ನರಿಂಗಾನ ; ಹೆಜ್ಜೇನು‌ ದಾಳಿ, ಗಂಭೀರ ಸ್ಥಿತಿಯಲ್ಲಿ ಇಬ್ಬರು ಆಸ್ಪತ್ರೆಗೆ ದಾಖಲು, ಕಡಿತ ತಡೆಯದೆ ಬಾವಿಗಿಳಿದು ನೀರಲ್ಲಿ ಅವಿತ 79 ರ ವೃದ್ಧ ! 

30-03-23 01:02 pm       Mangalore Correspondent   ಕರಾವಳಿ

ಹೆಜ್ಜೇನು ದಾಳಿಗೆ ತುತ್ತಾಗಿ ಮೂವರು ಗಾಯಗೊಂಡಿದ್ದು  ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ನಗರದ ಫಾ. ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ ಘಟನೆ ನರಿಂಗಾನ ಗ್ರಾಮದ ಬೋಳದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. 

ಉಳ್ಳಾಲ, ಮಾ.30: ಹೆಜ್ಜೇನು ದಾಳಿಗೆ ತುತ್ತಾಗಿ ಮೂವರು ಗಾಯಗೊಂಡಿದ್ದು  ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ನಗರದ ಫಾ. ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ ಘಟನೆ ನರಿಂಗಾನ ಗ್ರಾಮದ ಬೋಳದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. 

ಉಳ್ಳಾಲ ತಾಲೂಕಿನ ನರಿಂಗಾನ‌ ಗ್ರಾಮದ ಬೋಳ ನಿವಾಸಿ ರಾಬರ್ಟ್ ಕುಟಿನ್ಹ(79), ಅವರ ಪುತ್ರ ರಾಯಲ್ ಕುಟಿನ್ಹ(39) ಹೆಜ್ಜೇನು ದಾಳಿಗೆ ತುತ್ತಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ಸಂದರ್ಭ ಅಣ್ಣನ ಕೂಗು ಕೇಳಿ ಧಾವಿಸಿದ ರಾಬರ್ಟ್ ಕುಟಿನ್ಹ ಅವರ ಸಹೋದರ ಜೋಸೆಫ್ ಕುಟಿನ್ಹ ಅವರಿಗೂ ಗಾಯಗಳಾಗಿದ್ದು ಸದ್ಯ ಚೇತರಿಸಿಕೊಂಡಿದ್ದಾರೆ. ಜೋಸೆಫ್ ಕುಟಿನ್ಹ ಅವರ ಪುತ್ರ ಅಖಿಲ್ ಅವರಿಗೂ ಹೆಜ್ಜೇನು ಕಡಿದಿದೆ.

ರಾಬರ್ಟ್ ಕುಟಿನ್ಹ ಅವರು ಬೆಳಗ್ಗೆ ಒಣಗಿದ ಬಟ್ಟೆ ತೆಗೆಯಲೆಂದು ಮನೆಯ ಮಹಡಿ ಹತ್ತುತ್ತಿದ್ದಾಗ ಇದ್ದಕ್ಕಿದ್ದಂತೆ ಹೆಜ್ಜೇನು ದಾಳಿ ಮಾಡಿದ್ದು ನೋವು ತಡೆಯಲಾರದೆ ಕೂಗಿಕೊಂಡಾಗ ರಕ್ಷಣೆಗೆಂದು ಧಾವಿಸಿದ ಪುತ್ರ ರಾಯಲ್ ಮೇಲೂ ದಾಳಿ ಮಾಡಿದೆ. ಮಗನ‌ ಸಹಾಯದಿಂದ ಮಹಡಿಯಿಂದ ಪವಾಡ ಸದೃಶ ಇಳಿದು ಪಾರಾದರೂ ಅವರಿಬ್ಬರ ಕೂಗು ಕೇಳಿದ ಜೋಸೆಫ್ ಕುಟಿನ್ಹ‌ ಹಾಗೂ ಅಖಿಲ್ ರಕ್ಷಣೆಗೆ ಧಾವಿಸಿದಾಗ ಅವರಿಗೂ ನೊಣಗಳು ಕಡಿದಿವೆ. ರಾಬರ್ಟ್ ಕುಟಿನ್ಹ ಅವರಿಗೆ ಸುಮಾರು ನೂರೈವತ್ತು ಕಡೆ ಗಾಯಗಳಾಗಿದ್ದು ಮಹಡಿಯಿಂದ ಇಳಿದರೂ ಹೆಜ್ಜೇನು ಬೆಂಬಿಡದಾಗ ಬೇರೆ ದಾರಿ‌ ಕಾಣದೆ ಕಟ್ಟ ಕಡೆಗೆ ಸಮೀಪದ ಬಾವಿಗೆ ಇಳಿದು ನೀರಿನಲ್ಲಿ ಮುಳುಗಿ ಸುಮಾರು ಹೊತ್ತಿನ ಬಳಿಕ ಮೇಲೆದ್ದು ಬಂದು ಜೀವ ಉಳಿಸಿಕೊಂಡಿದ್ದಾರೆ. ಪುತ್ರ ರಾಯಲ್ ಗೂ ಸುಮಾರು ಇಪ್ಪತ್ತೆರಡು ಕಡೆ ಗಾಯಗಳಾಗಿದ್ದು ಮುಖ ನೋವಿನಿಂದ ಊದಿಕೊಂಡಿದೆ.  ಮನೆಯ ಸಿಟ್ ಔಟ್ ನಲ್ಲಿ ರಾಯಲ್ ಪತ್ನಿ ಹಾಗೂ ಮಗು ಕುಳಿತುಕೊಂಡಿದ್ದರೂ ಮನೆ ಮಂದಿ ಎಚ್ಚರಿಸಿದ ಕಾರಣ ಮನೆಯ ಕೊಠಡಿಯೊಳಗೆ ರಕ್ಷಣೆ ಪಡೆದಿದ್ದು ಕಿಟಕಿಗಳಿಗೆ ನೆಟ್ ಹಾಕಿದ್ದರಿಂದ ಅವರುಗಳು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.

Mangalore Two hospitalised after honeybee attack in Naringana Ullal. 79 year old grandfather was said to be hiding inside the well to escape the attack.