ಸ್ಟೇಡಿಯಮ್, ಸ್ವಿಮ್ಮಿಂಗ್ ಪೂಲ್ ಮಾಡ್ತೇನೆಂದ ಖಾದರ್ ಉಳ್ಳಾಲದ ಜನರನ್ನ ಫೂಲ್ ಮಾಡಿದ್ರು ; ತಾಂಟಲು ರೆಡಿಯಾದ ರಿಯಾಝ್ ನಾಮಪತ್ರ ಸಲ್ಲಿಕೆ 

17-04-23 08:52 pm       Mangalore Correspondent   ಕರಾವಳಿ

ಸುಸಜ್ಜಿತ ಸ್ಟೇಡಿಯಮ್, ಸ್ವಿಮ್ಮಿಂಗ್ ಫೂಲ್ ಮಾಡ್ತೇನೆಂದ ಶಾಸಕ ಖಾದರ್ ಅಭಿವೃದ್ಧಿ ವಿಚಾರದಲ್ಲಿ ಉಳ್ಳಾಲದ ಜನರನ್ನ ಫೂಲ್ ಮಾಡುತ್ತಲೇ ಬಂದಿದ್ದಾರೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಎಸ್ ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಹೇಳಿದರು. 

ಉಳ್ಳಾಲ, ಎ.17 : ಸುಸಜ್ಜಿತ ಸ್ಟೇಡಿಯಮ್, ಸ್ವಿಮ್ಮಿಂಗ್ ಫೂಲ್ ಮಾಡ್ತೇನೆಂದ ಶಾಸಕ ಖಾದರ್ ಅಭಿವೃದ್ಧಿ ವಿಚಾರದಲ್ಲಿ ಉಳ್ಳಾಲದ ಜನರನ್ನ ಫೂಲ್ ಮಾಡುತ್ತಲೇ ಬಂದಿದ್ದಾರೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಎಸ್ ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಹೇಳಿದರು. 

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉಳ್ಳಾಲ ವತಿಯಿಂದ ಸೋಮವಾರ ಕ್ಷೇತ್ರದ ಅಭ್ಯರ್ಥಿ ರಿಯಾಝ್ ಪರಂಗಿಪೇಟೆ ನಾಮಪತ್ರ ಸಲ್ಲಿಕೆಯ ಪೂರ್ವಭಾವಿಯಾಗಿ ತೊಕ್ಕೊಟ್ಟು ಕೇಂದ್ರ ಬಸ್ ನಿಲ್ದಾಣದ ‌ಬಳಿ ನಡೆದ ಸಾರ್ವಜನಿಕ‌ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಎಸ್ ಡಿಪಿಐಯ ಈ ಸಾರ್ವಜನಿಕ ಸಭೆ ನಡೆಸಲು ಕಲ್ಲಾಪಿನ ಯುನಿಟಿ ಸಭಾಂಗಣವನ್ನು ಬುಕ್ ಮಾಡಿದ್ದೆವು. ಆದರೆ ಕ್ಷೇತ್ರದ ಪ್ರಭಾವಿಯೋರ್ವ ನಮಗೆ ಸಭಾಂಗಣ ಸಿಗದೆ ಹಾಗೆ ಮಾಡಿದ್ದಾರೆ. ನಾವು ಹುಟ್ಟು ಹೋರಾಟಗಾರರಾಗಿದ್ದು ಸುಡು ಬಿಸಿಲಿರಲಿ, ಗಾಳಿ, ಮಳೆ ಇರಲಿ ಅದಕ್ಕೆ ಹಿಂಜರಿಯದೆ ಹೋರಾಟ ಮಾಡಿ ಜನರಿಗೆ ಸ್ವಾಭಿಮಾನದ ಬದುಕು ಕರುಣಿಸುವುದೇ ನಮ್ಮ  ಹೋರಾಟದ ಉದ್ದೇಶ ಎಂದರು.

ನೋಟ್ ಬ್ಯಾನ್ ಮಾತ್ರವಲ್ಲ ಜಿಎಸ್ ಟಿ ಇನ್ನಿತರ ಟ್ಯಾಕ್ಸ್ ಗಳಿಂದ ಜನರು ರೋಸಿದ್ದಾರೆ. ಡಿಜಿಟಲ್ ಕರೆನ್ಸಿ ಮುಖಾಂತರ ಉನ್ನತ ಮಟ್ಟದ ಶೋಷಣೆ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿಯ ಜಂಡಾ ಬೇರೆ ಬೇರೆ ಆದರೂ ಅಜೆಂಡಾ ಒಂದೇ ಆಗಿದೆ. ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ಚಿಂತೆ ಇಲ್ಲದವರನ್ನ ನಾವು ಆರಿಸಿ ವಿಧಾನ ಸೌಧಕ್ಕೆ ಕಳುಹಿಸುತ್ತಿದ್ದೇವೆ. ಶಾಸಕ ಖಾದರ್ ಅವರಿಗೆ ಒಂದು ಸರಕಾರಿ ಮೆಡಿಕಲ್ ಕಾಲೇಜು ಮಾಡಲು ಸಾಧ್ಯವಾಗಿಲ್ಲ. ಯಾಕೆಂದರೆ ಉಳ್ಳಾಲದ ಖಾಸಗಿ ಮೆಡಿಕಲ್ ಕಾಲೇಜ್ ನವರು ಅವರಿಗೆ ಕಿಕ್ ಬ್ಯಾಕ್ ಕೊಡುತ್ತಿದ್ದಾರೆಂದರು.

ಎಸ್ ಡಿಪಿಐ ಮುಖಂಡ ಅಥಾವುಲ್ಲ ಜೋಕಟ್ಟೆ ಮಾತನಾಡಿ ಹಿಜಾಬ್ ವಿಚಾರದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರನ್ನ ಕುರಿತು ನಿಮಗೆ ಬೇಕಾದ ರೀತಿಯಲ್ಲಿ ಜೀವಿಸಲು ಪಾಕಿಸ್ಥಾನ ಅಥವಾ ಸೌದಿಗೆ ಹೋಗಿ ಎಂದು ಹೇಳಿದ್ದ ಮುಸ್ಲಿಂ ಶಾಸಕ ಖಾದರ್ ಮಾತನ್ನ ನಾವು ಮರೆಯಬಾರದು. ಕಳೆದ ಚುನಾವಣೆಯಲ್ಲಿ ಖಾದರ್ ಗೆಲ್ಲಲು ನಾವು ಹೇಗೆ ಕಾರಣರಾದೆವೋ.. ಮುಸ್ಲಿಮರ ಪರ ಧ್ವನಿ ಎತ್ತದ ಇಂತಹ ಶಾಸಕ‌ನ ವಿರುದ್ಧ ಈ ಸಲ ಸ್ಪರ್ಧಿಸಲು ನಾವು ಹಕ್ಕುದಾರರು ಎಂದರು. ಸಾರ್ವಜನಿಕ ಸಭೆಯ ಬಳಿಕ ಉಳ್ಳಾಲ ಮಾಸ್ತಿಕಟ್ಟೆಯಿಂದ ಎಸ್ ಡಿಪಿಐ ಕಾರ್ಯಕರ್ತರೊಂದಿಗೆ ಕಾಲ್ನಡಿಗೆ ಜಾಥಾದಲ್ಲಿ ಉಳ್ಳಾಲ ನಗರಸಭೆಗೆ ತೆರಳಿದ ರಿಯಾಝ್ ಪರಂಗಿ ಪೇಟೆ ನಾಮಪತ್ರ ಸಲ್ಲಿಸಿದರು.

Khader has fooled people of building Staudim and swimming pool in Ullal slams SDPI Riaz Riyaz Farangipete in Mangalore.