ಮಂಗಳೂರು ಉತ್ತರದಲ್ಲಿ ಮೀನುಗಾರ ಸಮುದಾಯಕ್ಕೆ ಅವಕಾಶ ಕೊಡಿ ; ಬಿಜೆಪಿಗೆ ಓಟ್ ಹಾಕಿದರೂ ನಿರ್ಲಕ್ಷ್ಯ ಮಾಡಿದ್ದಾರೆ, ಟಿಕೆಟ್ ಕೊಡದೇ ಇದ್ದರೆ ಸೈಲಂಟ್ ಆಗ್ತೀವಿ ! 

01-04-23 09:03 pm       Mangalore Correspondent   ಕರಾವಳಿ

ಬಿಜೆಪಿಯಲ್ಲಿ ಟಿಕೆಟ್ ಫೈನಲ್ ಆಗುತ್ತಿರುವಾಗಲೇ ಮೀನುಗಾರ ಸಮುದಾಯದ ಬಿಜೆಪಿ ನಾಯಕರು ತಮಗೆ ಸೀಟು ಕೊಡಬೇಕೆಂದು ಆಗ್ರಹ ಮಾಡಿದ್ದಾರೆ.‌ ಸೀಟು ಕೊಡದೇ ಇದ್ದರೆ ವಿಧಾನಸಭೆ ಚುನಾವಣೆಯಲ್ಲಿ ಮೀನುಗಾರ ಸಮುದಾಯ ಸೈಲಂಟ್ ಆಗಲಿದ್ದಾರೆ ಎಂದು ಮೀನುಗಾರ ಮುಖಂಡ ರಾಮಚಂದ್ರ ಬೈಕಂಪಾಡಿ ಎಚ್ಚರಿಕೆ ನೀಡಿದ್ದಾರೆ. 

ಮಂಗಳೂರು, ಎಪ್ರಿಲ್ 1: ಬಿಜೆಪಿಯಲ್ಲಿ ಟಿಕೆಟ್ ಫೈನಲ್ ಆಗುತ್ತಿರುವಾಗಲೇ ಮೀನುಗಾರ ಸಮುದಾಯದ ಬಿಜೆಪಿ ನಾಯಕರು ತಮಗೆ ಸೀಟು ಕೊಡಬೇಕೆಂದು ಆಗ್ರಹ ಮಾಡಿದ್ದಾರೆ.‌ ಸೀಟು ಕೊಡದೇ ಇದ್ದರೆ ವಿಧಾನಸಭೆ ಚುನಾವಣೆಯಲ್ಲಿ ಮೀನುಗಾರ ಸಮುದಾಯ ಸೈಲಂಟ್ ಆಗಲಿದ್ದಾರೆ ಎಂದು ಮೀನುಗಾರ ಮುಖಂಡ ರಾಮಚಂದ್ರ ಬೈಕಂಪಾಡಿ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು ನಗರದ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಉಳ್ಳಾಲ ಮತ್ತು ಮಂಗಳೂರು ಉತ್ತರ ಕ್ಷೇತ್ರಗಳಲ್ಲಿ ಮೀನುಗಾರ ಮತದಾರರೇ ನಿರ್ಣಾಯಕರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಯಾವುದೇ ಪಕ್ಷದಿಂದ ನಮ್ಮ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ. ಈ ಬಾರಿ ತಮ್ಮದೇ ಸಮುದಾಯಕ್ಕೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರೂ ಆಗಿರುವ ಬೈಕಂಪಾಡಿ ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮೀನುಗಾರ ಸಮುದಾಯದವರಿಗೆ ಯಾವ ರಾಜಕೀಯ ಪಕ್ಷದಿಂದಲೂ ಸೂಕ್ತ ಸ್ಥಾನ ಸಿಕ್ಕಿಲ್ಲ. ಕರಾವಳಿಯ ಮೀನುಗಾರರ ಪೈಕಿ ಶೇಕಡ 80ರಷ್ಟು ಮಂದಿ ಹಿಂದುತ್ವದ ಆಧಾರದಲ್ಲಿ ಇಷ್ಟು ವರ್ಷ ಬಿಜೆಪಿಗೆ ಮತ ಚಲಾಯಿಸುತ್ತಿದ್ದಾರೆ. ಆದರೂ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದ್ದು ಕಡಿಮೆ. ಮಂಗಳೂರು ಉತ್ತರ, ಮೀನುಗಾರರ ಸಾಂಪ್ರದಾಯಿಕ ಕ್ಷೇತ್ರವಾಗಿದ್ದು ಮೀನುಗಾರರು ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದ್ದಾರೆ. ಆದರೂ ಶಾಸಕರಾಗಲು ಸಾಧ್ಯವಾಗಲಿಲ್ಲ. ಈ ಬಾರಿ ಕನಿಷ್ಠ ಎರಡು ಕ್ಷೇತ್ರಗಳಲ್ಲಿ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಮತ್ತು ರಾಜ್ಯ ಘಟಕದ ಅಧ್ಯಕ್ಷರನ್ನು ಕೋರಲಾಗಿದೆ ಎಂದು ಹೇಳಿದರು.

ಮೀನುಗಾರರಿಗೆ ಟಿಕೆಟ್ ನೀಡದೇ ಇದ್ದರೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮೀನುಗಾರರು ತಟಸ್ಥರಾಗಲಿದ್ದಾರೆ. ಈ ಬಗ್ಗೆ ರಾಜ್ಯದಾದ್ಯಂತ ಜಾಗೃತಿ ಮೂಡಿಸಲಾಗುವುದು ಎಂದು  ರಾಮಚಂದರ್‌ ಬೈಕಂಪಾಡಿ ತಿಳಿಸಿದ್ದಾರೆ. ಅಲ್ಲದೆ, ಸುರತ್ಕಲ್ ಕ್ಷೇತ್ರದಲ್ಲಿ ತಾನು ಕೂಡ ಆಕಾಂಕ್ಷಿ. ಮೀನುಗಾರ ಸಮುದಾಯದ ಪರವಾಗಿ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಮೀನುಗಾರರಲ್ಲಿ ತಮಗಿಂತ ಅರ್ಹತೆ ಇರುವವರು ಯಾರೂ ಇಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ತಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದರು. ಬಾಬು ಬಂಗೇರ, ಮುರಳಿರಾಜ್ ಉಚ್ಚಿಲ, ಸುಕೇಶ್ ಜಿಕೆ ಉಚ್ಚಿಲ ಇದ್ದರು.

Mangalore North tickct must be given to leader of fishing community says Ramchandra Baikampady.