ಜಿಲ್ಲಾಧಿಕಾರಿ ಕಚೇರಿಯಲ್ಲೇ ನೀತಿಸಂಹಿತೆ ಉಲ್ಲಂಘನೆ ; ಒಳಗೆ ಸುದ್ದಿಗೋಷ್ಟಿ, ಹೊರಗೆ ರಾಜಕೀಯ ವ್ಯಕ್ತಿಗಳ ಫೋಟೋ !

30-03-23 09:35 pm       Mangalore Correspondent   ಕರಾವಳಿ

ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ರಾಜ್ಯದಾದ್ಯಂತ ಸರಕಾರಿ ಕಚೇರಿಗಳಲ್ಲಿ ರಾಜಕೀಯ ವ್ಯಕ್ತಿಗಳ ಫೋಟೋಗಳನ್ನು ಬಳಸುವಂತಿಲ್ಲ. ನೀತಿಸಂಹಿತೆ ಪ್ರಕಾರ ಫ್ಲೆಕ್ಸ್, ಬ್ಯಾನರ್ ಗಳನ್ನು ತೆರವುಗೊಳಿಸಬೇಕು. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಸುದ್ದಿಗೋಷ್ಟಿ ಕರೆದು ಮಾಧ್ಯಮಕ್ಕೂ ಮಾಹಿತಿ ನೀಡಿದರಾದರೂ, ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಹೊರಭಾಗದಲ್ಲಿ ಹಾಕಿದ್ದ ರಾಜಕೀಯ ವ್ಯಕ್ತಿಗಳ ಫೋಟೊಗಳನ್ನೇ ತೆರವುಗೊಳಿಸಿಲ್ಲ.

ಮಂಗಳೂರು, ಮಾ.30: ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ರಾಜ್ಯದಾದ್ಯಂತ ಸರಕಾರಿ ಕಚೇರಿಗಳಲ್ಲಿ ರಾಜಕೀಯ ವ್ಯಕ್ತಿಗಳ ಫೋಟೋಗಳನ್ನು ಬಳಸುವಂತಿಲ್ಲ. ನೀತಿಸಂಹಿತೆ ಪ್ರಕಾರ ಫ್ಲೆಕ್ಸ್, ಬ್ಯಾನರ್ ಗಳನ್ನು ತೆರವುಗೊಳಿಸಬೇಕು. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಸುದ್ದಿಗೋಷ್ಟಿ ಕರೆದು ಮಾಧ್ಯಮಕ್ಕೂ ಮಾಹಿತಿ ನೀಡಿದರಾದರೂ, ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಹೊರಭಾಗದಲ್ಲಿ ಹಾಕಿದ್ದ ರಾಜಕೀಯ ವ್ಯಕ್ತಿಗಳ ಫೋಟೊಗಳನ್ನೇ ತೆರವುಗೊಳಿಸಿಲ್ಲ.

ಸುದ್ದಿಗೋಷ್ಟಿಗೆ ತೆರಳಿದ್ದ ಮಾಧ್ಯಮದ ಮಂದಿ ಅಲ್ಲಿನ ಗೋಡೆಗಳಲ್ಲಿ ಅಂಟಿಸಿದ್ದ ರಾಜಕೀಯ ವ್ಯಕ್ತಿಗಳ ಫೋಟೋಗಳನ್ನು ಗಮನಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಇನ್ನಿತರ ವ್ಯಕ್ತಿಗಳ ಫೋಟೊಗಳನ್ನು ಗೋಡೆಗೆ ಹಾಕಿರುವುದನ್ನೂ ತೆಗೆದಿರಲಿಲ್ಲ. ಜಿಲ್ಲಾಧಿಕಾರಿ ಸುದ್ದಿಗೋಷ್ಟಿಯಲ್ಲಿ ರಾಜಕೀಯ ವ್ಯಕ್ತಿಗಳ ಬ್ಯಾನರ್, ಫೋಟೋಗಳನ್ನು ಕಟ್ಟುನಿಟ್ಟಾಗಿ ತೆರವುಗೊಳಿಸಲಾಗುವುದು, ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಚುನಾವಣಾ ವೀಕ್ಷಕರು ಪ್ರತಿ ತಾಲೂಕಿನಲ್ಲಿ ಈ ಬಗ್ಗೆ ನಿಗಾ ವಹಿಸುತ್ತಾರೆ ಎಂದು ಹೇಳಿದರು. ಆದರೆ ತಮ್ಮ ಕಚೇರಿಯಲ್ಲೇ ರಾಜಕೀಯ ವ್ಯಕ್ತಿಗಳ ಫೋಟೊ ತೆರವುಗೊಳಿಸದೆ ಜಿಲ್ಲಾಧಿಕಾರಿ ಎಟವಟ್ಟು ಮಾಡಿಕೊಂಡಿದ್ದರು.

ಕೋಲ, ನೇಮ, ಯಕ್ಷಗಾನಕ್ಕೆ ಅಡ್ಡಿಯಿಲ್ಲ

ನೀತಿಸಂಹಿತೆ ಇದ್ದರೂ, ಯಾವುದೇ ಧಾರ್ಮಿಕ ಆಚರಣೆಗಳಿಗೆ ತೊಂದರೆ ಇಲ್ಲ. ಅಲ್ಲದೆ, ಕರಾವಳಿಯ ಸಾಂಪ್ರದಾಯಿಕ ಕಲೆ ಯಕ್ಷಗಾನ ಪ್ರದರ್ಶನಕ್ಕೂ ತೊಂದರೆ ಇಲ್ಲ. ಕೋಲ, ನೇಮದಂತಹ ದೈವಾರಾಧನೆಗೂ ಅಡ್ಡಿ ಇರುವುದಿಲ್ಲ. ಯಾವುದೇ ಧರ್ಮದ ಧಾರ್ಮಿಕ ಆಚರಣೆಗಳಿಗೆ ನೀತಿಸಂಹಿತೆಯಿಂದ ಅಡ್ಡಿ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ. ಯಾವುದೇ ಕಾರ್ಯಕ್ರಮದ ಬಗ್ಗೆ ಬ್ಯಾನರ್, ಬಂಟಿಂಗ್ಸ್ ಹಾಕುವುದಿದ್ದರೆ ಸ್ಥಳೀಯ ಚುನಾವಣಾಧಿಕಾರಿ ಪರವಾನಗಿ ಪಡೆಯಬೇಕು. ಅನುಮತಿ ಪಡೆಯದೆ ಬಂಟಿಂಗ್ಸ್ ಹಾಕುವಂತಿಲ್ಲ. ರಾಜಕೀಯ ಕಾರ್ಯಕ್ರಮದ ಬಗ್ಗೆಯೂ ಪೂರ್ವಾನುಮತಿ ಪಡೆದು ಬಂಟಿಂಗ್ಸ್ ಹಾಕಬಹುದು ಎಂದರು.

Mangalore Dc office breaks conduct of conduct during elections, BJP leaders photo frame remains at office.