ವೈದ್ಯರ ನಿರ್ಲಕ್ಷ್ಯದಿಂದ ಕಾಲು ಕಳಕೊಂಡ ನೌಷಾದ್ ; ದೇರಳಕಟ್ಟೆಯಲ್ಲಿ ಡಿವೈಎಫ್ಐ ಸಾಮೂಹಿಕ ಧರಣಿ, ಪರಿಹಾರಕ್ಕೆ 1 ವಾರದ ಗಡುವು 

14-03-23 09:50 pm       Mangalore Correspondent   ಕರಾವಳಿ

ವೈದ್ಯರ ನಿರ್ಲಕ್ಷ್ಯದಿಂದಾಗಿ ಕಾಲು ಕಳೆದುಕೊಂಡ ಕುರ್ನಾಡು ನಿವಾಸಿ ನೌಷಾದ್ ಗೆ ಪರಿಹಾರ ಒದಗಿಸಬೇಕು, ತಪ್ಪಿತಸ್ಥ ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಮುಂದಿಟ್ಟು ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ದೇರಳಕಟ್ಟೆ ಸಿಟಿ ಮೈದಾನದಲ್ಲಿ ಸಾಮೂಹಿಕ ಧರಣಿ ನಡೆದಿದೆ.‌ 

ಮಂಗಳೂರು, ಮಾ.14 : ವೈದ್ಯರ ನಿರ್ಲಕ್ಷ್ಯದಿಂದಾಗಿ ಕಾಲು ಕಳೆದುಕೊಂಡ ಕುರ್ನಾಡು ನಿವಾಸಿ ನೌಷಾದ್ ಗೆ ಪರಿಹಾರ ಒದಗಿಸಬೇಕು, ತಪ್ಪಿತಸ್ಥ ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಮುಂದಿಟ್ಟು ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ದೇರಳಕಟ್ಟೆ ಸಿಟಿ ಮೈದಾನದಲ್ಲಿ ಸಾಮೂಹಿಕ ಧರಣಿ ನಡೆದಿದೆ.‌ 

ಉಳ್ಳಾಲ ತಾಲೂಕು ವ್ಯಾಪ್ತಿಯ ಹಲವಾರು ಸಂಘ - ಸಂಸ್ಥೆಗಳ ಯುವಕರು ತಂಡಗಳಾಗಿ ಧರಣಿಯಲ್ಲಿ ಭಾಗಿಯಾಗಿ ನೌಷಾದ್ ಪರವಾಗಿ ಧ್ವನಿ ಎತ್ತಿದರು. ಮಧ್ಯಾಹ್ನ ಹನ್ನೆರಡು ಗಂಟೆಯ ಸುಮಾರಿಗೆ ಜಸ್ಟಿಸ್ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಪ್ರತಿನಿಧಿಗಳು ಧರಣಿ ಸ್ಥಳಕ್ಕೆ ಆಗಮಿಸಿ ಸಂಘಟನೆಯ ನಿಯೋಗವನ್ನು ಮಾತುಕತೆಗೆ ಆಹ್ವಾನಿಸಿದರು. ಸಂತ್ರಸ್ತ ನೌಷಾದ್ ಜೊತೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ನೇತೃತ್ವದ ನಿಯೋಗ ತೆರಳಿ ಮೆಡಿಕಲ್ ಕಾಲೇಜಿನ ಡೀನ್ ಜೊತೆಗೆ ಚರ್ಚೆ ನಡೆಸಿತು. 

ಮಾತುಕತೆಯ ತರುವಾಯ ನೌಷಾದ್ ಕುರ್ನಾಡು ಅವರಿಗೆ ನ್ಯಾಯಯುತ ಪರಿಹಾರ ನೀಡುವ ಕುರಿತು ತೀರ್ಮಾನಕ್ಕೆ ಬರಲು ಆಡಳಿತ ಮಂಡಳಿಗೆ ಒಂದು ವಾರದ ಸಮಯ ಕೇಳಿಕೊಂಡಿತು. ಅದಕ್ಕೆ ಒಪ್ಪಿಗೆ ಸೂಚಿಸಿದ ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿ ಒಂದು ವಾರಗಳ ಕಾಲ ಹೋರಾಟವನ್ನು ತಡೆಹಿಡಿಯುವುದಾಗಿ ಘೋಷಿಸಿ ಮಧ್ಯಾಹ್ನ 2:30 ಗಂಟೆಗೆ ಧರಣಿಯನ್ನು ಮುಕ್ತಾಯಗೊಳಿಸಿತು. 

ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಧರಣಿಯನ್ನು ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್, ಸಿಪಿಐ ಮುಖಂಡ ವಿಎ ಕುಕ್ಯಾನ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ರೈತ ಸಂಘದ ಕೃಷ್ಣಪ್ಪ ಸಾಲ್ಯಾನ್, ದಲಿತ ಸಂಘರ್ಷ ಸಮಿತಿಯ ಎಂ. ದೇವದಾಸ್, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್  ಧರಣಿಯನ್ನುದ್ದೇಶಿಸಿ ಮಾತನಾಡಿದರು. 

ಜಿಲ್ಲಾ ಕಾರ್ಯದರ್ಶಿ ಸಂತೊಷ್ ಬಜಾಲ್ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ರಝಾಕ್ ಮೊಂಟೆಪದವು, ರಿಜ್ವಾನ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಝೀಝ್ ಮಲಾರ್, ಎಐವೈಎಫ್ ನ ಪುಷ್ಟರಾಜ್ ಬೋಳೂರು, ಡಿವೈಎಫ್ಐ ಮುಖಂಡರಾದ ರಫೀಕ್ ಹರೇಕಳ, ನಿತಿನ್ ಕುತ್ತಾರ್, ನವೀನ್ ಕೊಂಚಾಡಿ, ಶ್ರೀನಾಥ್ ಕುಲಾಲ್, ಜಗದೀಶ್ ಕುಲಾಲ್, ನವಾಝ್ ದೇರಳಕಟ್ಟೆ, ಅಲ್ತಾಫ್ ಮುಡಿಪು, ರಝಾಕ್ ಮುಡಿಪು, ಮಹಾಬಲ ದೆಪ್ಪಲಿಮಾರ್, ತಯ್ಯೂಬ್ ಬೆಂಗ್ರೆ, ಸುನಿಲ್ ತೇವುಲ, ಅಸುಂತಾ ಡಿಸೋಜ, ಪ್ರಮೀಳಾ ದೇವಾಡಿಗ, ಎಸ್ಎಫ್ಐ ಜಿಲ್ಲಾ ಮುಖಂಡರಾದ ವಿನಿತ್ ದೇವಾಡಿಗ, ರೇವಂತ್ ಕದ್ರಿ ಮುಂತಾದವರು ಉಪಸ್ಥಿತರಿದ್ದರು.

Mangalore Doctors negligence at KS Hedge hospital at Derlakatte, man loses leg, DYFI protests, demands compensation.