ಮಂಗಳೂರಿನ ಮೊಟ್ಟಮೊದಲ ಫುಡ್ ಸ್ಟ್ರೀಟ್ ಜನಮನ್ನಣೆ ; ಟ್ರಾಫಿಕ್ ಸಮಸ್ಯೆ ಮಧ್ಯೆಯೂ ತಿನಿಸುಗಳಿಗೆ ಮುಗಿಬಿದ್ದ ಜನ, ಮತ ಭೇದ ಮರೆತು ಉದರಾತಿಥ್ಯ!

27-03-23 10:59 pm       Mangalore Correspondent   ಕರಾವಳಿ

ಮುಂಬೈ, ಬೆಂಗಳೂರು, ಹೈದ್ರಾಬಾದಿನಂತಹ ಮಹಾನಗರಗಳಲ್ಲಿ ಫುಡ್ ಫೆಸ್ಟಿವಲ್, ಸ್ಟ್ರೀಟ್ ಫುಡ್ ಫೆಸ್ಟ್ ಅನ್ನೋದು ಮಾಮೂಲಿ. ಒಂದೊಂದ್ಕಡೆ ವರ್ಷಕ್ಕೆರಡು ಬಾರಿ ಇಂಥ ಫುಡ್ ಫೆಸ್ಟ್ ಆಗುತ್ತಿರುತ್ತದೆ.

ಮಂಗಳೂರು, ಮಾ.27: ಮುಂಬೈ, ಬೆಂಗಳೂರು, ಹೈದ್ರಾಬಾದಿನಂತಹ ಮಹಾನಗರಗಳಲ್ಲಿ ಫುಡ್ ಫೆಸ್ಟಿವಲ್, ಸ್ಟ್ರೀಟ್ ಫುಡ್ ಫೆಸ್ಟ್ ಅನ್ನೋದು ಮಾಮೂಲಿ. ಒಂದೊಂದ್ಕಡೆ ವರ್ಷಕ್ಕೆರಡು ಬಾರಿ ಇಂಥ ಫುಡ್ ಫೆಸ್ಟ್ ಆಗುತ್ತಿರುತ್ತದೆ. ನಿರ್ದಿಷ್ಟ ಪ್ರದೇಶದಲ್ಲಿ ಕೆಲವು ಕಂಪನಿಗಳೇ ಇಂಥ ಫುಡ್ ಫೆಸ್ಟನ್ನು ಆಯೋಜಿಸುತ್ತವೆ. ಆದರೆ ಮಂಗಳೂರಿನಂಥ ನಗರದಲ್ಲಿ ಇದೇ ಮೊದಲ ಬಾರಿ ಫುಡ್ ಫೆಸ್ಟ್ ನಡೆದಿದ್ದು, ಭಾರೀ ಜನಮನ್ನಣೆಯನ್ನೂ ಪಡೆದಿದೆ.

ಮಂಗಳೂರು ಎರಡನೇ ಹಂತದ ನಗರವಾಗಿದ್ದರೂ, ಮೈಸೂರು, ಹುಬ್ಬಳ್ಳಿಗಿಂತ ಹೆಚ್ಚು ವೇಗದಲ್ಲಿ ಮತ್ತು ರಾಜ್ಯದಲ್ಲಿ ಎರಡನೇ ಅತಿದೊಡ್ಡ ನಗರವಾಗಿ ಬೆಳೆಯುತ್ತಿದೆ. ಆದರೆ ಕೋಮು ವೈಷಮ್ಯದ ಘಟನೆಗಳ ಕಾರಣದಿಂದ ಮಂಗಳೂರಿನಲ್ಲಿ ದೊಡ್ಡ ಮಟ್ಟದ ಫೆಸ್ಟ್ ಆಗಲೀ, ಇನ್ನಿತರ ಮನೋರಂಜನಾ ಕಾರ್ಯಕ್ರಮಗಳು ನಡೆದದ್ದಿಲ್ಲ. ಕಾರ್ಯಕ್ರಮ ಆಯೋಜಿಸುವುದಕ್ಕೂ ಕಂಪನಿಗಳು ಹಿಂದೆ ಮುಂದೆ ನೋಡುತ್ತವೆ. ಈ ಬಾರಿ ಬಿಜೆಪಿ ಶಾಸಕರೇ ಆಯೋಜನೆ ಹಿಂದಿರುವುದು ಮತ್ತು ಶಾಸಕ ವೇದವ್ಯಾಸ ಕಾಮತ್ ನೇತೃತ್ವದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಹೆಸರಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಇಂಥವಕ್ಕೆಲ್ಲ ಮೂಗು ತೂರಿಸುತ್ತಿದ್ದ ಬಜರಂಗದಳ ಆಗಲೀ, ಇನ್ನಿತರ ಸಂಘಟನೆಗಳಿಗೆ ಇಲ್ಲಿ ಅವಕಾಶ ಇರಲಿಲ್ಲ.

ತಿಂಡಿ ತಿನಿಸುಗಳಿಗೆ ಮುಗಿಬಿದ್ದ ಜನ

ಮಣ್ಣಗುಡ್ಡದಿಂದ ಲೇಡಿಹಿಲ್- ಲಾಲ್ ಬಾಗ್ ವರೆಗೂ ರಸ್ತೆಯ ಒಂದು ಬದಿಯಲ್ಲಿ ನೂರಕ್ಕೂ ಹೆಚ್ಚು ಸ್ಟಾಲ್ ಗಳನ್ನು ಹಾಕಲಾಗಿತ್ತು. ಕೆಲವು ಸ್ಟಾಲ್ ಗಳಲ್ಲಿ ಕಾಮತ್ ಕೇಟರರ್ಸ್, ಓಷ್ಯನ್ ಪರ್ಲ್ ಥರದ ದೊಡ್ಡ ಸಂಸ್ಥೆಗಳದ್ದು ಫುಡ್ ಐಟಂಗಳಿದ್ದರೆ, ಜನಸಾಮಾನ್ಯರ ಸ್ಟಾಲ್ ಗಳೂ ಇದ್ದವು. ಹೋಮ್ ಮೇಡ್ ತಿನಿಸುಗಳನ್ನು ತಯಾರಿಸಿ ಕೊಡುವುದಕ್ಕೂ ಸ್ಟಾಲ್ ಗಳಿದ್ದವು. ಗೋಲಿ ಸೋಡಾ, ಅವಿಲ್ ಮಿಲ್ಕ್ ಮಾಡಿಕೊಡುತ್ತಿದ್ದ ಸಣ್ಣ ಸ್ಟಾಲ್ ನಲ್ಲಿ ಗ್ರಾಹಕರಿಗೆ ಕೊಡುವುದಕ್ಕೇ ಪುರುಸೊತ್ತು ಇರಲಿಲ್ಲ. ಚಿಕನ್, ಮೀನಿನ ವಿವಿಧ ರೀತಿಯ ಫುಡ್ ಐಟಂಗಳು, ವೆಜ್ ಐಟಂಗಳು ಜನರ ನೆಚ್ಚಿನ ಪಾಯಿಂಟ್ ಆಗಿದ್ದವು. ಕೆಲವೊಬ್ಬರು ಐದು ದಿನಗಳ ಹಬ್ಬದಲ್ಲಿ ಬೇಜಾನ್ ದುಡ್ಡು ಮಾಡಿಕೊಂಡಿದ್ದಾರೆ.

ಫುಡ್ ಸ್ಟ್ರೀಟ್ ಉದ್ದಕ್ಕೂ ಜನಸಾಗರ

ಎಲ್ಲಿ ನೋಡಿದರೂ, ಜನವೋ ಜನ. ಮಂಗಳೂರಿನ ಜನರೆಲ್ಲ ಫುಡ್ ಸ್ಟ್ರೀಟ್ ನೋಡಲು ಬಂದಿದ್ದರೋ ಏನೋ ಅನ್ನುವಂಥ ವಾತಾವರಣ ಉಂಟಾಗಿತ್ತು. ಸಂಜೆ ಆರು ಗಂಟೆಯಿಂದ ರಾತ್ರಿ 10-11ರ ವರೆಗೂ ಜನರು ರಸ್ತೆ ಉದ್ದಕ್ಕೂ ಗಿಜಿ ಗುಟ್ಟಿದ್ದರು. ಮಾ.22ರಿಂದ ಶುರುವಾಗಿ 26ರ ವರೆಗೂ ಪ್ರತಿ ದಿನವೂ ಭಾರೀ ಜನಸ್ತೋಮ ನೆರೆದಿತ್ತು. ಶನಿವಾರ- ಭಾನುವಾರ ಅಂತೂ ಭಾರೀ ಸಂಖ್ಯೆಯಲ್ಲಿ ಜನ ಫುಡ್ ಸ್ಟ್ರೀಟ್ ನೋಡಲು ಬಂದಿದ್ದರು. ಹಾಸ್ಟೆಲ್ ನಲ್ಲಿ ಇರುವ ಬೇರೆ ಬೇರೆ ಊರಿನ ಕಾಲೇಜು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಫ್ಲಾಟ್ ಗಳಲ್ಲಿರುವ ಜನರೆಲ್ಲ ತಿನಿಸುಗಳನ್ನು ಸವಿಯಲು ಬಂದಿದ್ದರು. ಸಾಮಾನ್ಯವಾಗಿ ನಗರ ಭಾಗದ ಜನರಿಗೆ ಮಾಡಿ ತಿನ್ನುವ ಪುರುಸೊತ್ತು ಇರುವುದಿಲ್ಲ. ಜೊತೆಗೆ, ಖಾದ್ಯಗಳನ್ನು ತಯಾರಿಸುವುದಕ್ಕೂ ಗೊತ್ತಿರಲ್ಲ. ಹೊಟೇಲ್ ನಲ್ಲಿ ಇಂಥ ಐಟಂಗಳು ಸಿಕ್ಕರೂ, ಎಲ್ಲ ರೀತಿಯವುಗಳು ಒಂದೇ ಕಡೆ ಸಿಗುವುದು ಕಡಿಮೆ. ಅದಕ್ಕೆ ಅಪವಾದ ಎನ್ನುವಂತಿತ್ತು ಫುಡ್ ಸ್ಟ್ರೀಟ್ ಹಬ್ಬ. ಜನರಿಗೆ ತಮಗೆ ಬೇಕಾದ ತಿನಿಸುಗಳನ್ನು ಬಿಸಿ ಬಿಸಿಯಾಗೇ ತಿನ್ನುವ ಅವಕಾಶಗಳಿದ್ದವು.

ಮತ- ಭೇದ ರಹಿತ ಅಪರೂಪದ ಉತ್ಸವ

ಮಂಗಳೂರಿನಲ್ಲಿ ಶಾರದೋತ್ಸವ, ಗಣೇಶೋತ್ಸವಕ್ಕೆ ಮಾತ್ರ ಬೀದಿಯಲ್ಲಿ ಜನ ಸೇರೋದು. ಅದು ಹಿಂದುಗಳಿಗೆ ಮಾತ್ರ ಅನ್ನುವಂತಿದ್ದರೆ, ಮುಸ್ಲಿಮ್ ಮತ್ತು ಕ್ರಿಸ್ತಿಯನ್ನರಿಗೆ ಅವರ ಹಬ್ಬಗಳಿಂದ ಮಾತ್ರ ಮನರಂಜನೆ. ಫುಡ್ ಸ್ಟ್ರೀಟ್ ಜನರು ಮತ- ಭೇದ ಇಲ್ಲದೆ ಒಂದೆಡೆ ಬೆರೆಯಲು, ವ್ಯಾಪಾರ ಕುದುರಿಸಿಕೊಳ್ಳಲು ಅವಕಾಶ ನೀಡಿತ್ತು. ಇದರಲ್ಲಿ ಎಲ್ಲ ಮತ-ಧರ್ಮೀಯರು ಸ್ಟಾಲ್ ಗಳನ್ನೂ ಹಾಕಿದ್ದರು. ಜೊತೆಗೆ, ಜನರು ಕೂಡ ಎಲ್ಲ ವಯೋಮಾನದ, ಹಾಗೆಯೇ ಎಲ್ಲ ಮತೀಯರೂ ಒಂದೆಡೆ ಕಲೆತು ತಮ್ಮ ಉದರ ತಣಿಸುತ್ತಿದ್ದರು. ಇದರ ಜೊತೆಗೆ ಕಾರ್ಯಕ್ರಮದ ವೇದಿಕೆಯಲ್ಲಿ ಸಿನಿ ಸ್ಟಾರ್ ಗಳು ಬಂದು ಫ್ರೀ ಶೋ ನೀಡುತ್ತಿದ್ದುದೂ ಜನರಿಗೆ ಉಚಿತ ಮನರಂಜನೆ ನೀಡಿತ್ತು.

ಟ್ರಾಫಿಕ್ ಕಿರಿಕಿರಿ ನಡುವೆಯೂ ತಪ್ಪಲಿಲ್ಲ ಜನ  

ಎಲ್ಲ ಓಕೆ, ಟ್ರಾಫಿಕ್ ಜಾಮ್ ಮಾತ್ರ ಜನರಿಗೆ ಕಿರಿ ಕಿರಿ ಅನ್ನಿಸಿದ್ದು ಸುಳ್ಳಲ್ಲ. ಶನಿವಾರ, ಭಾನುವಾರ ಅಂತೂ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಮಣ್ಣಗುಡ್ಡ, ಲಾಲ್ ಬಾಗ್, ಲೇಡಿಹಿಲ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಲಾಲ್ ಬಾಗ್ ಮೂಲಕ ಉರ್ವಾ ಭಾಗಕ್ಕೆ ತೆರಳುವ ಮಂದಿಗೆ ಒಂದಷ್ಟು ತೊಂದರೆಯಾಗಿದೆ. ಲಾಲ್ ಬಾಗ್- ಲೇಡಿಹಿಲ್ ರಸ್ತೆ ಬ್ಲಾಕ್ ಆಗಿದ್ದು ಟ್ರಾಫಿಕ್ ತೊಂದರೆಯಾಗಲು ಕಾರಣ. ಸ್ಟಾಲ್ ಗಳನ್ನು ಲಾಲ್ ಬಾಗ್- ಲೇಡಿಹಿಲ್ ರಸ್ತೆಯ ಬದಲು ಮಣ್ಣಗುಡ್ಡದಲ್ಲೇ ಉದ್ದಕ್ಕೂ ಮಾಡಿರುತ್ತಿದ್ದರೆ ಇಲ್ಲಿನ ಟ್ರಾಫಿಕ್ ತೊಂದರೆ ತಪ್ಪಿಸಬಹುದಿತ್ತು. ಆದರೂ ನೆಹರು ಮೈದಾನ ಅಥವಾ ಬೇರೆ ಕಡೆ ಆಗಿರುತ್ತಿದ್ದರೆ, ಇಡೀ ನಗರದ ಜನರಿಗೆ ಟ್ರಾಫಿಕ್ ಜಾಮ್ ತೊಂದರೆ ಆಗುತ್ತಿತ್ತು. ಇಲ್ಲಿ ಹೆಚ್ಚು ತೊಂದರೆ ಅನುಭವಿಸಿದವರು ಮಣ್ಣಗುಡ್ಡೆ, ಲೇಡಿಹಿಲ್, ಉರ್ವಾ ಕಡೆಯವರು ಮಾತ್ರ. ಅಪರೂಪದ ಕಾರ್ಯಕ್ರಮ ಆಗಿದ್ದರಿಂದ ಟ್ರಾಫಿಕ್ ತೊಂದರೆಯಾದರೂ, ಜನರು ಪೊಲೀಸರ ಜೊತೆಗೆ ಸಹಕರಿಸಿಕೊಂಡು ಸಮಸ್ಯೆ ಆಗದಂತೆ ನೋಡಿಕೊಂಡಿದ್ದು ಪ್ಲಸ್ ಪಾಯಿಂಟ್.

Mangalore Food street, five day street food festival people throng to eat varieties of food amid traffic jam. Organised by Kudla Samskrithika Prathisthana, the venue of the festival will be from Narayana Guru Circle (erstwhile Lady Hill Circle) to Karavali exhibition ground and from Narayana Guru Circle to Mannagudda Gurji Circle.