ಕಳೆದುಹೋಗಿದ್ದ 39 ಮೊಬೈಲ್ ಪತ್ತೆ ; ಯಾವ ಮೂಲೆಯಲ್ಲಿ ಮೊಬೈಲ್ ಬಚ್ಚಿಟ್ಟರೂ ಎತ್ತಿ ತೋರಿಸುತ್ತೆ ಹೊಸ ತಂತ್ರಜ್ಞಾನ, ಮೊಬೈಲ್ ಕಳ್ಳರಿಗೆ ಶಾಕ್!  

16-03-23 11:06 pm       Mangalore Correspondent   ಕರಾವಳಿ

ಕಳೆದ ಐದು ತಿಂಗಳಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 402 ಮೊಬೈಲ್ ಫೋನ್ ಕಳವು ಮತ್ತು ಬಿದ್ದು ಹೋದ ಬಗ್ಗೆ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿದ್ದವು.

ಮಂಗಳೂರು, ಮಾ.16: ಅಲ್ಲಿ ಸೇರಿದ್ದ ಯಾರಿಗೂ ತಮ್ಮ ಪ್ರೀತಿಯ ಮೊಬೈಲ್ ಮತ್ತೆ ತಮ್ಮ ಕೈಸೇರುತ್ತೆ ಅನ್ನುವ ನಂಬಿಕೆ ಇರಲಿಲ್ಲ. ಆದರೆ ಪೊಲೀಸರ ಚಾಕಚಕ್ಯತೆ, ಕೇಂದ್ರ ಸರಕಾರ ಇತ್ತೀಚೆಗೆ ಆರಂಭಿಸಿದ್ದ ವೆಬ್ ಪೋರ್ಟಲ್ ಅವರ ಕಳೆದುಹೋಗಿದ್ದ ಮೊಬೈಲ್ ಆಸೆಯನ್ನು ಈಡೇರಿಸಿದೆ. ಹೌದು.. ಕೇಂದ್ರ ಸರಕಾರದ ಏಪ್ ಆಧರಿಸಿ ಬೆನ್ನತ್ತಿ ಹೋದ ಮಂಗಳೂರು ಪೊಲೀಸರು ಕಳವಾಗಿ ಅಥವಾ ಬಿದ್ದು ಹೋಗಿದ್ದ 39 ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿದ್ದು ಮತ್ತೆ ವಾರಸುದಾರರಿಗೆ ಮರಳಿಸಿದ್ದಾರೆ.

ಕಳೆದ ಐದು ತಿಂಗಳಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 402 ಮೊಬೈಲ್ ಫೋನ್ ಕಳವು ಮತ್ತು ಬಿದ್ದು ಹೋದ ಬಗ್ಗೆ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಈ ಬಗ್ಗೆ ಮೊಬೈಲ್ ಕುರಿತ ಐಎಂಇಐ ಮಾಹಿತಿಗಳನ್ನು ಕೇಂದ್ರ ಸರಕಾರದ ಸೆಂಟ್ರಲ್ ಎಕ್ವಿಪ್ ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್ ) ಎನ್ನುವ ಹೊಸ ಏಪ್ ಆಧರಿತ ಪೋರ್ಟಲ್ ನಲ್ಲಿ ತುಂಬಲಾಗಿತ್ತು. ಈ ಪೈಕಿ 124 ಮೊಬೈಲ್ ಗಳು ಟ್ರೇಸ್ ಆಗಿದ್ದು, ಅದರಲ್ಲಿ 39 ಮೊಬೈಲ್ ಗಳನ್ನು ಅದರ ವಾರಿಸುದಾರರಿಗೆ ನೀಡಲಾಗಿದೆ. ಈ ಮೊಬೈಲ್ ಗಳ ಬೆಲೆ ಆರರಿಂದ ಏಳು ಲಕ್ಷ ಆಗಿದೆ.

ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಗುರುವಾರ ಸಂಜೆ 34 ಮಂದಿಯನ್ನು ಕರೆದು ಅವರ ಮೊಬೈಲ್ ಗಳನ್ನು ಹಿಂತಿರುಗಿಸಿದ್ದಾರೆ. ಅಲ್ಲದೆ, ಈ ಏಪ್ ಕಾರ್ಯ ನಿರ್ವಹಣೆ ಮತ್ತು ಅದಕ್ಕೆ ಸಾರ್ವಜನಿಕರೇ ನೇರವಾಗಿ ದೂರು ಸಲ್ಲಿಕೆ ಮಾಡಬಹುದು ಎನ್ನುವ ಬಗ್ಗೆಯೂ ವಿವರಣೆ ನೀಡಿದ್ದಾರೆ. ಮಂಗಳೂರಿನ ಪ್ರೀತಿಶ್ ಎಂಬವರು ಕೆಲವು ದಿನಗಳ ಹಿಂದಷ್ಟೇ ಮೊಬೈಲ್ ಕಳಕೊಂಡಿದ್ದರು. ಅದು ಮರಳಿ ಸಿಗುವ ಸಾಧ್ಯತೆ ಇಲ್ಲ ಎಂದೇ ನಂಬಿದ್ದರು. ಆದರೂ ದೂರು ಕೊಟ್ಟು ಬಿಡೋಣ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ದೂರಿತ್ತ ಎರಡೇ ದಿನದಲ್ಲಿ ಮೊಬೈಲನ್ನು ಪೊಲೀಸರು ಟ್ರೇಸ್ ಮಾಡಿದ್ದು, ಗುರುವಾರ ಪ್ರೀತಿಶ್ ಕೈಗಿತ್ತಿದ್ದಾರೆ.

ಹಿಂದೆಲ್ಲಾ ಮೊಬೈಲ್ ಕಳವು ದೂರನ್ನು ಪಡೆದು ಪೊಲೀಸರು ತಂತ್ರಜ್ಞಾನ ಬಳಸಿ ಹುಡುಕಾಟ ನಡೆಸುತ್ತಿದ್ದರು. ಒಂದೆರಡು ಬಾರಿ ಟ್ರೈ ಮಾಡಿ ಸಿಗದೇ ಇದ್ದಾಗ ಬಿಟ್ಟು ಬಿಡುತ್ತಿದ್ದರು. ಈಗ ತಂತ್ರಜ್ಞಾನ ಬದಲಾಗಿದ್ದು, ಹೊಸ ಏಪ್ ನಲ್ಲಿ ಮೊಬೈಲ್ ಕುರಿತು ಮಾಹಿತಿ ಅಪ್ಲೋಡ್ ಮಾಡಿದರೆ ಮುಗೀತು. ಆ ಮೊಬೈಲ್ ಮತ್ತೆ ಯಾವಾಗ ಓಪನ್ ಆದರೂ ಆಯಾ ಠಾಣೆಗೆ ಮಾಹಿತಿ ನೀಡುತ್ತದೆ. ಅಲ್ಲದೆ, ಲೊಕೇಶನ್ ಕೂಡ ತೋರಿಸುತ್ತದೆ. ಇದರಿಂದಾಗಿ ಪೊಲೀಸರಿಗೆ ಮೊಬೈಲ್ ಟ್ರೇಸ್ ಮಾಡುವುದು ಸುಲಭವಾಗುತ್ತದೆ ಎಂದು ಕಮಿಷನರ್ ಕುಲದೀಪ್ ಜೈನ್ ಹೇಳಿದ್ದಾರೆ.

ಸಾರ್ವಜನಿಕರು ಈ ವೆಬ್ ನಲ್ಲಿ ನೇರವಾಗಿ ದೂರು ನೀಡುವುದಕ್ಕೂ ಸಾಧ್ಯವಿದೆ. ದೂರಿತ್ತ ಬಳಿಕ ಅದರ ಮಾಹಿತಿಯನ್ನು ಆಯಾ ವ್ಯಾಪ್ತಿಯ ಠಾಣೆಗಳಿಗೆ ನೀಡಬೇಕು. ಇಲ್ಲವೇ ನೇರವಾಗಿ ಪೊಲೀಸ್ ಠಾಣೆಗೂ ದೂರು ನೀಡಬಹುದು. ಪೊಲೀಸರು ಮೊಬೈಲ್ ಟ್ರೇಸ್ ಮಾಡುತ್ತಾರೆ ಎಂದರು ಕಮಿಷನರ್. ಇದೇ ವೇಳೆ, ಗಾಯತ್ರಿ ಭಟ್ ಎಂಬವರು ಮಾತನಾಡಿ, ಒಂದೂವರೆ ತಿಂಗಳ ಹಿಂದೆ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಮೊಬೈಲ್ ಕಳಕೊಂಡಿದ್ದೆ. ಅದು ಮತ್ತೆ ಸಿಗುತ್ತೆ ಅನ್ನುವ ಭರವಸೆ ಇರಲಿಲ್ಲ. ಈಗ ಪೊಲೀಸರು ಟ್ರೇಸ್ ಮಾಡಿ ತಂದೊಪ್ಪಿಸಿದ್ದಾರೆ. ಮೊಬೈಲ್ ಮತ್ತೆ ಸಿಕ್ಕಿದ್ದು ಸಂತೋಷವಾಗಿದೆ ಎಂದರು.

 

24 ಗಂಟೆಯಲ್ಲಿ ಮೂರು ಮೊಬೈಲ್ ಪತ್ತೆ

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಇದೇ ತಂತ್ರಜ್ಞಾನದಡಿ ಹತ್ತು ಮೊಬೈಲ್ ಫೋನ್ ಗಳನ್ನು ಟ್ರೇಸ್ ಮಾಡಲಾಗಿತ್ತು. ಮೂರು ಮೊಬೈಲನ್ನು ದೂರು ಬಂದ 24 ಗಂಟೆಯಲ್ಲಿ ಟ್ರೇಸ್ ಮಾಡಿದ್ದು ಹೊಸ ತಂತ್ರಜ್ಞಾನದ ಬಗ್ಗೆ ನಂಬಿಕೆಯನ್ನು ಹೆಚ್ಚಿಸಿದೆ. ಫೆ.23, 24ರಂದು ಎರಡು ದಿನಗಳ ಅಂತರದಲ್ಲಿ ಮೂರು ಮೊಬೈಲ್ ಗಳನ್ನು ಎಸ್ಪಿ ವ್ಯಾಪ್ತಿಯ ಪೊಲೀಸರು ಟ್ರೇಸ್ ಮಾಡಿ ವಾರಿಸುದಾರರಿಗೆ ತಲುಪಿಸಿದ್ದರು.

Mangalore City Police trace 124 mobile phones, return 39 through CEIR Portal