ದಕ್ಷಿಣ ಕನ್ನಡ ಜಿಲ್ಲೆಯಿಂದ ಅಚ್ಚರಿ ಹೆಸರು ರಾಜ್ಯಕ್ಕೆ ರವಾನೆ ; ಬಿಜೆಪಿ ಕೋರ್ ಕಮಿಟಿಯಲ್ಲಿ ಚರ್ಚೆ, ಹಾಲಿ ಶಾಸಕರಿಗೆ ಪೈಪೋಟಿ ಕೊಟ್ಟವರು ಯಾರು ?!   

05-04-23 10:33 pm       Mangaluru Correspondent   ಕರಾವಳಿ

ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಲುವಾಗಿ ಬಿಜೆಪಿ ರಾಜ್ಯ ಘಟಕ ಇತ್ತೀಚೆಗೆ ಕಾರ್ಯಕರ್ತರ ಅಭಿಪ್ರಾಯ ಪಡೆದಿತ್ತು. ಕೊನೆಕ್ಷಣದಲ್ಲಿ ಈ ರೀತಿಯ ಅಭಿಪ್ರಾಯ ಸಂಗ್ರಹ ನಾಮ್ಕೆವಾಸ್ತೆ ಎಂದೆನಿಸಿದ್ದರೂ, ಪ್ರತಿ ಕ್ಷೇತ್ರದಿಂದ ಸಲ್ಲಿಕೆಯಾಗಿರುವ 2-3 ಹೆಸರುಗಳನ್ನು ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಗಿದೆ ಎನ್ನುವ ಮಾಹಿತಿಗಳಿವೆ.

ಮಂಗಳೂರು, ಎ.5: ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಲುವಾಗಿ ಬಿಜೆಪಿ ರಾಜ್ಯ ಘಟಕ ಇತ್ತೀಚೆಗೆ ಕಾರ್ಯಕರ್ತರ ಅಭಿಪ್ರಾಯ ಪಡೆದಿತ್ತು. ಕೊನೆಕ್ಷಣದಲ್ಲಿ ಈ ರೀತಿಯ ಅಭಿಪ್ರಾಯ ಸಂಗ್ರಹ ನಾಮ್ಕೆವಾಸ್ತೆ ಎಂದೆನಿಸಿದ್ದರೂ, ಪ್ರತಿ ಕ್ಷೇತ್ರದಿಂದ ಸಲ್ಲಿಕೆಯಾಗಿರುವ 2-3 ಹೆಸರುಗಳನ್ನು ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಗಿದೆ ಎನ್ನುವ ಮಾಹಿತಿಗಳಿವೆ.

ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ಶಕ್ತಿಕೇಂದ್ರ ಮತ್ತು ಮಂಡಲ ಪದಾಧಿಕಾರಿಗಳು, ಜಿಲ್ಲಾ ಘಟಕದ ಸದಸ್ಯರಿಗೆ ತಮ್ಮ ಆಯ್ಕೆ ಹೇಳುವ ಅವಕಾಶ ಇತ್ತು. ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಅಚ್ಚರಿಯ ಹೆಸರುಗಳು ರಾಜ್ಯ ಘಟಕಕ್ಕೆ ರವಾನೆಯಾಗಿವೆ ಎನ್ನುವ ಮಾಹಿತಿಗಳಿವೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಾಲಿ ಶಾಸಕ ಭರತ್ ಶೆಟ್ಟಿ ಜೊತೆಗೆ ಬೃಜೇಶ್ ಚೌಟ ಮತ್ತು ಕೃಷ್ಣ ಪಾಲೆಮಾರ್ ಹೆಸರು ರಾಜ್ಯಕ್ಕೆ ಹೋಗಿದೆ. ಮಂಗಳೂರು ದಕ್ಷಿಣದಲ್ಲಿ ರವಿಶಂಕರ ಮಿಜಾರ್, ಮೋನಪ್ಪ ಭಂಡಾರಿ, ಶಾಸಕ ವೇದವ್ಯಾಸ ಕಾಮತ್ ಹೆಸರು ಹೋಗಿದೆಯಂತೆ.

ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಸತೀಶ್ ಕುಂಪಲ, ಸಂತೋಷ್ ಕುಮಾರ್ ಬೋಳ್ಯಾರ್, ಚಂದ್ರಶೇಖರ್ ಉಚ್ಚಿಲ ಮತ್ತು ಕೃಷ್ಣ ಪಾಲೆಮಾರ್ ಹೆಸರು ಮುನ್ನೆಲೆಗೆ ಬಂದಿದ್ದು, ರಾಜ್ಯ ಘಟಕದಲ್ಲಿ ಚರ್ಚೆಯಾಗಿದೆ. ಹಾಗೆಯೇ ಪುತ್ತೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು, ಕಿಶೋರ್ ಕುಮಾರ್ ಬೊಟ್ಯಾಡಿ, ಗೌಡ ಸಮುದಾಯದ ಯತೀಶ್ ಆರುವಾರ ಎಂಬ ಹೆಸರು ಹೋಗಿದೆಯಂತೆ. ಯತೀಶ್ ಆರುವಾರ ಹೊಸ ಹೆಸರಾಗಿದ್ದು, ಈ ಹಿಂದೆ ಬಿಜೆಪಿ ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. 

ಮೂಡುಬಿದಿರೆ ಕ್ಷೇತ್ರದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಜೊತೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಮತ್ತು ಈಶ್ವರ ಕಟೀಲ್ ಹೆಸರು ರಾಜ್ಯ ಘಟಕಕ್ಕೆ ಹೋಗಿದೆ. ಬಂಟ್ವಾಳ ಕ್ಷೇತ್ರದಲ್ಲಿ ಶಾಸಕ ರಾಜೇಶ್ ನಾಯ್ಕ್ ಮತ್ತು ಮಾಜಿ ಸಚಿವ ನಾಗರಾಜ ಶೆಟ್ಟಿ ಹೆಸರು ರಾಜ್ಯಕ್ಕೆ ಹೋಗಿದ್ದು, ಕೋರ್ ಕಮಿಟಿಯಲ್ಲಿ ಚರ್ಚೆಗೆ ಬಂದಿದೆಯಂತೆ.

ಬೆಳ್ತಂಗಡಿ ಕ್ಷೇತ್ರದಲ್ಲಿ ಹರೀಶ್ ಪೂಂಜ ಜೊತೆಗೆ ಸಂಪತ್ ಸುವರ್ಣ ಮತ್ತು ಕೇಶವ ಬಂಗೇರ ಹೆಸರು ಮುನ್ನೆಲೆಗೆ ಬಂದಿದೆ ಎನ್ನುವ ಮಾಹಿತಿಗಳಿವೆ. ಸಂಪತ್ ಸುವರ್ಣ ಮತ್ತು ಕೇಶವ ಬಂಗೇರ ಕ್ಷೇತ್ರದಲ್ಲಿ ಪ್ರಬಲರಾಗಿರುವ ಬಿಲ್ಲವ ಸಮುದಾಯಕ್ಕೆ ಸೇರಿದವರಲ್ಲದೆ, ಪರಿವಾರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಸುಳ್ಯದಲ್ಲಿ ಶಾಸಕ ಅಂಗಾರ ಜೊತೆಗೆ ಭಾಗೀರಥಿ ಮುರುಳ್ಯ, ಶಿವಪ್ರಸಾದ್ ಪೆರುವಾಜೆ, ದಿನೇಶ ಅಮ್ಟೂರು ಎಂಬ ಹೆಸರು ರಾಜ್ಯಕ್ಕೆ ಹೋಗಿದೆ. ಶಿವಪ್ರಸಾದ್ ಎಬಿವಿಪಿ ಕಡೆಯಿಂದ ಸಂಘಟನೆಗೆ ಎಂಟ್ರಿ ಪಡೆದಿದ್ದರೆ, ದಿನೇಶ್ ಅಮ್ಟೂರು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಜೊತೆಗೆ ಹತ್ತಿರದಲ್ಲಿ ಗುರುತಿಸಿಕೊಂಡ ವ್ಯಕ್ತಿ. ಈ ಹಿಂದೆ ತಾಪಂ ಸದಸ್ಯರಾಗಿದ್ದ ಅನುಭವ ಇದೆಯಂತೆ.

BJP core committee meeting on ticket distribution in Mangalore, Brijesh chowta,  Krishna Palemar names called for north constituency. Political report by Headline Karnataka News Network.