ಎಸಿ ಮೆಷಿನ್ ಫಿಟ್ ಮಾಡಲು ಹೋಗಿ ದುರಂತ ; ಒಂಬತ್ತನೇ ಮಹಡಿಯಿಂದ ಬಿದ್ದು ಯುವಕ ದಾರುಣ ಸಾವು

29-03-23 07:55 pm       Mangalore Correspondent   ಕರಾವಳಿ

ಹೊಸತಾಗಿ ಎಸಿ ಮೆಷಿನ್ ಫಿಟ್ ಮಾಡುತ್ತಿದ್ದಾಗ ಬಹುಮಹಡಿ ಕಟ್ಟಡದ ಒಂಬತ್ತನೇ ಮಹಡಿಯಿಂದ ಆಯತಪ್ಪಿ ಬಿದ್ದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ನಂತೂರಿನಲ್ಲಿ ನಡೆದಿದೆ.

ಮಂಗಳೂರು, ಮಾ.29 : ಹೊಸತಾಗಿ ಎಸಿ ಮೆಷಿನ್ ಫಿಟ್ ಮಾಡುತ್ತಿದ್ದಾಗ ಬಹುಮಹಡಿ ಕಟ್ಟಡದ ಒಂಬತ್ತನೇ ಮಹಡಿಯಿಂದ ಆಯತಪ್ಪಿ ಬಿದ್ದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ನಂತೂರಿನಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಮಣಿಹಳ್ಳ ನಿವಾಸಿ ವಿನಯ್ ತಾವ್ರೋ(23) ಮೃತ ಯುವಕ. ನಂತೂರಿನ ಹಮಾರಾ ರೆಫ್ರಿಜರೇಟರ್ ಕಂಪನಿಯಲ್ಲಿ ಕೆಲಸಕ್ಕಿದ್ದ ವಿನಯ್, ನಂತೂರಿನ ಮೌಂಟ್ ಟಿಯಾರಾ ಅಪಾರ್ಟ್ಮೆಂಟ್ ನಲ್ಲಿ ಎಸಿ ಮೆಷಿನ್ ಫಿಟ್ ಮಾಡಲು ತೆರಳಿದ್ದ. ಒಂಬತ್ತನೇ ಮಹಡಿಯ ಮನೆಯ ಆವರಣ ಗೋಡೆಯ ಹೊರಭಾಗದಲ್ಲಿ ವಿನಯ್ ಮತ್ತು ಇನ್ನೊಬ್ಬ ಯುವಕ ಮೆಷಿನ್ ಫಿಟ್ ಮಾಡುತ್ತಿದ್ದರು. ಈ ವೇಳೆ, ವಿನಯ್ ಆಯತಪ್ಪಿ ಮಹಡಿಯಿಂದ ಹೊರಕ್ಕೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಯುವಕನ ತಲೆ ಒಡೆದು ರಕ್ತಸ್ರಾವದಿಂದ ಮೃತನಾಗಿದ್ದಾನೆ. 

ಸಂಜೆ 6 ಗಂಟೆ ವೇಳೆಗೆ ಘಟನೆ ನಡೆದಿದೆ. ಸ್ಥಳಕ್ಕೆ ಕದ್ರಿ ಪೊಲೀಸರು ಭೇಟಿ ನೀಡಿದ್ದು ಮೃತನ ಶವವನ್ನು ವೆನ್ಲಾಕ್ ಆಸ್ಪತ್ರೆಗೆ ಒಯ್ದಿದ್ದಾರೆ. ವಿನಯ್ ಇತ್ತೀಚೆಗಷ್ಟೆ ಎಸಿ ಕಂಪನಿಗೆ ಕೆಲಸಕ್ಕೆ ಸೇರಿದ್ದ ಎನ್ನಲಾಗುತ್ತಿದ್ದು ದುರಂತದಿಂದ ಇತರೇ ಸಿಬಂದಿ ಮತ್ತು ಆತನ ಮನೆಯವರು ಶಾಕ್ ಆಗಿದ್ದಾರೆ.

Ac Mehanic falls from 9th floor of Mont Tiara apartment at Nantoor in Mangalore, dies on spot. The deceased has been identified as Vinay Tauro. He had come to service the AC.