ಆಧಾರ್ - ಪಾನ್ ಲಿಂಕ್ ನೆಪದಲ್ಲಿ ಕೇಂದ್ರ ಸರ್ಕಾರದಿಂದ ಆನ್ಲೈನ್ ದರೋಡೆ ; ಮಾರ್ಚ್ ಒಳಗೆ ಒಂದು ಸಾವಿರ ದಂಡ ತೆತ್ತು ಆಧಾರ್ ಲಿಂಕ್, ಆಗದೇ ಇದ್ದಲ್ಲಿ ಹತ್ತು ಸಾವಿರ ದಂಡ ! 

22-03-23 08:12 pm       Mangalore Correspondent   ಕರಾವಳಿ

ಪಾನ್ ಕಾರ್ಡ್‍ನೊಂದಿಗೆ ಆಧಾರ್ ಜೋಡಿಸುವ ನೆಪದಲ್ಲಿ ಆದಾಯ ತೆರಿಗೆ ಇಲಾಖೆ ಜನಸಾಮಾನ್ಯರನ್ನು ಲೂಟಿ ಮಾಡಲು ಆರಂಭಿಸಿದೆ.

ಮಂಗಳೂರು, ಮಾ.22 : ಪಾನ್ ಕಾರ್ಡ್‍ನೊಂದಿಗೆ ಆಧಾರ್ ಜೋಡಿಸುವ ನೆಪದಲ್ಲಿ ಆದಾಯ ತೆರಿಗೆ ಇಲಾಖೆ ಜನಸಾಮಾನ್ಯರನ್ನು ಲೂಟಿ ಮಾಡಲು ಆರಂಭಿಸಿದೆ. ಪಾನ್ - ಆಧಾರ್ ಲಿಂಕ್ ಮಾಡದವರಿಗೆ ದುಬಾರಿ ದಂಡ ವಿಧಿಸುತ್ತಿದ್ದು ಇದೊಂದು ಕೇಂದ್ರ ಸರ್ಕಾರದ ಆನ್ಲೈನ್ ದರೋಡೆ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ದ.ಕ ಮತ್ತು ಉಡುಪಿ ಜಿಲ್ಲಾ ಸಮಿತಿ ಹೇಳಿದೆ. 

ಕಳೆದ 2-3 ವರ್ಷಗಳಿಂದ ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಉಚಿತ ಅವಕಾಶವಿತ್ತು. 2022ರ ಜೂನ್ ತಿಂಗಳಿನಲ್ಲಿ ರೂಪಾಯಿ ಐನೂರು ಪಾವತಿಸಿ ಜೋಡಿಸಬೇಕಾಗಿತ್ತು. ಇದೀಗ 2023 ಮಾರ್ಚ್ ತಿಂಗಳ ಅಂತ್ಯದ ಒಳಗೆ ರೂ.1000 ದಂಡ ಪಾವತಿಸಬೇಕು. ತದನಂತರ ರೂ.10,000 ದಂಡ ಕಟ್ಟಿ ಪಾನ್ - ಆಧಾರ್ ಲಿಂಕ್ ಮಾಡಿಸಬೇಕು. ಇಲ್ಲದಿದ್ದರೆ ತಮ್ಮ ಪಾನ್ ನಂಬ್ರವನ್ನು ರದ್ದುಗೊಳಿಸಲಾಗುತ್ತದೆ ಹಾಗೂ ಇತರ ಕಾನೂನು ಕ್ರಮಗಳನ್ನು ವಿಧಿಸಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಕ ಕೇಂದ್ರ ಹಣಕಾಸು ಇಲಾಖೆ ಹೇಳಿದೆ. ಇದು ಸ್ವಲ್ಪವೂ ಲಜ್ಜೆಯಿಲ್ಲದೆ ಜನರನ್ನು ಆನ್ಲೈನ್ ದರೋಡೆ ಮಾಡುತ್ತಿರುವ ಕೇಂದ್ರ ಸರಕಾರದ ನಡೆಯಾಗಿದ್ದು ಆದಾಯ ಇಲಾಖೆಯ ಈ ನೀತಿಯನ್ನು ಎಐಟಿಯುಸಿ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿ ಖಂಡಿಸಿದೆ. 

ಆದಾಯ ಇಲಾಖೆಯ ಈ ಹೇರಿಕೆಯ ಬಗ್ಗೆ ಮಂಗಳೂರಿನ ಆದಾಯ ಇಲಾಖೆಯ ಮುಖ್ಯಸ್ಥರಿಂದ ಮಾಹಿತಿ ಪಡೆದ ವೇಳೆ ಎಐಟಿಯುಸಿ ನಿಯೋಗಕ್ಕೆ ಈ ಕೆಳಗಿನಂತೆ ಮಾಹಿತಿ ಲಭಿಸಿದೆ. ದಿನಾಂಕ 01.07.2017ರಿಂದ ಪಾನ್ ಮಾಡಿಸಿದ ಶೇಕಡಾ 99 ನಾಗರಿಕರ ಪಾನ್ ನಂಬ್ರಕ್ಕೆ ಆಧಾರ್ ನಂಬ್ರ ಜೋಡಣೆಯಾಗಿರುತ್ತದೆ. ಆದರೆ ಈ ದಿನಾಂಕಕ್ಕೆ ಮೊದಲು ಪಾನ್ ಮಾಡಿಸಿರುವ ಶೇಕಡಾ 99 ಜನರ ಪಾನ್ ಆಧಾರ್ ನೊಂದಿಗೆ ಜೋಡಣೆ ಆಗಿರುವುದಿಲ್ಲ. ಆದಾಯ ತೆರಿಗೆ ಪಾವತಿಸುತ್ತಿರುವವರು ಈಗಾಗಲೇ ತಮ್ಮ ಪಾನ್ ವಿವರವನ್ನು ಆಧಾರ್ ನೊಂದಿಗೆ ಜೋಡಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. 

ಆದರೆ ಈ ಜೋಡಣಾ ಉದ್ದೇಶದ ಬಗ್ಗೆಯಾಗಲೀ, ಇದರ ಪ್ರಕ್ರಿಯೆಗಳ ಬಗ್ಗೆಯಾಗಲೀ ಸೂಕ್ತ ಮಾಹಿತಿಯನ್ನು ಜನಸಾಮಾನ್ಯರಿಗೆ ಇಲಾಖೆ ನೀಡುತ್ತಿಲ್ಲ. ತಮ್ಮ ಇತರ ದಾಖಲೆಗಳನ್ನು ಸರಿಪಡಿಸಲು ಪಾನ್ ಕಾರ್ಡ್ ಮಾಡಿಸಿದಂತಹ ಜನಸಾಮಾನ್ಯರು ಸರಿಯಾದ ಮಾಹಿತಿಯಿಲ್ಲದೆ ಸೈಬರ್ ಕೇಂದ್ರಗಳಲ್ಲಿ ಗಂಟೆಗಟ್ಟಲೆ ಕಾಯುತ್ತಿರುವ ಸ್ಥಿತಿ ಶೋಚನೀಯವಾಗಿದೆ. ಈ ಜೋಡಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್ಲೈನ್ ಮೂಲಕವೇ ಮಾಡಬೇಕಾಗಿದೆ. ಈಗ ದಂಡ ಪಾವತಿಸಿದಕ್ಕೆ ಸೂಕ್ತ ರಶೀದಿಯೂ ಲಭಿಸುತ್ತಿಲ್ಲ. ಈ ಮೊದಲೇ ಜೋಡಣೆ ಮಾಡಿದವರಿಗೆ ಸರಿಯಾದ ಮಾಹಿತಿಯ ಕೊರತೆ ಇದ್ದು ಮತ್ತೆ ಜೋಡಣೆಗಾಗಿ ಅಲೆಯುತ್ತಿರುವುದರಿಂದ ಅಂಥವರು ಮೋಸ ಹೋಗುವ ಸಾಧ್ಯತೆಗಳೇ ಜಾಸ್ತಿ. ಇದು ಆದಾಯ ಇಲಾಖೆಯ ಆನ್ಲೈನ್ ದರೋಡೆಯಾಗಿದೆ. ಕೇಂದ್ರ ಸರಕಾರದ ಪ್ರತಿನಿಧಿಗಳು ಈ ಬಗ್ಗೆ ಜನರಿಗೆ ಸೂಕ್ತ ಉತ್ತರ ನೀಡಬೇಕು ಎಂದು ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಮಂಡಳಿ ಸದಸ್ಯರಾಗಿರುವ ವಿ.ಎಸ್. ಬೇರಿಂಜ ಆಗ್ರಹಿಸಿದ್ದಾರೆ.

Aadhaar-PAN linking: Extend deadline by 6 months, remove charge to tackle touts, Congres slams govt