್ಯಾಪ್ತಿಯಲ್ಲಿ ಮಸೀದಿ, ದೇವಸ್ಥಾನದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಮೊಹಲ್ಲಾ ಸಭೆಗಳನ್ನು ನಡೆಸಿ, ಪೊಲೀಸರು ಜನರ ಸಮಸ್ಯೆ ಆಲಿಸಬೇಕು. ಜೊತೆಗೆ, ಆ ಭಾಗದ ಯುವಕರನ್ನು ಕರೆದು ಅವರಲ್ಲಿ ಪೊಲೀಸಿಂಗ್ ಬಗ್ಗೆ ಅರಿವು ಮೂಡಿಸಬೇಕು. ಯುವಕರಿಂದಲೇ ಮಾಹಿತಿ ಸಿಗುವಂತೆ ಪೊಲೀಸರು ವ್ಯವಹರಿಸಬೇಕು ಎಂಬ ಬಗ್ಗೆ ಕಮಿಷನರ್ ಸೂಚನೆ ನೀಡಿದ್ದಾರೆ. ಕಮಿಷನರ್ ಸೂಚನೆ ಬೆನ್ನಲ್ಲೇ ಪ್ರತಿ ವಾರ ಠಾಣೆ ವ್ಯಾಪ್ತಿಯಲ್ಲಿ ಬೀಟ್ ಮೀಟಿಂಗ್ ಆರಂಭಗೊಂಡಿದೆ.

ಟ್ರಾಫಿಕ್ ಪೊಲೀಸರ ಜೊತೆಗೇ ಮಾತುಕತೆ

ಸಾಮಾನ್ಯವಾಗಿ ಐಪಿಎಸ್ ಅಧಿಕಾರಿಗಳು ರಾತ್ರಿ- ಹಗಲೆನ್ನದೆ ಬೀದಿಯಲ್ಲಿ ಕೆಲಸ ಮಾಡುವ ಟ್ರಾಫಿಕ್ ಪೊಲೀಸರ ಬಳಿ ಬಂದು ಮಾತನಾಡುವುದಿಲ್ಲ. ಏನಾದ್ರೂ ಅಗತ್ಯ ಇದ್ದರೆ ಇನ್ಸ್ ಪೆಕ್ಟರ್ ಅಥವಾ ಅದಕ್ಕಿಂತ ಮೇಲಿನ ದರ್ಜೆಯ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆಯುತ್ತಾರೆ. ಆದರೆ ಕುಲದೀಪ್ ಜೈನ್ ನೇರವಾಗಿ ನಗರದಲ್ಲಿ ಕರ್ತವ್ಯದಲ್ಲಿರುವ ಟ್ರಾಫಿಕ್ ಪೊಲೀಸರ ಬಳಿಗೇ ಹೋಗಿ ಮಾತನಾಡಿಸಿದ್ದಾರೆ. ಸ್ಟೇಟ್ ಬ್ಯಾಂಕ್ ವೃತ್ತ, ಕ್ಲಾಕ್ ಟವರ್ ವೃತ್ತ, ಜ್ಯೋತಿ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ, ಹೆಡ್ ಕಾನ್ಸ್ ಟೇಬಲ್ ಗಳನ್ನು ರಸ್ತೆ ಮಧ್ಯದಲ್ಲೇ ನಿಂತು ಮಾತನಾಡಿಸಿದ್ದಾರೆ. ಆಯಕಟ್ಟಿನ ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆಗೇನು ಕಾರಣ ಅನ್ನೋದು ಅಲ್ಲಿ ಕರ್ತವ್ಯ ನಿರ್ವಹಿಸುವ ಸಿಬಂದಿಗೆ ಗೊತ್ತಿರುತ್ತದೆ. ಅದನ್ನು ಮೂರನೇ ವ್ಯಕ್ತಿಯಿಂದ ತಿಳಿಯುವ ಬದಲು ಕುಲದೀಪ್ ಜೈನ್ ನೇರವಾಗಿಯೇ ಸಿಬಂದಿಯಲ್ಲೇ ತಿಳಿದುಕೊಳ್ಳುತ್ತಿದ್ದಾರೆ. ಮಂಗಳೂರಿನ ಮಟ್ಟಿಗೆ ಈ ರೀತಿ ಮುತುವರ್ಜಿ ವಹಿಸಿದ್ದು ಇದೇ ಮೊದಲು. 

ಸದ್ಯಕ್ಕೆ ಹಂಪನಕಟ್ಟೆ ವೃತ್ತದಲ್ಲಿ ಬಸ್ ಗಳು ನಿಧಾನಕ್ಕೆ ಚಲಿಸಿ, ಟ್ರಾಫಿಕ್ ಸಮಸ್ಯೆ ಆಗುತ್ತಿದ್ದುದನ್ನು ಗಮನಿಸಿ ಅಲ್ಲಿ ವನ್ ವೇ ಮಾಡಿದ್ದಾರೆ. ಜೊತೆಗೆ, ಸಿಟಿ ಬಸ್ ಗಳನ್ನು ನೇರವಾಗಿ ಹೋಗಲು ಪೊಲೀಸರನ್ನು ನಿಯೋಜಿಸಿದ್ದಾರೆ. ಫಳ್ನೀರ್ ಕಡೆಯಿಂದ ಕಂಕನಾಡಿ, ವೆಲೆನ್ಸಿಯಾ ಕಡೆಗೆ ತೆರಳುವ ವಾಹನಗಳಿಗೆ ಬದಲಿ ದಾರಿಯನ್ನೂ ಮಾಡಿದ್ದಾರೆ. ಕಂಕನಾಡಿ ವೃತ್ತದಲ್ಲಿ ಅಡ್ಡಾದಿಡ್ಡಿ ವಾಹನ ಚಲಿಸುವ ಬದಲು ಯು ಟರ್ನ್ ಹೊಡೆದು ಮುಂದಕ್ಕೆ ಹೋಗಲು ವ್ಯವಸ್ಥೆ ಮಾಡಿದ್ದಾರೆ. ಇದು ಒಮ್ಮೆಗೆ ವಾಹನ ಸವಾರರಿಗೆ ಕಷ್ಟ ಎನಿಸಿದರೂ, ಟ್ರಾಫಿಕ್ ಪೊಲೀಸರು ಸರಿಯಾಗಿ ಕಾರ್ಯ ನಿರ್ವಹಿಸಿದಲ್ಲಿ ಅದನ್ನು ನಿಭಾಯಿಸುವುದು ಕಷ್ಟ ಆಗಲ್ಲ. ಆದರೆ ಇದೇನಿದ್ದರೂ, ತಾತ್ಕಾಲಿಕ ಪರಿಹಾರ ಅಷ್ಟೇ. ಸಾರಿಗೆ ಬಸ್ ಗಳ ಜೊತೆಗೆ ಇನ್ನಿತರ ವಾಹನಗಳ ಸಂಚಾರಕ್ಕೆ ಅದೇ ರಸ್ತೆ ಇರೋದು. ಅದರಿಂದಾಗಿ ಈ ರೀತಿಯ ಕಸರತ್ತು ತಾತ್ಕಾಲಿಕ ಪರಿಹಾರ ಅಷ್ಟೇ. ವಾಹನಗಳ ದಟ್ಟಣೆ ಇರುವಾಗ ಸುತ್ತಿ ಬಳಸಿ ಹೋದರೆ ಮತ್ತಷ್ಟು ಟ್ರಾಫಿಕ್ ಸಮಸ್ಯೆ ಎದುರಾಗುತ್ತದೆ.

Mangalore top cop Kuldeep Jain lists traffic plans for the city, stresses on strengthening the beat system, and close watch on court cases by ACPS. Police commissioner Kuldeep Jain himself was seen on roads giving instructions to traffic constables for smooth flow of traffic. Since he became the commissioner Kuldeep jain has been receiving praise on social media for his handling of the traffic situation in the city. There have been multiple anecdotal reports of a reduction in commute time in several parts of Mangaluru.