ಬೆಳ್ತಂಗಡಿಯಲ್ಲಿ ಹರೀಶ್ ಪೂಂಜ ಅದ್ದೂರಿ ರೋಡ್ ಶೋ ; ರಕ್ಷಿತ್ ಶಿವರಾಂ ಪರವೂ ಕಾಂಗ್ರೆಸ್ ಕಾರ್ಯಕರ್ತರ ಜಿದ್ದು !

17-04-23 04:23 pm       Mangaluru Correspondent   ಕರಾವಳಿ

ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್- ಬಿಜೆಪಿ ಕಡೆಯಿಂದ ನಾಮಪತ್ರ ಸಲ್ಲಿಕೆಯಾಗಿದೆ. ಬಿಜೆಪಿಯಿಂದ ಹಾಲಿ ಶಾಸಕ ಹರೀಶ್ ಪೂಂಜ ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದು ಭಾರೀ ಸಂಖ್ಯೆಯ ಕಾರ್ಯಕರ್ತರ ನಡುವೆ ಅದ್ಧೂರಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದ್ದಾರೆ.

ಬೆಳ್ತಂಗಡಿ, ಎ.17: ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್- ಬಿಜೆಪಿ ಕಡೆಯಿಂದ ನಾಮಪತ್ರ ಸಲ್ಲಿಕೆಯಾಗಿದೆ. ಬಿಜೆಪಿಯಿಂದ ಹಾಲಿ ಶಾಸಕ ಹರೀಶ್ ಪೂಂಜ ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದು ಭಾರೀ ಸಂಖ್ಯೆಯ ಕಾರ್ಯಕರ್ತರ ನಡುವೆ ಅದ್ಧೂರಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದ್ದಾರೆ.

ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಅಲ್ಲಿಂದ 15 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಜೊತೆಗೆ ಹರೀಶ್ ಪೂಂಜಾ ಮೆರವಣಿಗೆ ನಡೆಸಿದರು. ಮೆರವಣಿಗೆ ಉದ್ದಕ್ಕೂ ಹರೀಶ್ ಪೂಂಜಾ ಪರ ಜೈಕಾರ ಮೊಳಗಿತ್ತು. ಕೇಸರಿ ಶಾಲು ಹಾಕಿದ ಮಹಿಳೆಯರು, ಯುವಕರ ರಣಘೋಷದ ಝೇಂಕಾರ, ಕೇಸರಿ ಬಾವುಟ ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿತ್ತು. ಬೆಳ್ತಂಗಡಿ ವಿಧಾನಸೌಧ ಕಚೇರಿಯಲ್ಲಿ ಬಿಗು ಬಂದೋಬಸ್ತ್ ನಡುವೆ ಹರೀಶ್ ಪೂಂಜ ನಾಮಪತ್ರ ಸಲ್ಲಿಸಿದರು. ಅತಿ ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದು ದೇವರ ಆಶೀರ್ವಾದ. ಜನರು ಅವಕಾಶ ಕೊಟ್ಟಿದ್ದಾರೆ. ಇದನ್ನು ಸದ್ಬಳಕೆ ಮಾಡಿದ್ದೇನೆ ಎಂದು ಇದೇ ವೇಳೆ ಹರೀಶ್ ಪೂಂಜ ಹೇಳಿದರು. ಎಂಎಲ್ಸಿ ಪ್ರತಾಪಸಿಂಹ ನಾಯಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮತ್ತಿತರ ನಾಯಕರು ಜೊತೆಗಿದ್ದರು.


ಬಿಜೆಪಿ ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಮಧ್ಯಾಹ್ನ ಹೊತ್ತಿಗೆ ಕಾಂಗ್ರೆಸ್ ಮೆರವಣಿಗೆ ಬೆಳ್ತಂಗಡಿಗೆ ಬಂತು. ಸಂತೆಕಟ್ಟೆಯಿಂದ ಎರಡು ಕಿಮೀ ಉದ್ದಕ್ಕೆ ನಡೆದುಕೊಂಡೇ ಬಂದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಪ್ರತಿಯಾಗಿ ರೋಡ್ ಶೋ ನಡೆಸಿದರು. ಎಂಟು ಸಾವಿರದಷ್ಟಿದ್ದ ಕಾರ್ಯಕರ್ತರು ಕಾಂಗ್ರೆಸ್ ಬಾವುಟ ಹಾರಿಸಿಕೊಂಡು ನುಗ್ಗಿ ಬಂದರು. ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರವಾಗಿ ಮಾಜಿ ಸಚಿವ ವಸಂತ ಬಂಗೇರ, ಐವಾನ್ ಡಿಸೋಜ, ರಕ್ಷಿತ್ ಭಾವ ಚಿತ್ರನಟ ವಿಜಯ ರಾಘವೇಂದ್ರ, ನಿಕೇತ್ ರಾಜ್ ಮೌರ್ಯ, ಹರೀಶ್ ಕುಮಾರ್ ಮತ್ತಿತರರು ಇದ್ದರು. ಕೆಲವರ ಪ್ರಕಾರ, ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪರವಾಗಿ ಇದೇ ಮೊದಲಿಗೆ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿದ್ದಾರಂತೆ. ಹಿಂದೆ ವಸಂತ ಬಂಗೇರ ಗೆಲ್ಲುತ್ತಿದ್ದರೂ, ಕಾರ್ಯಕರ್ತರ ಸಂಖ್ಯೆ ಸಾಮಾನ್ಯ ಇತ್ತು. ಈ ಬಾರಿ ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ ಪರ ಮೊಳಗಿದ ಹವಾ ಎದುರಿಸಲು ಕಾಂಗ್ರೆಸ್ ಕೂಡ ಸಾಕಷ್ಟು ತಯಾರಿ ನಡೆಸಿರುವುದು ಕಂಡುಬಂದಿದೆ.  

ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ನಾಮಿನೇಶನ್ ಭರಾಟೆ ನಡುವೆಯೇ ಸಂತೆಕಟ್ಟೆಯಲ್ಲಿ ಕಾರ್ಯಕರ್ತರು ಹೊಯ್ ಕೈ ನಡೆಸಿದರು. ವಾಹನಗಳಿಗೆ ಕಲ್ಲು ತೂರಿ ಪರಸ್ಪರ ಸಂಘರ್ಷಕ್ಕಿಳಿದು ಬಳಿಕ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

Belthangady BJP Supporters of Harish Poonja join in thousnads over nomination.Thousands of people gathered to witness the submission of nomination papers of BJP candidate Harish Poonja, the sitting MLA. Belthangady Congress Supporters of rakshith shivaram also join hands in nomination.