ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತನಿಗೆ ಮನೆ ನವೀಕರಣ ; ಯುಗಾದಿಯಂದೇ ಮನೆ ಹಸ್ತಾಂತರ, ಬಡಪಾಯಿ ವ್ಯಕ್ತಿಗೆ ಇನ್ನೂ ಸಿಗದ ಪರಿಹಾರ, ಮರತೇ ಬಿಟ್ಟ ಸರ್ಕಾರ !

22-03-23 05:39 pm       Mangalore Correspondent   ಕರಾವಳಿ

ಕುಕ್ಕರ್ ಬಾಂಬ್ ಸ್ಫೋಟ ಘಟನೆಯಲ್ಲಿ ಸುಟ್ಟ ಗಾಯಗೊಂಡಿದ್ದ ಆಟೋ ಚಾಲಕ ಪುರುಷೋತ್ತಮ ಪೂಜಾರಿಗೆ ಬಿಲ್ಲವ ಮುಖಂಡರ ನೇತೃತ್ವದ ಗುರು ಬೆಳದಿಂಗಳು ಫೌಂಡೇಶನ್ ಆಸರೆಯಾಗಿದೆ.

ಮಂಗಳೂರು, ಮಾ.22: ಕುಕ್ಕರ್ ಬಾಂಬ್ ಸ್ಫೋಟ ಘಟನೆಯಲ್ಲಿ ಸುಟ್ಟ ಗಾಯಗೊಂಡಿದ್ದ ಆಟೋ ಚಾಲಕ ಪುರುಷೋತ್ತಮ ಪೂಜಾರಿಗೆ ಬಿಲ್ಲವ ಮುಖಂಡರ ನೇತೃತ್ವದ ಗುರು ಬೆಳದಿಂಗಳು ಫೌಂಡೇಶನ್ ಆಸರೆಯಾಗಿದೆ. ಮಗಳ ಮದುವೆಯ ಚಿಂತೆ, ಕುಸಿದು ಬೀಳುವ ಆತಂಕದಲ್ಲಿದ್ದ ಮನೆ. ಇದರಿಂದ ತೀವ್ರ ಚಿಂತೆಗೀಡಾಗಿದ್ದ ಪುರುಷೋತ್ತಮ ಪೂಜಾರಿ ಜೊತೆಗೆ ಗಟ್ಟಿಯಾಗಿ ನಿಂತ ಫೌಂಡೇಶನ್, ಈಗ ಹಳೆ ಮನೆಯನ್ನು ಸಂಪೂರ್ಣ ನವೀಕರಣಗೊಳಿಸಿ ಯುಗಾದಿಯ ಶುಭ ದಿನದಂದೇ ಕುಟುಂಬಕ್ಕೆ ಬಿಟ್ಟು ಕೊಟ್ಟಿದೆ.

ಪುರುಷೋತ್ತಮ ಪೂಜಾರಿ ಮನೆಯಂಗಳದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ ಮತ್ತು ಜೆಪ್ಪು ಸೈಂಟ್ ಅಂಥೋನಿ ವೃದ್ಧಾಶ್ರಮದ ಡೈರೆಕ್ಟರ್ ಜೆಬಿ ಕ್ರಾಸ್ತಾ ಮನೆಯನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ. ಗುರು ಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ರಾಮಯ್ಯ ಸೇರಿದಂತೆ ಟ್ರಸ್ಟ್ ಸದಸ್ಯರು, ರೋಹಣ್ ನಿರ್ಮಾಣ ಸಂಸ್ಥೆಯ ಮಾಲೀಕ ರೋಹಣ್ ಮೊಂತೇರೊ, ಇಂಡಿಯಾನ ಆಸ್ಪತ್ರೆಯ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ, ಕುದ್ರೋಳಿ ದೇವಸ್ಥಾನದ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ ಮತ್ತಿತರರಿದ್ದರು.

ಕಳೆದ ನವೆಂಬರ್ 19ರಂದು ಸಂಜೆ 5 ಗಂಟೆ ಸುಮಾರಿಗೆ ನಾಗುರಿಯಿಂದ ಪಂಪ್ವೆಲ್ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾ ಹತ್ತಿದ್ದ ಮಹಮ್ಮದ್ ಶಾರೀಕ್ ಹಿಡಿದುಕೊಂಡಿದ್ದ ಕುಕ್ಕರ್ ಬ್ಲಾಸ್ಟ್ ಆಗಿತ್ತು. ಆಟೋ ಚಾಲಕರಾಗಿದ್ದ ಪುರುಷೋತ್ತಮ ಪೂಜಾರಿ ತಲೆ, ಮುಖ, ಕುತ್ತಿಗೆಯ ಭಾಗ, ಕೈಗಳು ಪೂರ್ತಿ ಸುಟ್ಟು ಹೋಗಿದ್ದವು. ಶಾರೀಕ್ ಕೂಡ ಸುಟ್ಟ ಗಾಯಗಳಿಂದ ಗಾಯಗೊಂಡಿದ್ದ. ಮಗಳ ಮದುವೆಯ ಚಿಂತೆಯಲ್ಲಿ ಹಣಕ್ಕಾಗಿ ರಾತ್ರಿ ಹಗಲೆನ್ನದೆ ಆಟೋದಲ್ಲಿ ದುಡಿಯುತ್ತಿದ್ದ ಪುರುಷೋತ್ತಮ ಪೂಜಾರಿ ಹಠಾತ್ ಆಸ್ಪತ್ರೆ ಸೇರಿದ್ದರಿಂದ ಇಡೀ ಕುಟುಂಬವೇ ದಿಕ್ಕೆಟ್ಟು ಹೋಗಿತ್ತು.

ಅರೆಬರೆ ಸುಟ್ಟು ಹೋಗಿದ್ದ ಪುರುಷೋತ್ತಮ ಪೂಜಾರಿಗೆ ಬದುಕುವ ಭರವಸೆಯೇ ಇರಲಿಲ್ಲ. ಸಚಿವರು, ಶಾಸಕರು ಪರಿಹಾರದ ಭರವಸೆ ಇತ್ತರೂ, ಅವರ ಜೊತೆಗೆ ಗಟ್ಟಿಯಾಗಿ ನಿಂತಿದ್ದು ಬಿಲ್ಲವ ಮುಖಂಡರ ನೇತೃತ್ವದ ಗುರು ಬೆಳದಿಂಗಳು ಫೌಂಡೇಶನ್. ಒಂದೆಡೆ ಮಗಳ ಮದುವೆಯ ಚಿಂತೆ, ಬೀಳುವ ಸ್ಥಿತಿಯಲ್ಲಿದ್ದ ಹಳೆಯ ಮನೆಯ ಕುರಿತು ಚಿಂತಿಸಿಯೇ ಪುರುಷೋತ್ತಮ ಪೂಜಾರಿ ಕುಸಿದು ಹೋಗಿದ್ದರು. ಆದರೆ, ನಾಲ್ಕೇ ತಿಂಗಳಲ್ಲಿ ಬಿಲ್ಲವ ಮುಖಂಡರು ಆರು ಲಕ್ಷ ವೆಚ್ಚದಲ್ಲಿ ಮನೆಯನ್ನು ನವೀಕರಣಗೊಳಿಸಿದ್ದಾರೆ. ಯುಗಾದಿಯ ಶುಭ ದಿನದಂದೇ ಪುರುಷೋತ್ತಮ ಪುಜಾರಿಗೆ ಹೊಸ ಮನೆಯನ್ನು ಹಸ್ತಾಂತರಿಸಿದ್ದಾರೆ.

ಸರಳ ಕಾರ್ಯಕ್ರಮದಲ್ಲಿ ಪುರುಷೋತ್ತಮ ಪೂಜಾರಿಗೆ ಮನೆ ಹಸ್ತಾಂತರಗೊಂಡರೂ, ಸರಕಾರದಿಂದ ಚಿಕ್ಕಾಸಿನ ಪರಿಹಾರ ಇನ್ನೂ ಸಿಕ್ಕಿಲ್ಲ ಎಂಬ ಕೊರಗು ಕುಟುಂಬಕ್ಕಿದೆ. ಚಿಕಿತ್ಸಾ ವೆಚ್ಚ ಎಂಟು ಲಕ್ಷ ಆಗಿದ್ದು, ಅದನ್ನು ಮಗಳ ಇಎಸ್ಐ ಸೌಲಭ್ಯದಿಂದ ಭರಿಸಲಾಗಿದೆ. ಇನ್ನೂ ಎರಡು ಲಕ್ಷ ಆಸ್ಪತ್ರೆ ಬಿಲ್ ಕೊಡಲಿಕ್ಕಿದೆ. ಸರ್ಕಾರದಿಂದ ಪರಿಹಾರದ ಭರವಸೆ ನೀಡಿದ್ದರೂ, ಈವರೆಗೂ ಬಂದಿಲ್ಲ. ದಿನವೂ ಫಿಸಿಯೋಥೆರಪಿ ಮತ್ತು ಔಷಧಿಗೆಂದು ಪ್ರತ್ಯೇಕ ವೆಚ್ಚ ಆಗುತ್ತಿದೆ. ಶಾಸಕರು ಆಟೋ ರಿಕ್ಷಾ ಕೊಡಿಸಿದ್ದಾರೆ. ಸಚಿವರು, ಶಾಸಕರು ವೈಯಕ್ತಿಕ ಪರಿಹಾರ ನೀಡಿದ್ದಾರೆ. ಅದು ಬಿಟ್ಟರೆ ಸರಕಾರದಿಂದ ಆಸ್ಪತ್ರೆ ಬಿಲ್ ಕೊಡುತ್ತೇವೆ ಎಂದಿದ್ದರೂ, ಅದು ಈಡೇರಿಲ್ಲ ಎಂದು ಪುರುಷೋತ್ತಮ ಪೂಜಾರಿ ಅಳಲು ತೋಡಿಕೊಂಡಿದ್ದಾರೆ.

ಇದೇ ವೇಳೆ, ಮಾತನಾಡಿದ ಪದ್ಮರಾಜ್ ರಾಮಯ್ಯ, ಬಾಂಬ್ ಸ್ಫೋಟದಲ್ಲಿ ಅಮಾಯಕ ಸಂತ್ರಸ್ತನಾಗಿರುವ ವ್ಯಕ್ತಿಗೆ ನಾಲ್ಕೈದು ತಿಂಗಳು ಕಳೆದರೂ ಪರಿಹಾರ ಕೊಡಿಸಿಲ್ಲ ಎಂದರೆ ನಾಚಿಕೆಗೇಡು. ಆಸ್ಪತ್ರೆ ಬಿಲ್ ಕೊಡಿಸುವ ಬಗ್ಗೆ ಜಿಲ್ಲಾಡಳಿತದಿಂದ ಆದೇಶ ಪತ್ರ ಕೊಟ್ಟಿದ್ದರು. ಆನಂತರ, ಇಎಸ್ಐ ಸೌಲಭ್ಯಕ್ಕಿಂತ ಹೆಚ್ಚು ಖರ್ಚಾದರೆ, ಅದನ್ನು ಜಿಲ್ಲಾಡಳಿತದಿಂದ ಕೊಡಿಸುತ್ತೇವೆ ಎಂದು ಮಗಳಿಗೆ ತಿಳಿಸಿದ್ದಾರೆ. ಇದು ಯಾವ ರೀತಿಯ ನ್ಯಾಯ. ಬಾಂಬ್ ಸ್ಫೋಟದ ಸಂತ್ರಸ್ತನಿಗೆ ಪರಿಹಾರ ಕೊಡಲು ಗೋಗರೆಯುವ ಅಗತ್ಯ ಬಂದಿದೆಯೇ. ಸರಕಾರದ ನಿಯಮದ ಪ್ರಕಾರವೇ ಪರಿಹಾರ ಕೊಡಬೇಕಾಗುತ್ತದೆ ಎಂದು ಹೇಳಿದರು.

On the auspicious day of Ugadi, the Gurubeladingalu Foundation under the initiative of Padmaraj R along with other dignitaries handed over the renovated house to cooker blast victim and auto rickshaw driver Purushotham Poojary. "Irrespective of caste and religion, they are striving for a noble cause. As harmony is declining in society, social works undertaken by Gurubeladingalu are very needful. We should remember that we are all one. Only then, we can lead a peaceful life and there will be peace in the society,” he said.