ಆಪ್ ಅಭ್ಯರ್ಥಿ ಘೋಷಣೆ ; ಮಂಗಳೂರು ದಕ್ಷಿಣಕ್ಕೆ ಸಂತೋಷ್ ಕಾಮತ್, ಮೂಡುಬಿದ್ರೆಗೆ ವಿಜಯನಾಥ ವಿಠಲ ಶೆಟ್ಟಿ, ಸುಳ್ಯಕ್ಕೆ ಸುಮನಾ ಬೆಳ್ಳಾರ್ಕರ್ 

21-03-23 04:24 pm       Mangalore Correspondent   ಕರಾವಳಿ

ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಮಂಗಳೂರು, ಮಾ.21: ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸಂತೋಷ್ ಕಾಮತ್, ಮೂಡುಬಿದಿರೆ ಕ್ಷೇತ್ರಕ್ಕೆ ವಿಜಯನಾಥ್ ವಿಠಲ ಶೆಟ್ಟಿ, ಸುಳ್ಯಕ್ಕೆ ಸುಮನಾ ಬೆಳ್ಳಾರ್ಕರ್ ಅವರ ಹೆಸರನ್ನು ಪ್ರಕಟಿಸಲಾಗಿದೆ. 

ರಾಜ್ಯದಲ್ಲಿ 80 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಎಡಮಲೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಸಂತೋಷ್ ಕಾಮತ್ ಅವರು ಮಂಗಳೂರಿನಲ್ಲಿ  ಉದ್ಯಮಿಯಾಗಿದ್ದು, ಕೊರೋನಾ ಲಾಕ್‌ಡೌನ್ ದಿನಗಳಲ್ಲಿ ವ್ಯಾಪಾರಿಗಳ ಧ್ವನಿಯಾಗಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ರಾಜ್ಯ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಉದ್ಯಮಿ ವಿಜಯನಾಥ ವಿಠಲ ಶೆಟ್ಟಿ ಅವರು ಎಡಪದವು ಶ್ರೀ ಶಾಸ್ತಾವು ಭೂತನಾಥೇಶ್ವರ ದೇವಸ್ಥಾನ ಮತ್ತು ಟ್ರಸ್ಟಿನ ಮುಖ್ಯ ಸಂಚಾಲಕರಾಗಿದ್ದಾರೆ. ಬಜಪೆ ಬಂಟರ ಸಂಘದ ಗೌರವಾಧ್ಯಕ್ಷ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

ಸುಳ್ಯ ಕ್ಷೇತ್ರದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಅವರು ಸುಳ್ಯದ ಮಾಜಿ ಶಾಸಕ ಕೆ.ಕುಶಲ ಅವರ ಪುತ್ರಿ. ಎಂಬಿಎ ಪದವೀಧರೆಯಾಗಿದ್ದು ಕೊರೋನಾ ಸಮಯದಲ್ಲಿ ಜನಹಿತ ಕಾರ್ಯಕ್ರಮ ನಡೆಸಿ ಹೆಸರು ಗಳಿಸಿದ್ದಾರೆ ಎಂದು ಹೇಳಿದರು. ಪಕ್ಷದ ವತಿಯಿಂದ ಜಿಲ್ಲೆಯಾದ್ಯಂತ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಮನೆ ಮನೆ ಪ್ರಚಾರ ನಡೆಸಲಾಗುತ್ತಿದೆ. ಅರವಿಂದ ಕೇಜ್ರಿವಾಲ್ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಆಪ್ ಹೊಸ ಅಲೆ ಸೃಷ್ಟಿಸಲಿದ್ದು, ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡಲಿದೆ ಎಂದರು. ಅಭ್ಯರ್ಥಿಗಳಾದ ಸುಮನಾ ಬೆಳ್ಳಾರ್ಕರ್, ವಿಜಯನಾಥ ವಿಠಲ ಶೆಟ್ಟಿ, ಆಪ್ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್, ವೆಂಕಟೇಶ ಬಾಳಿಗಾ ಉಪಸ್ಥಿತರಿದ್ದರು.

Aam Aadmi Party releases list of candidate for Mangaluru, Santosh Kamath to contest from south. Vijayanath vital to contest from Moodbidri, Sullia Sumana.