ಪಂಪ್ವೆಲ್ ಮೇಲ್ಸೇತುವೆ ರಸ್ತೆಯಲ್ಲಿ ಉಬ್ಬು, ತಗ್ಗು, ಕುಸಿತ ; ಅಪಘಾತಕ್ಕೆ ಆಸ್ಪದ ಕೊಡುತ್ತಿದ್ದ ಜಾಗಕ್ಕೆ ತುರ್ತು ಡಾಮರು

22-03-23 03:26 pm       Mangaluru Correspondent   ಕರಾವಳಿ

ನಗರದ ಪಂಪ್ವೆಲ್ ಮೇಲ್ಸೇತುವೆಯ ಒಂದು ಭಾಗದಲ್ಲಿ ರಸ್ತೆ ಕುಗ್ಗುತ್ತಾ ಹೋಗಿದ್ದರಿಂದ ಹೆದ್ದಾರಿ ಇಲಾಖೆಯಿಂದ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬುಧವಾರ ಮಧ್ಯಾಹ್ನ ಎಕ್ಕೂರು ಕಡೆಯಿಂದ ಮೇಲ್ಸೇತುವೆಗೆ ಎಂಟ್ರಿ ಕೊಡುವಲ್ಲಿ ರಸ್ತೆಯನ್ನು ಬ್ಲಾಕ್ ಮಾಡಿಸಿ ಹೆಚ್ಚುವರಿಯಾಗಿ ಡಾಮರು ಹಾಕಲಾಗಿದೆ.

ಮಂಗಳೂರು, ಮಾ.22: ನಗರದ ಪಂಪ್ವೆಲ್ ಮೇಲ್ಸೇತುವೆಯ ಒಂದು ಭಾಗದಲ್ಲಿ ರಸ್ತೆ ಕುಗ್ಗುತ್ತಾ ಹೋಗಿದ್ದರಿಂದ ಹೆದ್ದಾರಿ ಇಲಾಖೆಯಿಂದ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬುಧವಾರ ಮಧ್ಯಾಹ್ನ ಎಕ್ಕೂರು ಕಡೆಯಿಂದ ಮೇಲ್ಸೇತುವೆಗೆ ಎಂಟ್ರಿ ಕೊಡುವಲ್ಲಿ ರಸ್ತೆಯನ್ನು ಬ್ಲಾಕ್ ಮಾಡಿಸಿ ಹೆಚ್ಚುವರಿಯಾಗಿ ಡಾಮರು ಹಾಕಲಾಗಿದೆ.

ನಂತೂರಿನಿಂದ ಮೇಲ್ಸೇತುವೆ ಕಳೆದು ಇಂಡಿಯಾನ ಆಸ್ಪತ್ರೆಯ ಮುಂಭಾಗದ ಪ್ರದೇಶದಲ್ಲಿ ರಸ್ತೆಯ ತಳಪಾಯ ಕುಸಿದಿದ್ದು, ಕುಗ್ಗುತ್ತಾ ಹೋಗಿತ್ತು. ಇದರಿಂದಾಗಿ ಮಳೆ ನೀರು ನಿಲ್ಲುವುದು ಒಂದೆಡೆಯಾದರೆ, ವೇಗದಲ್ಲಿ ಬರುತ್ತಿದ್ದ ವಾಹನಗಳು ಅಲ್ಲಿ ಕುಸಿತದಿಂದಾಗಿ ಉಂಟಾಗಿದ್ದ ಕೃತಕ ಹಂಪ್ಸ್ ನಿಂದ ಅಪಘಾತಕ್ಕೆ ಕಾರಣವಾಗುತ್ತಿತ್ತು. ಹೀಗಾಗಿ ರಸ್ತೆಯ ಎರಡೂ ಭಾಗದಲ್ಲಿ ರಸ್ತೆಯನ್ನು ಮತ್ತೊಮ್ಮೆ ಡಾಮರು ಹಾಕಿಸಿ ಎತ್ತರಿಸಿದ್ದಾರೆ.

ರಸ್ತೆಯ ತಳಪಾಯದ ಕೆಲಸ ಸರಿಯಾಗಿ ಆಗದೇ ಇರುವುದು ಈ ರೀತಿ ಕುಸಿಯಲು ಕಾರಣ. ಕಳಪೆ ಕಾಮಗಾರಿ, ಪಂಪ್ವೆಲ್ ಸೇತುವೆಯ ಕೆಲಸ ವಿಳಂಬವಾಗಿದ್ದಕ್ಕೆ ವಿರೋಧಿ ಕೂಗೆದ್ದಿದ್ದರಿಂದ ಎರಡು ವರ್ಷಗಳ ಹಿಂದೆ ತುರ್ತಾಗಿ ಬಿಟ್ಟು ಕೊಡಲಾಗಿತ್ತು. ಈಗ ಎರಡೇ ವರ್ಷದಲ್ಲಿ ರಸ್ತೆಯ ಭಾಗ ಕುಸಿದು ನಿಂತಿದ್ದು ಅಲ್ಲಿ ಡಾಮರು ಹಾಕಿ ಎತ್ತರಿಸಲಾಗಿದೆ. ರಸ್ತೆಯ ಉದ್ದಕ್ಕೂ ಆ ರೀತಿಯ ಉಬ್ಬು ತಗ್ಗುಗಳಿದ್ದು, ವಾಹನ ಸವಾರಿ ಸಂದರ್ಭ ಇದು ಅನುಭವಕ್ಕೆ ಬರುತ್ತದೆ. ಕಾಮಗಾರಿ ಸಲುವಾಗಿ ಮೇಲ್ಸೇತುವೆಯಲ್ಲಿ ವಾಹನಗಳನ್ನು ತಡೆದಿದ್ದರಿಂದ ಸರ್ವಿಸ್ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. 

Road collapses at Pumpwell bridge in Mangalore, vehicles diverted to the service road