ಬಪ್ಪನಾಡಿನಲ್ಲಿ ಮತ್ತೆ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ; ಸಾಮರಸ್ಯದ ನೆಲದಲ್ಲಿ ಸೌಹಾರ್ದ ಕದಡುವ ಯತ್ನ 

08-04-23 07:52 pm       Mangaluru correspondent   ಕರಾವಳಿ

ಮುಸ್ಲಿಂ ಸಮುದಾಯದ ಬಪ್ಪ ಬ್ಯಾರಿ ನಿರ್ಮಿಸಿದ ದೇವಸ್ಥಾನ ಎಂಬ ಐತಿಹ್ಯ ಹೊಂದಿರುವ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಿಂದುಯೇತರರ ವ್ಯಾಪಾರಕ್ಕೆ ನಿರ್ಬಂಧ ಹೇರಿ, ಬ್ಯಾನರ್ ಹಾಕಲಾಗಿದೆ.

ಮಂಗಳೂರು, ಎ.8: ಮುಸ್ಲಿಂ ಸಮುದಾಯದ ಬಪ್ಪ ಬ್ಯಾರಿ ನಿರ್ಮಿಸಿದ ದೇವಸ್ಥಾನ ಎಂಬ ಐತಿಹ್ಯ ಹೊಂದಿರುವ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಿಂದುಯೇತರರ ವ್ಯಾಪಾರಕ್ಕೆ ನಿರ್ಬಂಧ ಹೇರಿ, ಬ್ಯಾನರ್ ಹಾಕಲಾಗಿದೆ. ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ದೇಗುಲ ಪರಿಸರದಲ್ಲಿ ನಿಷೇಧ ವಿಧಿಸಲಾಗಿದ್ದು ಚುನಾವಣೆ ಹೊತ್ತಲ್ಲಿ ಧಾರ್ಮಿಕ ಸೌಹಾರ್ದ ಕೆಡಿಸುವ ಯತ್ನ ಎಂಬ ಆಕ್ಷೇಪ ವ್ಯಕ್ತವಾಗಿದೆ. 

ಬಪ್ಪನಾಡು ದೇವಸ್ಥಾನದಲ್ಲಿ ಇದೇ ಎಪ್ರಿಲ್ 11ರಂದು ಹಗಲು ರಥೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತರು ದೇವರ ಶಯನಕ್ಕೆ ಮಲ್ಲಿಗೆಯ ಹರಕೆಯನ್ನು ತೀರಿಸುವ ಸಂಪ್ರದಾಯವಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಮಲ್ಲಿಗೆ ಹೂ ಮಾರಾಟವಾಗುತ್ತದೆ.

ಹಿಂದಿನಿಂದಲೂ ಇಲ್ಲಿ ಮುಸ್ಲಿಂ ಹಾಗೂ ಹಿಂದು ವ್ಯಾಪಾರಿಗಳು ಜೊತೆಯಾಗಿಯೇ ಮಲ್ಲಿಗೆ ಇನ್ನಿತರ ವ್ಯಾಪಾರ ನಡೆಸುತ್ತ ಬಂದಿದ್ದರು. ಕಳೆದ ವರ್ಷ ಹಿಜಾಬ್ ಗಲಾಟೆ ಬಳಿಕ ಮುಜರಾಯಿ ಇಲಾಖೆ ದೇವಸ್ಥಾನ ಪರಿಸರದಲ್ಲಿ ಮುಸ್ಲಿಮ್ ವ್ಯಾಪಾರಿಗಳನ್ನು ದೂರ ಇಡಬೇಕೆಂದು ಹಿಂದು ಸಂಘಟನೆಗಳು ಆಗ್ರಹಿಸಿದ್ದವು. 2022ರ ಜಾತ್ರೆ ಸಂದರ್ಭದಲ್ಲಿ  ಮುಜರಾಯಿ ಇಲಾಖೆಯ ಹಳೆಯ ನಿಯಮವನ್ನು ಮುಂದಿಟ್ಟು ಮುಸ್ಲಿಮರು ವ್ಯಾಪಾರ ಮಳಿಗೆ ಹಾಕದಂತೆ ಅವಕಾಶ ನಿರಾಕರಿಸಲಾಗಿತ್ತು. ಈ ಸಲವೂ  ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಎಂದು ಆಡಳಿತ ಮಂಡಳಿ ನಿರ್ಧರಿಸಿದೆ.

ಕರಾವಳಿಯಲ್ಲಿ ಮತ ಸಾಮರಸ್ಯದ ನೆಲೆಯೆಂದು ಖ್ಯಾತಿ ಪಡೆದಿದ್ದ ಬಪ್ಪನಾಡಿನಲ್ಲಿ ಈ ರೀತಿಯ ಬೆಳವಣಿಗೆ ಆಗಿರುವುದು ಚುನಾವಣೆ ಹೊತ್ತಲ್ಲಿ ಮತ್ತೆ ಚರ್ಚೆಗೀಡಾಗಿದೆ.

Mangalore Muslim traders banned from fairs at Bappanadu Sri Durga Parameshwari Temple in Mulki