ಹಾಲಿ ಶಾಸಕರಿಗೆ ಟಿಕೆಟ್ ತೂಗುಗತ್ತಿ ; ಮೌನಕ್ಕೆ ಶರಣಾದ ಬಿಜೆಪಿ ನಾಯಕರು, ಕರಾವಳಿಯಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟು, ಕಾಂಗ್ರೆಸ್- ಬಿಜೆಪಿ ಪ್ರಚಾರಕ್ಕೆ ಬ್ರೇಕ್ ! 

05-04-23 09:35 pm       Mangalore Correspondent   ಕರಾವಳಿ

ಚುನಾವಣೆ ಬಂತಂದ್ರೆ, ರಾಜಕೀಯ ನಾಯಕರು, ಕಾರ್ಯಕರ್ತರು ಹುಮ್ಮಸ್ಸಿನಲ್ಲಿ ಕೆಲಸ ಮಾಡೋದು, ಎಲ್ಲ ಕಡೆ ಪ್ರಚಾರದ ಭರಾಟೆ ಕಾಣಿಸಿಕೊಳ್ಳೋದು ಸಾಮಾನ್ಯ.

ಮಂಗಳೂರು, ಎ.5: ಚುನಾವಣೆ ಬಂತಂದ್ರೆ, ರಾಜಕೀಯ ನಾಯಕರು, ಕಾರ್ಯಕರ್ತರು ಹುಮ್ಮಸ್ಸಿನಲ್ಲಿ ಕೆಲಸ ಮಾಡೋದು, ಎಲ್ಲ ಕಡೆ ಪ್ರಚಾರದ ಭರಾಟೆ ಕಾಣಿಸಿಕೊಳ್ಳೋದು ಸಾಮಾನ್ಯ. ಆದರೆ, ಕರಾವಳಿಯ ಕೆಲವು ಕ್ಷೇತ್ರಗಳಲ್ಲಿ ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ಇಲ್ಲವೆಂಬ ಗುಮ್ಮದ ಕಾರಣ ಬಿಜೆಪಿ ಪಾಳಯದಲ್ಲಿ ನೀರವ ಮೌನ ಆವರಿಸಿದೆ. ಇದರ ಕಾರಣ, ಚುನಾವಣೆ ಪ್ರಚಾರ ಕಾರ್ಯಕ್ಕೆ ಹಠಾತ್ ಬ್ರೇಕ್ ಬಿದ್ದಿದೆ.

ಬಿಜೆಪಿ ಶಾಸಕರ ಮೇಲಿನ ತೂಗುಗತ್ತಿಯ ಕಾರಣ ಕರಾವಳಿಯ ಬಹುತೇಕ ಕ್ಷೇತ್ರಗಳಲ್ಲಿ ಈ ಹಿಂದೆ ಇದ್ದಂತಹ ಹುರುಪು ಈಗ ಇಲ್ಲ. ಹಾಲಿ ಶಾಸಕರನ್ನೇ ಅನುಸರಿಸಿ, ಕಳೆದ ಎರಡು ತಿಂಗಳು ಪ್ರಚಾರ ಕಾರ್ಯ ನಡೆದಿದ್ದರಿಂದ ಕಾರ್ಯಕರ್ತರು ಶಾಸಕರೇ ತಮ್ಮ ಅಭ್ಯರ್ಥಿಯೆಂದು ಪ್ರಚಾರದಲ್ಲಿ ತೊಡಗಿದ್ದರು. ಆದರೆ ಚುನಾವಣೆ ಘೋಷಣೆಯಾಗುತ್ತಲೇ ಕರಾವಳಿಯಲ್ಲಿ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ ಎನ್ನುವ ಮಾತು ಕೇಳಿಬಂದಿತ್ತು. ಇದರಿಂದಾಗಿ ಕಳೆದ ಒಂದು ವಾರದಿಂದ ಬಿಜೆಪಿ ಪಾಳಯದಲ್ಲಿ ಕಳೆಗುಂದಿದ ವಾತಾವರಣ. ನಾಯಕರು ಮೌನಕ್ಕೆ ಶರಣಾಗಿದ್ದರೆ, ಹಾಲಿ ಶಾಸಕರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನೇ ಕಡಿಮೆ ಮಾಡಿದ್ದಾರೆ.

ಬಿಜೆಪಿ ಶಾಸಕರು ತಮ್ಮ ಟಿಕೆಟ್ ಕೈತಪ್ಪುತ್ತೆ ಅನ್ನುವ ಭೀತಿಯಲ್ಲಿ ಮೌನ ವಹಿಸಿದ್ದರೆ, ಕಾರ್ಯಕರ್ತರು ಯಾರಿಗೆ ಪಕ್ಷದ ಟಿಕೆಟ್ ಸಿಗುತ್ತೋ ಅನ್ನುವ ಕುತೂಹಲದಕ್ಕೀಡಾಗಿದ್ದಾರೆ. ಸದ್ಯಕ್ಕೆ ಮಂಗಳೂರು ಉತ್ತರ, ಪುತ್ತೂರು, ಸುಳ್ಯ, ಉಡುಪಿ, ಕಾಪು, ಬೈಂದೂರು, ಕುಂದಾಪುರದಲ್ಲಿ ಹಾಲಿ ಶಾಸಕರ ಬದಲಾವಣೆ ಇದೆ ಎನ್ನಲಾಗುತ್ತಿದ್ದು, ಇದರಿಂದಾಗಿ ಚುನಾವಣೆ ಘೋಷಣೆಯಾದ ಕಳೆದೊಂದು ವಾರದಲ್ಲಿ ವಿಧಾನಸಭೆ ಮಟ್ಟದಲ್ಲಿ ಬಿಜೆಪಿ ನಾಯಕರು, ಸ್ಥಳೀಯ ಪುಢಾರಿಗಳು, ಕಾರ್ಯಕರ್ತರಾದಿಯಾಗಿ ಮೌನವನ್ನೇ ಹೊದ್ದುಕೊಂಡಿದ್ದಾರೆ.

Furnish details on availability of coronavirus beds in private hospitals: Ivan  D'Souza | Deccan Herald

Many voters name dropped from voters' list without prior notice: J R Lobo |  udayavani

ಅತ್ತ ಬಿಜೆಪಿಯಲ್ಲಿ ಹಾಲಿ ಶಾಸಕರ ಮೇಲಿನ ಗುಮ್ಮದಿಂದಾಗಿ ವಾತಾವರಣ ಕಳೆಗುಂದಿದ್ದರೆ, ಅಭ್ಯರ್ಥಿ ಘೋಷಣೆಯಾಗದ ಕ್ಷೇತ್ರಗಳ ಕಾಂಗ್ರೆಸ್ ಸ್ಥಿತಿಯೂ ಭಿನ್ನವಾಗಿಲ್ಲ. ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿರುವುದರಿಂದ ಅಲ್ಲಿ ಪಕ್ಷದ ಪ್ರಚಾರಕ್ಕೆ ಪೂರ್ತಿ ಬ್ರೇಕ್ ಬಿದ್ದಿದೆ. ಮಂಗಳೂರು ಉತ್ತರದಲ್ಲಿ ಮುಸ್ಲಿಂ ಕೋಟಾದಲ್ಲಿ ಸೀಟು ಕೊಡಬೇಕೆಂದು ಮಾಜಿ ಶಾಸಕ ಮೊಯ್ದೀನ್ ಬಾವ ಮತ್ತು ಇನಾಯತ್ ಆಲಿ ಪೈಪೋಟಿಗೆ ಬಿದ್ದಿದ್ದರೆ, ಮಂಗಳೂರು ದಕ್ಷಿಣದಲ್ಲಿ ಕ್ರಿಸ್ತಿಯನ್ ಕೋಟಾ ಮುಂದಿಟ್ಟು ಐವಾನ್ ಡಿಸೋಜ ಮತ್ತು ಜೆ.ಆರ್ ಲೋಬೊ ಕಸರತ್ತಿನಲ್ಲಿದ್ದಾರೆ. ಆದರೆ ಇದರ ನಡುವೆಯೇ ಬಿಲ್ಲವರಿಗೆ ಸೀಟು ಕೊಡಬೇಕೆಂಬ ಲಾಬಿಯೂ ಭಾರೀ ಜೋರಾಗಿದ್ದು, ಮಂಗಳೂರಿನ ಯಾವುದಾದ್ರೂ ಒಂದು ಕ್ಷೇತ್ರದಲ್ಲಿ ಸೀಟು ಕೊಡುವಂತೆ ಕಾಂಗ್ರೆಸ್ ಒಳಗಿನವರಿಂದಲೇ ಲಾಬಿ ನಡೆದಿದೆ.

Shakunthala T Shetty (@ShakunthalaShe6) / Twitter

ಡಿ. ವಿ. ಸದಾನಂದ ಗೌಡರ ಆಪ್ತ ಭಾನುವಾರ ಕಾಂಗ್ರೆಸ್‌ ಸೇರ್ಪಡೆ! | Puttur Ashok Kumar  Rai Will Join Congress - Kannada Oneindia

ಅತ್ತ ಪುತ್ತೂರಿನಲ್ಲಿಯೂ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಅಶೋಕ್ ರೈ ನಡುವೆ ಕಾಂಗ್ರೆಸ್ ಟಿಕೆಟಿಗಾಗಿ ತೀವ್ರ ಪೈಪೋಟಿ ನಡೆದಿದೆ. ಇದರಿಂದಾಗಿ ಮಂಗಳೂರು ಮತ್ತು ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸಿನ ಸ್ಥಳೀಯ ಮುಖಂಡರಾಗಲೀ, ಕಾರ್ಯಕರ್ತರಾಗಲಿ ಚುನಾವಣೆಯನ್ನೇ ಮರೆತು ಬಿಟ್ಟಂತಿದ್ದಾರೆ. ಒಂದು ವಾರದಲ್ಲಿ ಆಯಾ ಕ್ಷೇತ್ರದ ಪ್ರಮುಖ ನಾಯಕರನ್ನು ಕರೆದು ಕಾಂಗ್ರೆಸ್ ಚುನಾವಣಾ ಸಮಿತಿ ಸರಣಿ ಸಭೆಗಳನ್ನು ನಡೆಸುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಜಾತಿ ಸಮೀಕರಣ ಬಿಟ್ಟು ಗೆಲುವನ್ನೇ ಮಾನದಂಡ ಮಾಡಿಕೊಂಡಿದ್ದು, ಹೀಗಾಗಿ ಜಾತಿ ಕೋಟಾದಡಿ ಟಿಕೆಟ್ ಪಡೆಯುತ್ತಿದ್ದವರು ಟಿಕೆಟ್ ಖಾತ್ರಿ ಪಡಿಸಿಕೊಳ್ಳುವುದು ಕಷ್ಟವಾಗಿದೆ. ಒಟ್ಟಿನಲ್ಲಿ ಚುನಾವಣೆಗೆ ಇನ್ನೇನು ದಿನಗಣನೆ ಇರುವಾಗ ಕರಾವಳಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮೌನವನ್ನೇ ತಮ್ಮ ಆಭರಣ ಮಾಡಿಕೊಂಡಿರುವುದು ಕಾರ್ಯಕರ್ತರಲ್ಲಿ ತಳಮಳ ಸೃಷ್ಟಿಸಿದೆ.

Dakshina Kannada BJP campaigning goes weaker, many MLAs Show no interest thinking their names won't be added in the list. Prime Minister Narendra Modi is likely to address a total of 20 public rallies in a span of 30 days in the poll-bound state of Karnataka ahead of the Assembly elections scheduled to be held on May 10, a BJP source said on Tuesday.