ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ; ಮಂಗಳೂರಿಗೆ ಲೋಬೊ, ಪುತ್ತೂರಿಗೆ ಅಶೋಕ್ ರೈ, ಕಾರ್ಕಳಕ್ಕೆ ಉದಯ ಶೆಟ್ಟಿ, ಮಂಗಳೂರು ಉತ್ತರಕ್ಕಿನ್ನೂ ಸಸ್ಪೆನ್ಸ್!

15-04-23 03:03 pm       Mangalore Correspondent   ಕರಾವಳಿ

ಅಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್ 43 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು, ಮಂಗಳೂರು ನಗರ ದಕ್ಷಿಣ ಕ್ಷೇತ್ರಕ್ಕೆ ಜೆ.ಆರ್.ಲೋಬೊ ಟಿಕೆಟ್ ಪಡೆದಿದ್ದಾರೆ.

ಮಂಗಳೂರು, ಎ.15: ಅಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್ 43 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು, ಮಂಗಳೂರು ನಗರ ದಕ್ಷಿಣ ಕ್ಷೇತ್ರಕ್ಕೆ ಜೆ.ಆರ್.ಲೋಬೊ ಟಿಕೆಟ್ ಪಡೆದಿದ್ದಾರೆ. ಪುತ್ತೂರಿನಲ್ಲಿ ಅಶೋಕ್ ಕುಮಾರ್ ರೈ, ಕಾರ್ಕಳದಲ್ಲಿ ಉದಯ ಕುಮಾರ್ ಶೆಟ್ಟಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಇನ್ನೂ ಸಸ್ಪೆನ್ಸ್ ಮುಂದುವರಿದಿದೆ.

ಪುತ್ತೂರಿನಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಟಿಕೆಟ್ ಗಿಟ್ಟಿಸಲು ಭಾರೀ ಪ್ರಯತ್ನ ಪಟ್ಟಿದ್ದರು. ಆದರೆ ಎರಡು ತಿಂಗಳ ಹಿಂದೆ ಕಾಂಗ್ರೆಸ್ ಸೇರಿದ್ದ ಅಶೋಕ್ ಕುಮಾರ್ ರೈ ಟಿಕೆಟ್ ಗಿಟ್ಟಿಸಿದ್ದಾರೆ. ಕಾರ್ಕಳದಲ್ಲಿ ಉದಯ್ ಕುಮಾರ್ ಶೆಟ್ಟಿ ಮತ್ತು ಮಂಜುನಾಥ ಪೂಜಾರಿ ಟಿಕೆಟ್ ಗಿಟ್ಟಿಸಲು ಲಾಬಿ ನಡೆಸಿದ್ದರು. ಮಂಜುನಾಥ ಪೂಜಾರಿಗೆ ಟಿಕೆಟ್ ಸಿಗುತ್ತೆ ಎನ್ನಲಾಗುತ್ತಿತ್ತು. ಆದರೆ ಉದಯ ಕುಮಾರ್ ಶೆಟ್ಟಿ ಪ್ರಭಾವ ಬೀರುವ ಮೂಲಕ ಟಿಕೆಟ್ ಪಡೆದುಕೊಂಡಿದ್ದಾರೆ.

ಎಂಎಲ್‌ಸಿ ಚುನಾವಣೆಗ; ಘೋಟ್ನೇಕರ್ ನಿರಾಸಕ್ತಿ, ನಿವೇದಿತ್ ಆಳ್ವಾ ಕಣಕ್ಕೆ? | Niveditha  Alva May Contest For MLC Elections - Kannada Oneindia

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಕ್ರಿಸ್ತಿಯನ್ ಕೋಟಾ ಬದಲು ಬಿಲ್ಲವರಿಗೆ ಟಿಕೆಟ್ ಸಿಗುತ್ತದೆ ಎನ್ನಲಾಗುತ್ತಿತ್ತು. ಒಂದು ಹಂತದಲ್ಲಿ ಬಿಲ್ಲವ ಮುಖಂಡ, ವಕೀಲ ಪದ್ಮರಾಜ್ ರಾಮಯ್ಯ ಟಿಕೆಟ್ ಫೈನಲ್ ಆಗಿದೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಕ್ರಿಸ್ತಿಯನ್ ಕೋಟಾ ಬದಲಿಸಿದರೆ ಪರಿಣಾಮ ನೆಟ್ಟಗಿರದು ಎಂದು ಕ್ರಿಸ್ತಿಯನ್ ಮುಖಂಡರು ಹೈಕಮಾಂಡ್ ಮಟ್ಟದಲ್ಲಿ ಬೆದರಿಕೆ ಹಾಕಿದ್ದು ಲೋಬೊಗೆ ಟಿಕೆಟ್ ಸಿಗುವಂತೆ ಮಾಡಿದೆ.

ಕಾಂಗ್ರೆಸ್ ಒಟ್ಟು 217 ಕ್ಷೇತ್ರಗಳಿಗೆ ಈವರೆಗೆ ಏಳು ಕ್ಷೇತ್ರಗಳ ಟಿಕೆಟ್ ಇನ್ನೂ ಬಾಕಿಯಿಟ್ಟಿದೆ. ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ ಇನ್ನೂ ಅಭ್ಯರ್ಥಿ ಘೋಷಣೆಯಾಗಿಲ್ಲ. ಉತ್ತರ ಕ್ಷೇತ್ರದಲ್ಲಿ ಮೊಯ್ದೀನ್ ಬಾವ ಮತ್ತು ಇನಾಯತ್ ಆಲಿ ತಮಗೇ ಟಿಕೆಟ್ ಎಂದು ಲಾಬಿ ನಡೆಸುತ್ತಿದ್ದಾರೆ. ಇದರಿಂದಾಗಿ ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಘೋಷಣೆಯನ್ನೂ ಇನ್ನೂ ಪೆಂಡಿಂಗ್ ಇಡಲಾಗಿದೆ. ದಕ್ಷಿಣ ಕನ್ನಡ- ಉಡುಪಿಯಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರವೊಂದೇ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗದೆ ಬಾಕಿಯಿದೆ.

ಉಳಿದಂತೆ, ನಿನ್ನೆಯಷ್ಟೇ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ವೀರಶೈವ- ಪಂಚಮಸಾಲಿ ಮುಖಂಡ ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದಿದ್ದಾರೆ. ಬಿಜೆಪಿ ಟಿಕೆಟ್ ಸಿಕ್ಕಿಲ್ಲವೆಂದು ಬಂಡಾಯ ಎದ್ದಿದ್ದ ಸವದಿ ಅವರನ್ನು ಕಾಂಗ್ರೆಸಿಗೆ ಸೆಳೆದುಕೊಳ್ಳಲಾಗಿತ್ತು. ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಬಿಟ್ಟು ಹೋಗಿದ್ದ ಶಿವಲಿಂಗೇಗೌಡ ಟಿಕೆಟ್ ಪಡೆದಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಎಚ್.ಸಿ.ಯೋಗೇಶ್ ಟಿಕೆಟ್ ಪಡೆದಿದ್ದಾರೆ. ಈಶ್ವರಪ್ಪ ಪ್ರತಿನಿಧಿಸುವ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ನಿಂದ ಟಿಕೆಟ್ ಫೈನಲ್ ಆಗಿಲ್ಲ. ಕುಮಟಾ ಕ್ಷೇತ್ರದಲ್ಲಿ ಸ್ಥಳೀಯ ಕಾಂಗ್ರೆಸಿಗರ ವಿರೋಧ ಮಧ್ಯೆಯೂ ಮಾರ್ಗರೆಟ್ ಪುತ್ರ ನಿವೇದಿತ್ ಆಳ್ವಾ ಟಿಕೆಟ್ ಪಡೆದಿದ್ದಾರೆ.

Mangalore JR Lobo gets city south ticket from Congress, Nivedit Alva for Kumta.Ashok Rai gets ticekt for Puttur.