ಮಾನಹಾನಿ ವರದಿ ಪ್ರಸಾರಕ್ಕೆ ನಿರ್ಬಂಧ ; ಮೂಡುಬಿದ್ರೆ ಶಾಸಕರ ಬೆನ್ನಲ್ಲೇ ಜಿಲ್ಲಾಧ್ಯಕ್ಷ ಸುದರ್ಶನ್ ಕೋರ್ಟಿಗೆ ಅರ್ಜಿ, ಸರದಿಯಲ್ಲಿದ್ದಾರೆ ಇನ್ನಷ್ಟು ಶಾಸಕರು !

11-04-23 09:38 pm       Mangaluru Correspondent   ಕರಾವಳಿ

ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ತನ್ನ ವಿರುದ್ಧ ಆಕ್ಷೇಪಾರ್ಹ ಸುದ್ದಿ, ಮಾಹಿತಿ, ವಿಡಿಯೋ, ಫೋಟೋಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ.

ಮಂಗಳೂರು, ಎ.11: ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ತನ್ನ ವಿರುದ್ಧ ಆಕ್ಷೇಪಾರ್ಹ ಸುದ್ದಿ, ಮಾಹಿತಿ, ವಿಡಿಯೋ, ಫೋಟೋಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ.

ಈ ಬಗ್ಗೆ ಮಂಗಳೂರಿನ ಜೆಎಂಎಫ್ ಕೋರ್ಟಿನಲ್ಲಿ ಎಪ್ರಿಲ್ 10ರಂದು ತಾತ್ಕಾಲಿಕ ತಡೆಯಾಜ್ಞೆ ಆದೇಶ ನೀಡಲಾಗಿದೆ. ಶಾಸಕ ಉಮಾನಾಥ ಕೋಟ್ಯಾನ್ ವಿರುದ್ಧ ಯಾವುದೇ ರೀತಿಯ ಆಕ್ಷೇಪಾರ್ಹ, ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ಆದೇಶ ವಿಧಿಸಲಾಗಿದೆ. ಆದರೆ ಚುನಾವಣೆ ಹೊತ್ತಿಗೆ ಅದರಲ್ಲೂ ಬಿಜೆಪಿ ಅಭ್ಯರ್ಥಿ ಘೋಷಣೆಯಾಗುವುದಕ್ಕೂ ಮುನ್ನ ಈ ರೀತಿ ಕೋರ್ಟಿನಿಂದ ತಡೆಯಾಜ್ಞೆ ಕೋರಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಶಾಸಕರ ಆಪ್ತರಲ್ಲಿ ಕೇಳಿದಾಗ, ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲ ಶಾಸಕರು ಈ ರೀತಿಯ ತಡೆಯಾಜ್ಞೆ ತಂದಿದ್ದಾರೆ. ಹಾಗಾಗಿ ವಕೀಲರ ಸೂಚನೆಯಂತೆ ನಮ್ಮ ಶಾಸಕರು ಕೂಡ ತಂದಿದ್ದಾರೆ. ಚುನಾವಣೆ ಹೊತ್ತಲ್ಲಿ ಮಾನಹಾನಿಕರ ಸುದ್ದಿ ಪ್ರಸಾರ ಆಗಬಾರದು ಎಂದಷ್ಟೇ ಇದರ ಉದ್ದೇಶ ಎಂದು ಹೇಳಿದ್ದಾರೆ.

ಇದೇ ವೇಳೆ, ಮೂಡುಬಿದ್ರೆ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಕೂಡ ಇದೇ ರೀತಿ ಕೋರ್ಟಿನಿಂದ ತಡೆಯಾಜ್ಞೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಎಪ್ರಿಲ್ 11ರಂದು ಮಂಗಳೂರಿನ ಜೆಎಂಎಫ್ ಕೋರ್ಟಿನಲ್ಲಿ ಸುದರ್ಶನ್ ಮೂಡುಬಿದ್ರೆ ಪರವಾಗಿ ವಕೀಲ ಚಿದಾನಂದ ಕೆದಿಲಾಯ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ಕೋರ್ಟ್ ತಡೆಯಾಜ್ಞೆ ಆದೇಶ ನೀಡಿಲ್ಲ. ನಾಳೆಗೆ ಮುಂದೂಡಿಕೆಯಾಗಿದೆ ಎನ್ನುವ ಮಾಹಿತಿ ಇದೆ.

ಇದಲ್ಲದೆ, ಇತರೇ ಕೆಲವು ಶಾಸಕರು ಕೂಡ ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ ಪ್ರಸಾರ ಆಗದಂತೆ ಕೋರ್ಟಿನಿಂದ ತಡೆಯಾಜ್ಞೆ ತರಲು ಮುಂದಾಗಿದ್ದಾರೆ ಎನ್ನುವ ಮಾಹಿತಿಗಳಿವೆ.

Moodbidri MLA Umanath Kotian and DK district BJP president sudarshan Moodbidri have obtained an injunction from the Mangalore JMFC court, preventing the publishing of any defamatory news, photos, or videos against him. The MLA, who is afraid of personal harassment, said that he has been targeted with personal attacks in various media, including social media, for the past few days.