ಮಂಗಳೂರು ಉತ್ತರ, ಮೂಡುಬಿದ್ರೆ, ಪುತ್ತೂರಿನಲ್ಲಿ ಗುಜರಾತ್ ಪ್ರಯೋಗ ; ಹಾಲಿ ಶಾಸಕರಿಗೆ ಬಿಗ್ ಶಾಕ್ ! ಬಿಜಪಿಯಲ್ಲೇ ತಳಮಳ  

30-03-23 10:47 pm       Mangalore Correspondent   ಕರಾವಳಿ

ಚುನಾವಣೆ ಘೋಷಣೆಯಾಗುತ್ತಲೇ ರಾಜಕೀಯ ಚಟುವಟಿಕೆ ಗರಿಗೆದರಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಹಾಲಿ ಬಿಜೆಪಿ ಶಾಸಕರಿರುವ ಮೂರು ಅಥವಾ ನಾಲ್ಕು ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭಿಸಿದೆ.

ಮಂಗಳೂರು, ಮಾ.30: ಚುನಾವಣೆ ಘೋಷಣೆಯಾಗುತ್ತಲೇ ರಾಜಕೀಯ ಚಟುವಟಿಕೆ ಗರಿಗೆದರಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಹಾಲಿ ಬಿಜೆಪಿ ಶಾಸಕರಿರುವ ಮೂರು ಅಥವಾ ನಾಲ್ಕು ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭಿಸಿದೆ. ಮಂಗಳೂರು ಉತ್ತರ, ಮೂಡುಬಿದ್ರೆ, ಪುತ್ತೂರು, ಸುಳ್ಯ ವಿಧಾನಸಭೆ ಕ್ಷೇತ್ರದಲ್ಲಿ ಹಾಲಿ ಶಾಸಕರನ್ನು ಬದಲಾಯಿಸುವ ಬಗ್ಗೆ ರಾಜ್ಯ ಬಿಜೆಪಿ ಮಟ್ಟದಲ್ಲಿ ಚರ್ಚೆ ನಡೆದಿದೆ.

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಾಲಿ ಶಾಸಕ ಭರತ್ ಶೆಟ್ಟಿ ಬಗ್ಗೆ ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿ ಮೈನಸ್ ಬಂದಿದೆ ಎನ್ನುವ ರಿಪೋರ್ಟ್ ತೋರಿಸಲಾಗುತ್ತಿದೆ. ಮೂಡುಬಿದ್ರೆ ಕ್ಷೇತ್ರದಲ್ಲಿ ಉಮಾನಾಥ ಕೋಟ್ಯಾನ್ ಪ್ಲಸ್ ಬಂದಿದೆ ಎಂದೂ ಹೇಳಲಾಗುತ್ತಿದೆ. ಆದರೆ, ಇವರೆಡು ಕ್ಷೇತ್ರದಲ್ಲಿಯೂ ಬದಲಾವಣೆ ಮಾಡಲು ರಾಜ್ಯ ನಾಯಕರು ಮುಂದಾಗಿದ್ದಾರೆ. ಹಾಗೊಂದು ವೇಳೆ, ಆದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿಯನ್ನು ಬದಲಿಸಿ ಹೊಸ ಮುಖ ಹಾಕಲಿದ್ದಾರೆ. ಒಂದು ಮೂಲದ ಪ್ರಕಾರ, ಮೂಡುಬಿದ್ರೆ ಕ್ಷೇತ್ರದಲ್ಲಿ ಕಳೆದ ಬಾರಿ 29 ಸಾವಿರ ಮತಗಳ ಮುನ್ನಡೆ ಪಡೆದಿದ್ದ ಉಮಾನಾಥ ಕೋಟ್ಯಾನ್ ಅವರನ್ನು ಮಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಸಲಿದ್ದಾರಂತೆ.

ಮೂಡುಬಿದ್ರೆ ಕ್ಷೇತ್ರದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪಟ್ಟ ಶಿಷ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಅವರನ್ನು ಕಣಕ್ಕಿಳಿಸುವ ಚಿಂತನೆ ಇದೆ. ಹೊಸ ಮುಖ ಆಗಿದ್ದರೂ, ಕಳೆದ ಬಾರಿ ಇಡೀ ಜಿಲ್ಲೆಯಲ್ಲಿ ಅತೀ ಹೆಚ್ಚು ಮುನ್ನಡೆ ಗಳಿಸಿದ್ದ ಮೂಡುಬಿದ್ರೆ ಕ್ಷೇತ್ರದಲ್ಲಿ ಈ ಬಾರಿ ಖಚಿತ ಗೆಲುವು ಎಂದು ಆಂತರಿಕ ರಿಪೋರ್ಟ್ ಬಂದಿರುವುದರಿಂದ ಅಲ್ಲಿ ಪ್ರಯೋಗಕ್ಕೆ ಇಳಿಸಲು ರಾಜ್ಯ ನಾಯಕರು ಮುಂದಾಗಿದ್ದಾರೆ. ಇದೇ ವೇಳೆ, ಭರತ್ ಶೆಟ್ಟಿಯನ್ನು ಶಾಸಕ ಸ್ಥಾನದಿಂದ ಬದಿಗಿರಿಸಿ ಮುಂದೆ ಸಂಸದ ಸ್ಥಾನಕ್ಕೆ ಕಣಕ್ಕಿಳಿಸುವ ಮನವೊಲಿಕೆ ಆರೆಸ್ಸೆಸ್ ಕಡೆಯಿಂದ ನಡೆದಿದೆ ಎಂದೂ ಹೇಳಲಾಗುತ್ತಿದೆ.

ಇದೇ ವೇಳೆ, ಪುತ್ತೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಬಗ್ಗೆಯೂ ಬಿಜೆಪಿ ಒಳಗಡೆ ಮೈನಸ್ ಇದೆ. ಕ್ಷೇತ್ರದ ಕಾರ್ಯಕರ್ತರೇ ಮುನಿಸಿಕೊಂಡಿರುವುದು ಮತ್ತು ಶಾಸಕನಾದರೂ ವರ್ಚಸ್ಸು ಗಳಿಸಿಕೊಂಡಿಲ್ಲ ಎಂಬ ನೆಲೆಯಲ್ಲಿ ಮಠಂದೂರು ಅವರನ್ನು ಬದಲಿಸುವ ಚಿಂತನೆ ನಡೆದಿದೆ. ಹಾಗೊಂದ್ವೇಳೆ, ಆದಲ್ಲಿ ಇನ್ನೊಬ್ಬ ಗೌಡ ಜನಾಂಗದ ವ್ಯಕ್ತಿಯನ್ನು ಅಲ್ಲಿ ಹೊಸ ಮುಖವಾಗಿ ಕಣಕ್ಕಿಳಿಸುವ ಚಿಂತನೆ ಇದೆ. ಆರು ಬಾರಿಯ ಶಾಸಕ ಎಸ್. ಅಂಗಾರ ಬಗ್ಗೆ ಸುಳ್ಯ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಒಲವು ಇಲ್ಲದಿರುವುದು, ಹೊಸ ಮುಖ ಇಳಿಸಬೇಕೆಂದು ಬಹಿರಂಗ ಅಭಿಯಾನ ನಡೆದಿರುವ ಕಾರಣದಿಂದ ಅಲ್ಲಿಯೂ ಬದಲಾವಣೆ ನಿರೀಕ್ಷಿತ ಎಂದು ಹೇಳಲಾಗುತ್ತಿದೆ.

Karnataka's BJP president Nalin Kumar Kateel recovers from Covid-19 |  Deccan Herald

ಮತ್ತೊಂದು ಮೂಲದ ಪ್ರಕಾರ, ಮಂಗಳೂರು ಉತ್ತರ ಕ್ಷೇತ್ರದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿಯೂ ಇದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಸ್ಲಿಂ ವ್ಯಕ್ತಿಯನ್ನು ಕಣಕ್ಕಿಳಿಸಿದರೆ, ಅಲ್ಲಿ ಬಿಜೆಪಿಗೆ ಸುಲಭ ಗುರಿ ಎನ್ನುವ ನೆಲೆಯಲ್ಲಿ ನಳಿನ್ ಕುಮಾರ್ ಅಲ್ಲಿಂದಲೇ ಸ್ಪರ್ಧಿಸಿ ಶಾಸಕರಾಗುವ ಯೋಚನೆ ಹೊಂದಿದ್ದಾರೆ. ಒಂದು ಕಡೆ ತನ್ನ ಪಟ್ಟ ಶಿಷ್ಯ ಸುದರ್ಶನ್ ಮೂಡುಬಿದ್ರೆ, ಮತ್ತೊಂದು ಕಡೆ ತಾನೇ ಒಂದು ಕ್ಷೇತ್ರದಲ್ಲಿ ಕಣಕ್ಕಿಳಿದು ತನ್ನ ಮುಂದಿನ ಭವಿಷ್ಯ ಗಟ್ಟಿಗೊಳಿಸುವ ಚಿಂತನೆಯಲ್ಲಿದ್ದಾರೆ ನಳಿನ್. ಬಿಜೆಪಿ ಕಳೆದ ಬಾರಿಯೂ ಈ ರೀತಿಯ ಹೊಸ ಮುಖದ ಪ್ರಯೋಗಕ್ಕಿಳಿದು ಅದರಲ್ಲಿ ಯಶಸ್ಸು ಪಡೆದಿತ್ತು. ಈ ಬಾರಿ ದಕ್ಷಿಣ ಕನ್ನಡದವರೇ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ಮತ್ತು ಗುಜರಾತ್ ಪ್ರಯೋಗದ ಹೆಸರಲ್ಲಿ ಹಾಲಿ ಶಾಸಕರನ್ನು ಬದಲಾಯಿಸಲು ಆರೆಸ್ಸೆಸ್ ಬಣ ಮತ್ತು ರಾಜ್ಯ ನಾಯಕರು ಮುಂದಾಗಿದ್ದಾರೆ ಎನ್ನುವ ಮಾಹಿತಿಗಳಿವೆ. ಈ ರೀತಿಯ ಗುಸು ಗುಸು ಸುದ್ದಿ ಬಿಜೆಪಿ ಒಳಗಡೆಯೇ ತಳಮಳ ಸೃಷ್ಟಿಸಿದೆ.

Gujrath model in Mangalore by BJP, new faces planned for Mangalore north, Moodbidri, Puttur and Sullia MLAs.