ಮೂರು ವರ್ಷದಲ್ಲಿ 13 ಲಕ್ಷ ಯುವತಿಯರು ನಾಪತ್ತೆ ; ಸಮಗ್ರ ತನಿಖೆಗೆ ವಿಮೆನ್ ಇಂಡಿಯಾ ಮೂವ್ಮೇಂಟ್ ಆಗ್ರಹ 

12-09-23 05:03 pm       Mangalore Correspondent   ಕರಾವಳಿ

2023 ಜುಲೈ ತಿಂಗಳಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವಾಲಯ ಮಂಡಿಸಿದ ವರದಿಯ ಪ್ರಕಾರ 2019-2021ರ ಮೂರು ವರ್ಷಗಳಲ್ಲಿ ದೇಶಾದ್ಯಂತ 13 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ.

ಮಂಗಳೂರು, ಸೆ.12: 2023 ಜುಲೈ ತಿಂಗಳಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವಾಲಯ ಮಂಡಿಸಿದ ವರದಿಯ ಪ್ರಕಾರ 2019-2021ರ ಮೂರು ವರ್ಷಗಳಲ್ಲಿ ದೇಶಾದ್ಯಂತ 13 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ. ಈ ಪೈಕಿ 31,935 ಮಹಿಳೆಯರು ಹಾಗೂ ಬಾಲಕಿಯರು ಕರ್ನಾಟಕದಿಂದ ನಾಪತ್ತೆಯಾಗಿದ್ದಾರೆಂದು ವರದಿ ತಿಳಿಸಿದೆ. ಆದರೆ ಮಹಿಳಾ ಪರ ಸರ್ಕಾರ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ ಕರ್ನಾಟಕ ಸರ್ಕಾರವು ಈ ಬಗ್ಗೆ ಎಚ್ಚೆತ್ತುಕೊಂಡಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ವಿಶೇಷ ತನಿಖಾ ತಂಡದಿಂದ ಸಮಗ್ರ ತನಿಖೆ ನಡೆಸಬೇಕು ಎಂದು ವಿಮೆನ್ ಇಂಡಿಯಾ ಮೂವ್ಮೇಂಟ್ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ. 

ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ಒತ್ತಾಯ ಮಾಡಲಾಯಿತು. ರಾಜ್ಯದ ಬಹಳಷ್ಟು ಸಮಸ್ಯೆಗಳತ್ತ ರಾಜ್ಯ ಸರಕಾರ ಗಮನ ಕೊಡಬೇಕೆಂದೂ ಅದರಲ್ಲೂ ವಿಶೇಷವಾಗಿ
ಅಲ್ಪಸಂಖ್ಯಾತ ದಲಿತ, ಹಿಂದುಳಿದ ವರ್ಗಗಳ ಮತ ಪಡೆದು ಅಧಿಕಾರಕ್ಕೆ ಬಂದಿರುವ ಸರ್ಕಾರ ಈ ವರ್ಗಗಳ ಪರ ಅಭಿವೃದ್ಧಿ ವಿಷಯದಲ್ಲಿ ಹಾಗೂ ಅವರ ಮೇಲಾಗುತ್ತಿರುವ ದೌರ್ಜನ್ಯ, ಅನ್ಯಾಯದ ಬಗ್ಗೆ ನಿರ್ಲಕ್ಷ ವಹಿಸಿರುವುದು ಖಂಡನಾರ್ಹ. ಹಿಜಾಬ್, 2ಬಿ ಮೀಸಲಾತಿ ಮರು ಸ್ಥಾಪಿಸುವ ಭರವಸೆ ನೀಡಿದ್ದ ಸರ್ಕಾರ ಈಗ ಜಾಣ ಮೌನ ತಾಳಿದೆ. ಬಜೆಟ್ ನಲ್ಲೂ ಅಲ್ಪಸಂಖ್ಯಾತರನ್ನು ಕಡೆಗೆಣಿಸಿರುವುದು ಗಮನಾರ್ಹ. ಇಂತಹ ನಿರ್ಲಕ್ಷತನವನ್ನು ಕೈ ಬಿಟ್ಟು ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸ ಬೇಕೆಂದು ಸಭೆಯು ಆಗ್ರಹಿಸಿದೆ.

ಸುಲಭವಾಗಿ ಕೈಗೆಟಕುತ್ತಿರುವ ಮಾದಕ ಪದಾರ್ಥಗಳು ಯುವ ಸಮೂಹವನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ. ರಾಜ್ಯದಲ್ಲಿ ಮಾದಕ ವ್ಯಸನಿಗಳ ಬಂಧನವಾಗುತ್ತಿದೆಯೇ ಹೊರತು ಅದರ ಮೂಲವನ್ನು ಪತ್ತೆ ಹಚ್ಚುತ್ತಿಲ್ಲ. ಜೊತೆಗೆ ರಾಜಕೀಯ ಪ್ರಭಾವದಿಂದಾಗಿ ಆರೋಪಿಗಳು ಸುಲಭವಾಗಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಸರಕಾರ ಮಾದಕ ದ್ರವ್ಯದ ಜಾಲದ ಮೂಲವನ್ನು ಪತ್ತೆ ಹಚ್ಚಿ ನಿರ್ಮೂಲನೆಗೊಳಿಸಿ ಸ್ವಸ್ಥ ಸಮಾಜವನ್ನು ನಿರ್ಮಿಸಬೇಕೆಂದು ಸರಕಾರವನ್ನು ಒತ್ತಾಯಿಸಿದೆ.

ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯೆ ಮೇರಿ ವೇಗಸ್ ಮಹಿಳಾ ಸಂಘಟನೆ ಅನಿವಾರ್ಯತೆಯ ಬಗ್ಗೆ ಮಾತನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ, ರಾಜ್ಯ ಪದಾಧಿಕಾರಿಗಳು, ರಾಜ್ಯ ಸಮಿತಿ ಸದಸ್ಯೆಯರು, ಎಲ್ಲಾ ಜಿಲ್ಲೆಗಳ ಅಧ್ಯಕ್ಷೆ-ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

13 lakhs girls missing in the last three years, Mangalore Women India Movement  demands clear investigation. 13 thousnad girls from Karnataka go missing.