ನಾವು ಬೇಡುವುದಿಲ್ಲ, ಹಕ್ಕು ಕೇಳುತ್ತಿದ್ದೇವೆ ಎಂದ ಬಂಟರು ; ವಿಜಯಾ ಬ್ಯಾಂಕ್ ಮುಗಿಸಿದ್ರಿ, ನಾಯಿ, ಹಂದಿ ಮಲಗುವ ಜಾಗದಲ್ಲಿ ಎಬಿ ಶೆಟ್ಟಿ ಹೆಸರಿಡಬೇಡಿ!  

21-03-23 08:38 pm       Mangalore Correspondent   ಕರಾವಳಿ

ಕರಾವಳಿಯಲ್ಲಿ ಬಂಟರು ಮತ್ತೆ ತಮ್ಮ ಧ್ವನಿ ಎತ್ತಿದ್ದಾರೆ. ಕರ್ನಾಟಕ ಸರಕಾರ ಚುನಾವಣೆಗೂ ಮೊದಲೇ ನಮ್ಮ ಬೇಡಿಕೆಯನ್ನು ಮನ್ನಿಸಬೇಕು.

ಮಂಗಳೂರು, ಮಾ.21: ಕರಾವಳಿಯಲ್ಲಿ ಬಂಟರು ಮತ್ತೆ ತಮ್ಮ ಧ್ವನಿ ಎತ್ತಿದ್ದಾರೆ. ಕರ್ನಾಟಕ ಸರಕಾರ ಚುನಾವಣೆಗೂ ಮೊದಲೇ ನಮ್ಮ ಬೇಡಿಕೆಯನ್ನು ಮನ್ನಿಸಬೇಕು. ಬಂಟರು ಯಾನೆ ನಾಡವರನ್ನು 2ಎ ಮೀಸಲಾತಿ ಪ್ರವರ್ಗಕ್ಕೆ ಸೇರಿಸಬೇಕು. ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಘೋಷಣೆ ಮಾಡಬೇಕು ಸೇರಿದಂತೆ 12 ಬೇಡಿಕೆಗಳನ್ನು ಕರ್ನಾಟಕ ಸರಕಾರ ಪರಿಗಣಿಸಬೇಕು ಎಂದು ಬಂಟರ ಯಾನೆ ನಾಡವರ ಸಂಘದ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಆಗ್ರಹಿಸಿದ್ದಾರೆ.

ನಗರದ ಬಂಟ್ಸ್ ಹಾಸ್ಟೆಲಿನ ಅಮೃತೋತ್ಸವ ಕಟ್ಟಡದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ನಾವು ಲಿಂಗಾಯತರು, ಬಿಲ್ಲವರು ನಿಗಮ ಕೇಳಿದರು ಅಂತ ಕೇಳುತ್ತಿಲ್ಲ. ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಬಂಟರು ಮೇಲ್ನೋಟಕ್ಕೆ ಉಳ್ಳವರಂತೆ ಕಾಣಬಹುದು. ಆದರೆ ಬಂಟರಲ್ಲಿಯೂ 40 ಶೇಕಡಾ ಜನ ಬಡವರಾಗಿದ್ದಾರೆ. ಹೀಗಾಗಿ ಸರಕಾರ ಎಲ್ಲ ಸಮುದಾಯಕ್ಕೂ ನಿಗಮ, ಮೀಸಲಾತಿ ಕೊಡುತ್ತಿರುವಾಗ ನಾವು ಸುಮ್ಮನಿರಲು ಸಾಧ್ಯವಾಗದು. ನಾವು 1960ರಿಂದಲೂ ಮೀಸಲಾತಿ ಕೇಳುತ್ತಿದ್ದೇವೆ. ಪ್ರತಿ ಬಾರಿಯೂ ಸರಕಾರಕ್ಕೆ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಮನವಿ ನೀಡುತ್ತಾ ಬಂದಿದ್ದೇವೆ. ಆದರೆ ರಾಜ್ಯ ಸರಕಾರ ನಮ್ಮ ಮನವಿಯನ್ನು ಪರಿಗಣಿಸಿಲ್ಲ ಎಂದರು.

ಹಾಗಂತ, ನಾವು ಯಾರಲ್ಲೂ ಬೇಡಲು ಹೋಗಿಲ್ಲ. ಬೇಡುವುದು ನಮ್ಮ ಜಾಯಮಾನ ಅಲ್ಲ. ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಿರ್ಲಕ್ಷ್ಯಕ್ಕೊಳಗಾದವರಿಗೆ ಧ್ವನಿಯಾಗಲು ಮುಂದೆ ಬಂದಿದ್ದೇವೆ. ಬಂಟ ಸಮುದಾಯದ ಬಗ್ಗೆ ಅಧ್ಯಯನ ನಡೆಸಿ, ವರದಿಯನ್ನು ಕೊಟ್ಟಿದ್ದೇವೆ. ಆ ಪ್ರಕಾರ, 1956ರಿಂದ 2004ರ ವರೆಗಿನ ಅಂಕಿ ಅಂಶದಲ್ಲಿ ಬಂಟರು ಸರಕಾರ ಮತ್ತು ಅದಕ್ಕೆ ಸಂಬಂಧಪಟ್ಟ ಉದ್ಯೋಗದಿಂದ 80 ಶೇಕಡಾ ಕಡಿತವಾಗಿರುವುದು ಕಂಡುಬಂದಿದೆ. ಇದಕ್ಕಾಗಿ ಮೀಸಲಾತಿ ಪ್ರವರ್ಗವನ್ನು ಉತ್ತರ ಕನ್ನಡದಲ್ಲಿ ನಾಡವರನ್ನು 2ಎಗೆ ಒಳಪಡಿಸಿದಂತೆ, ಬಂಟರನ್ನೂ ಈಗ ಪ್ರವರ್ಗ 3ಬಿಯಲ್ಲಿದ್ದು, ಅದನ್ನು 2ಎಗೆ ಒಳಪಡಿಸಬೇಕು. ಬಂಟರ ಹಿಂದುಳಿದ ವರ್ಗಕ್ಕೆ ಆಸರೆಯಾಗಲು ಅಭಿವೃದ್ಧಿ ನಿಗಮ ಸ್ಥಾಪನೆಯಾಗಬೇಕು ಎಂದು ಹೇಳಿದರು.

ಅಲ್ಲದೆ, ಮಂಗಳೂರು ವಿವಿಯಲ್ಲಿ ಬಂಟರ ಯಾನೆ ನಾಡವರ ಸಮಾಜ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕು. ಎಬಿ ಶೆಟ್ಟಿ ವೃತ್ತವನ್ನು ಅದೇ ಜಾಗದಲ್ಲಿ ನಿರ್ಮಾಣ ಮಾಡಬೇಕು. ಕಳೆದ ಬಾರಿ ನಾವು ಎಬಿ ಶೆಟ್ಟಿ ವೃತ್ತ ತೆಗೆದಿದ್ದನ್ನು ಆಕ್ಷೇಪಿಸಿದಾಗ, ಮುಖ್ಯಮಂತ್ರಿ, ಸಂಸದರು ಆದಿಯಾಗಿ ಪತ್ರ ಬರೆದಿದ್ದರು. ಆದರೆ ಯಾವುದೇ ಭರವಸೆ ಈಡೇರಿಲ್ಲ. ಆನಂತರ, ಎಬಿ ಶೆಟ್ಟಿಯವರ ಹೆಸರಿನ ಬೋರ್ಡನ್ನು ಎಲ್ಲಿಯೂ ಮೂಲೆಯಲ್ಲಿ ಹಾಕಲು ಪ್ರಯತ್ನ ಪಟ್ಟಿದ್ದಾರೆ. ಎಬಿ ಶೆಟ್ಟಿ ಬಂಟ ಸಮುದಾಯದ ಸಾಧಕರಾಗಿದ್ದು, ವಿಜಯಾ ಬ್ಯಾಂಕ್ ಸೇರಿದಂತೆ ಹಲವು ಉದ್ಯಮಗಳನ್ನು ಸ್ಥಾಪಿಸಿದವರು. ವಿಜಯಾ ಬ್ಯಾಂಕನ್ನಂತೂ ಮುಗಿಸಿದ್ದಾರೆ. ಎಬಿ ಶೆಟ್ಟಿ ಹೆಸರನ್ನು ಈಗ ನಾಯಿ, ಹಂದಿಗಳು ಮಲಗುವ ಜಾಗದಲ್ಲಿ ಹಾಕುವುದು ಬೇಡ ಎಂದು ಮಾರ್ಮಿಕವಾಗಿ ಹೇಳಿದರು ಮಾಲಾಡಿ.

ಭಾರತ ಜಾತ್ಯತೀತ ದೇಶ. ಆದರೆ, ನಾನು ಹೇಳೋದು ಅಂದ್ರೆ ಜಾತಿ ಅತಿಯಾದ ದೇಶ. ಜಾತಿ ಇಲ್ಲದೆ ಯಾವುದೇ ವ್ಯವಸ್ಥೆ ಇಲ್ಲ. ಎಲ್ಲ ಜಾತಿಯನ್ನೂ ತೆಗೆದು ಹಾಕಿದರೆ, ನಾವು ಅದಕ್ಕೆ ಬೆಂಬಲಿಸುತ್ತೇವೆ. ಜಾತಿ ಆಧಾರಿತ ವ್ಯವಸ್ಥೆಯೇ ಇರಬಾರದು. ನಾವು ಜಾತಿಯ ಪರವಾಗಿ ಕೇಳುತ್ತಿಲ್ಲ. ಬೇರೆಯವರಿಗೆ ಕೊಟ್ಟಿದ್ದಾರೆಂದು ಆಕ್ಷೇಪಿಸುವುದೂ ಇಲ್ಲ. ನಮ್ಮ ಬಂಟರ ಸಂಘದ ವಿದ್ಯಾರ್ಥಿ ನಿಲಯದಲ್ಲಿ 70 ಶೇಕಡಾ ಜನ ಹೊರಗಿನವರೇ ಇದ್ದಾರೆ. ಇವತ್ತಿಗೂ ಬೆಳ್ತಂಗಡಿ, ಬಂಟ್ವಾಳ ಕಡೆಯಲ್ಲಿ ಬಂಟ ಸಮುದಾಯದ ಜನರು ತೀರ ಹಿಂದುಳಿದಿದ್ದಾರೆ. ರೋಗ ರುಜಿನ, ಮನೆ ಕಟ್ಟುವುದಕ್ಕಾಗಿ ದಿನವೂ ಬಂಟರ ಸಂಘಕ್ಕೆ ಪತ್ರಗಳು ಬರುತ್ತಿವೆ. ನಾವು ಇದನ್ನು ಈಡೇರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಇನ್ಶೂರೆನ್ಸ್ ನೀಡಬೇಕು. ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ವಿದ್ಯಾವಂತ ನಿರುದ್ಯೋಗಿಗಳಿಗೆ ಮಾಸಿಕ 5 ಸಾವಿರ ನೀಡಬೇಕು. ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ಅಜಿತ್ ಕುಮಾರ್ ರೈ ಆಗ್ರಹಿಸಿದರು.

ಚುನಾವಣೆ ಘೋಷಣೆ ಮೊದಲು ಏನೂ ಆಗಿಲ್ಲ ಅಂದರೆ ಏನು ಮಾಡುತ್ತೀರಿ, ಕಳೆದ ಬಾರಿ ಒಕ್ಕೂಟದ ಹರೀಶ್ ಶೆಟ್ಟಿ ಬಂಟ್ಸ್ ಸಂಘದಿಂದಲೂ ಅಭ್ಯರ್ಥಿ ಇಳಿಸಲು ಗೊತ್ತು ಎಂದಿದ್ದರು ಎಂದು ಕೇಳಿದ ಪ್ರಶ್ನೆಗೆ, ಅವರು ಹಾಗೆ ಹೇಳಿರಬಹುದು. ನಾವು ಹಾಗೆ ಹೇಳುವುದಿಲ್ಲ. ನಾವು ಥ್ರೆಟ್ ಮಾಡುವುದಿಲ್ಲ. ಜನ ಪ್ರಬುದ್ಧರಿದ್ದಾರೆ. ಯಾರೆಗೆ ಬೇಕಾದರೂ ಓಟ್ ಮಾಡಬಹುದು ಎಂದರು. ಸಂಪಿಗೇಡಿ ಸಂಜೀವ ಶೆಟ್ಟಿ, ಸಿಎಂ ರಾಮಮೋಹನ ರೈ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

The Bunt community should be dropped from the present category 3(B) and must be added to category 2(A), demanded  Buntara yane Nadavara Matru Sangha President Ajith Kumar Rai Maladi. The AB Shetty Circle should be constructed at its original place and must be bigger and beautiful, free health insurance must be provided to the BPL card holders of the community and their children, Rai demanded.