ಗುಳಿಗ ದೈವದ ಬಗ್ಗೆ ಸಚಿವ ಆರಗ ಜ್ಞಾನೇಂದ್ರ ಅವಹೇಳನ ; ಕ್ಷಮೆ ಯಾಚಿಸದಿದ್ದರೆ ಗುಳಿಗನೇ ಪೆಟ್ಟು ಕೊಡಲೆಂದು ಜಾಲತಾಣದಲ್ಲಿ ಆಕ್ರೋಶ  

16-03-23 06:10 pm       Mangalore Correspondent   ಕರಾವಳಿ

ಕರಾವಳಿಯಲ್ಲಿ ಜನಮೆಚ್ಚುಗೆ ಪಡೆದಿರುವ ಶಿವದೂತೆ ಗುಳಿಗೆ ತುಳು ನಾಟಕದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಅದೇನೋ ಗುಳಿಗೆಯಂತೆ, ಜಾಪಾಳ ಗುಳಿಗೆಯೋ ಏನೋ.

ಮಂಗಳೂರು, ಮಾ.16: ಕರಾವಳಿಯಲ್ಲಿ ಜನಮೆಚ್ಚುಗೆ ಪಡೆದಿರುವ ಶಿವದೂತೆ ಗುಳಿಗೆ ತುಳು ನಾಟಕದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಅದೇನೋ ಗುಳಿಗೆಯಂತೆ, ಜಾಪಾಳ ಗುಳಿಗೆಯೋ ಏನೋ. ಅದನ್ನು ಜನರಿಗೆ ಕೊಟ್ಟರೆ ಗತಿಯೇ.. ಭಾರಿ ಅಪಾಯ ಇದೆ ಎಂದು ಅಣಕಿಸುವ ರೀತಿ ಮಾತನಾಡಿದ್ದು ಅದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಾಲತಾಣದಲ್ಲಿ ಭಾರೀ ವಿರೋಧವೂ ಕೇಳಿಬಂದಿದೆ.

ತೀರ್ಥಹಳ್ಳಿಯಲ್ಲಿ ಶಿವದೂತೆ ಗುಳಿಗೆ ತುಳು ನಾಟಕವನ್ನು ಅಲ್ಲಿನ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಬೆಂಬಲಿಗರು ಆಯೋಜಿಸಿದ್ದರು. ನಾಟಕದ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯಲ್ಲಿ ಪೋಸ್ಟರ್ ಹಾಕಿದ್ದರು. ನಾಟಕದ ಹಿನ್ನೆಲೆಯನ್ನು ತಿಳಿಯದ ಆರಗ ಜ್ಞಾನೇಂದ್ರ, ಕಾಂಗ್ರೆಸ್ ನಾಯಕರು ಚುನಾವಣೆ ವೇಳೆ ಮತದಾರರನ್ನು ಓಲೈಸಲು ನಾಟಕ ಮಾಡುತ್ತಿದ್ದಾರೆಂದು ತಿಳ್ಕೊಂಡು ಗುಳಿಗ ದೈವದ ಬಗ್ಗೆ ಅಪಚಾರ ಆಗುವ ರೀತಿ ಮಾತನಾಡಿದ್ದಾರೆ. ತೀರ್ಥಹಳ್ಳಿಯಲ್ಲಿ ಏರ್ಪಾಟು ಆಗಿದ್ದ ಕಾರ್ಯಕ್ರಮ ಒಂದರಲ್ಲಿ ಸಚಿವ ಆರಗ ಜ್ಞಾನೇಂದ್ರ ಶಿವದೂತೆ ಗುಳಿಗ ಹೆಸರಿನ ತುಳು ನಾಟಕವನ್ನು ಅಣಕಿಸಿ ಮಾತನಾಡಿದ್ದು ತುಳುವರ ಆಕ್ರೋಶಕ್ಕೆ ಗುರಿಯಾಗಿದೆ.

ಗುಳಿಗ ದೈವದ ಬಗ್ಗೆ ಸಚಿವರು ಅಪಚಾರ ಮಾಡಿದ್ದಾರೆ. ಇವರನ್ನು ತುಳುನಾಡಿನ ದೈವಗಳೇ ನೋಡಿಕೊಳ್ಳಲಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದಲ್ಲದೆ, ತುಳುವರು ನಂಬುವ ದೈವಗಳ ಬಗ್ಗೆ ಅಣಕ ಮಾಡಿರುವ ಸಚಿವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹ ಮಾಡಿದ್ದಾರೆ. ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಫೇಸ್ಬುಕ್ ನಲ್ಲಿ ಪ್ರತಿಕ್ರಿಯಿಸಿದ್ದು, ಕರಾವಳಿಯ ಬಹುಭಾಗದ ಜನರು ನಂಬುವ ದೈವಾರಾಧನೆ ಬಗ್ಗೆ ಗೇಲಿ ಮಾಡುವ ನೀವುಗಳು ಯಾವ ಮುಖ ಇಟ್ಟುಕೊಂಡು ತುಳುವರಲ್ಲಿ ಮತ ಕೇಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಕರಾವಳಿ ಜನರ ಶಕ್ತಿದೈವ ಶಿವದೂತ ಗುಳಿಗರನ್ನೇ ಅವಮಾನಿಸುವಷ್ಟು ಸೊಕ್ಕು ಬಿಜೆಪಿಯವರಿಗೆ ಬಂದಿದೆ ಎಂದರೆ, ಇದರ ತೀರ್ಮಾನ ಚುನಾವಣೆಯಲ್ಲಿ ಜನರು ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಕೆಲವು ಗುಳಿಗ ದೈವದ ಭಕ್ತರು ಆರಗ ಜ್ಞಾನೇಂದ್ರರಿಗೆ ಗುಳಿಗನೇ ಅಹಂಕಾರ ಇಳಿಸುತ್ತಾನೆ, ದೈವದ ತಾಕತ್ತು ಪರಿಚಯ ಆಗಲಿದೆ ಎಂದು ಬರೆದಿದ್ದಾರೆ. ತನ್ನ ಮಾತು ವಿವಾದ ಆಗುತ್ತಲೇ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಆರಗ ಜ್ಞಾನೇಂದ್ರ, ತಾನೇನು ತುಳುವರ ದೈವಾರಾಧನೆಯ ವಿರೋಧಿಯಲ್ಲ. ಯಾವುದೇ ರೀತಿ ಅಣಕಿಸುವ ಮಾತನಾಡಿಲ್ಲ. ಕಾಂಗ್ರೆಸ್ ನಾಯಕರು ತುಳು ನಾಟಕ ಮುಂದಿಟ್ಟು ಮತ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಟೀಕಿಸಿದ್ದು ಮಾತ್ರ. ಗುಳಿಗ ದೈವರ ವಿರುದ್ಧ ಹೇಳಿದ್ದಲ್ಲಿ ಎಂದು ಸ್ಪಷ್ಟನೆ ನೀಡಿದ್ದಾರೆ.

Shivamogga Home minister Araga Jnanendra controversy, criticises Guliga Daiva, social media floods with slamming minister for his remarks on Daiva. Video of this has gone viral on social media.