Udayavani Journalist Manohar Prasad, journalists pay tribute: ಹಿಂದೆಲ್ಲ ಪತ್ರಿಕೆಗಳಿಗೆ, ಪತ್ರಕರ್ತರಿಗೆ ಬದ್ಧತೆ ಇತ್ತು ; 30 ವರ್ಷಗಳ ಹಿಂದೆ ನಾವು ಮೊದಲು ಸಾಯೋದು ಯಾರು ಅಂತ ಚರ್ಚೆ ಮಾಡಿದ್ದೆವು..! ಮನೋಹರ್ ಬಗ್ಗೆ ಚಿದಂಬರ ಬೈಕಂಪಾಡಿ ಸ್ಮರಣೆ 

02-03-24 04:32 pm       Mangalore Correspondent   ಕರಾವಳಿ

ಹಿಂದೆಲ್ಲಾ ಪತ್ರಿಕೆಗಳಿಗೂ, ಪತ್ರಕರ್ತರಿಗೂ ಬದ್ಧತೆ ಇತ್ತು. ಈಗಿನ ಪತ್ರಕರ್ತರಿಗೆ ಆ ರೀತಿಯ ಬದ್ಧತೆ ಇಲ್ಲ. ನಾನು ಮತ್ತು ಮನೋಹರ್ ಸಮ್ಮೇಳನ ಇನ್ನಿತರ ಉದ್ದೇಶಕ್ಕೆ ದೂರಕ್ಕೆ ಹೋಗಿ ಒಂದೇ ರೂಮಿನಲ್ಲಿ ಉಳಿದುಕೊಂಡರೂ ಸುದ್ದಿಯ ಬಗ್ಗೆ ಚರ್ಚೆ ಇರಲಿಲ್ಲ.

ಮಂಗಳೂರು, ಮಾ.2: ಹಿಂದೆಲ್ಲಾ ಪತ್ರಿಕೆಗಳಿಗೂ, ಪತ್ರಕರ್ತರಿಗೂ ಬದ್ಧತೆ ಇತ್ತು. ಈಗಿನ ಪತ್ರಕರ್ತರಿಗೆ ಆ ರೀತಿಯ ಬದ್ಧತೆ ಇಲ್ಲ. ನಾನು ಮತ್ತು ಮನೋಹರ್ ಸಮ್ಮೇಳನ ಇನ್ನಿತರ ಉದ್ದೇಶಕ್ಕೆ ದೂರಕ್ಕೆ ಹೋಗಿ ಒಂದೇ ರೂಮಿನಲ್ಲಿ ಉಳಿದುಕೊಂಡರೂ ಸುದ್ದಿಯ ಬಗ್ಗೆ ಚರ್ಚೆ ಇರಲಿಲ್ಲ. ಮರುದಿನ ಪತ್ರಿಕೆ ನೋಡಿಯೇ, ಅವ ಏನು ಬರೆದಿದ್ದಾನೆ ಅಂತ ನಾನು ನೋಡೋದು. ನಾನೇನು ಬರೆದಿದ್ದೇನೆ ಅಂತ ಅವ ನೋಡುತ್ತಿದ್ದ. ನಮ್ಮ ನಡುವೆ ಸುದ್ದಿಯ ಬಗ್ಗೆ ಕಾಂಪಿಟೀಶನ್ ಇತ್ತೇ ವಿನಾ ವೈಯಕ್ತಿಕ ವಿಚಾರದಲ್ಲಿ ಇರಲಿಲ್ಲ. 30 ವರ್ಷಗಳ ಹಿಂದೆಯೇ ನಮ್ಮಲ್ಲಿ ಯಾರು ಮೊದಲು ಸಾಯೋದು ಅಂತ ಚರ್ಚೆ ನಡೆಸಿದ್ದೆವು..

ಇದು ಅಗಲಿದ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಬಗ್ಗೆ ಒಡನಾಡಿಯಾಗಿದ್ದ ಚಿದಂಬರ ಬೈಕಂಪಾಡಿ ಮಾತು. ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನುಡಿನಮನ ಕಾರ್ಯಕ್ರಮದಲ್ಲಿ ಹಲವು ಹಿರಿಯ ಪತ್ರಕರ್ತರು ಪಾಲ್ಗೊಂಡಿದ್ದರು. ಈಗ ಒಂದೇ ರೀತಿಯ ಸುದ್ದಿ 2-3 ಪತ್ರಿಕೆಗಳಲ್ಲಿ ಬರುವುದಿದೆ. ಈಗಿನ ಕಾಂಪಿಟೀಶನ್ ಕಾರಣಕ್ಕೆ ಇದಿರಬಹುದು. ಆದರೆ ಈ ರೀತಿ ಆಗುವುದು ಒಳ್ಳೆಯದಲ್ಲ. ಸುದ್ದಿಗಳನ್ನು ನಾವಾಗಿಯೇ ಗ್ರಹಿಸಿ ಬರೆಯಬೇಕು. ಮನೋಹರ್ ಪ್ರಸಾದ್ ಉಳಿದೆಲ್ಲ ವಿಚಾರಗಳನ್ನು ಲೋಕಾಭಿರಾಮ ಮಾತಾಡುತ್ತಿದ್ದರು. ಸುದ್ದಿಯ ಬಗ್ಗೆ ಒಂದಕ್ಷರವನ್ನೂ ಹೇಳಿಕೊಳ್ಳುತ್ತಿರಲಿಲ್ಲ. ನಾವು ಸಾಯುವ ಬಗ್ಗೆ ಚರ್ಚೆ ನಡೆಸಿದ ರೀತಿಯಲ್ಲೇ ನನಗಿಂತ 6 ವರ್ಷ ಕಿರಿಯನಾದ್ರೂ ಮೊದಲೇ ಹೋಗಿಬಿಟ್ಟ ಎಂದರು.

ಮಂಗಳೂರು ಟುಡೇ ಪತ್ರಿಕೆಯ ಹಿರಿಯ ಪತ್ರಕರ್ತ ಜಾರ್ಜ್ ಮಾತನಾಡಿ, ನಾನು 8-10 ವರ್ಷಗಳಿಗೆ ಹಿರಿಯನಾಗಿದ್ದರೂ ಮನೋಹರಣ್ಣ ನನ್ನನ್ನು ಜಾರ್ಜೆಟ್ಟ ಎಂದೇ ಹೇಳುತ್ತಿದ್ದರು. ನಾನು ಆಗ ಎಕ್ಸಿಕ್ಯುಟಿವ್ ಆಗಿದ್ದರೂ ತುಂಬ ಮರ್ಯಾದೆ ಕೊಟ್ಟೇ ಮಾತಾಡುತ್ತಿದ್ದರು. ಅವರು ಇಷ್ಟು ಬೇಗ ಹೋಗುತ್ತಾರೆಂದು ಅಂದ್ಕೊಂಡಿರಲಿಲ್ಲ. ಅವರೊಬ್ಬ ಎನ್ ಸೈಕ್ಲೋಪೀಡಿಯಾ ಎಂದರು. ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಮಾತನಾಡಿ, ಮನೋಹರ್ ಅವರು ಕಾರ್ಯಕ್ರಮ ನಿರೂಪಣೆಗೆ ಬರ್ತಾರಂದ್ರೆ ನಮ್ಮ ಅರ್ಧ ಹೊಣೆ ಜಾರಿದಂತೆ. 5 ನಿಮಿಷ ಮೊದಲು ಬಂದರೂ ಅಲ್ಲಿರುವ ಎಲ್ಲರ ಜಾತಕ ಹೇಳಿದಂತೆ ವಿವರ ಕೊಡುತ್ತಿದ್ದರು. ಅದ್ಭುತ ಜ್ಞಾಪಕ ಶಕ್ತಿ ಅವರಲ್ಲಿತ್ತು ಎಂದರು.

ಮಾಜಿ ಪತ್ರಕರ್ತ ನಂದಗೋಪಾಲ್ ಮಾತನಾಡಿ, ಮನೋಹರ್ ಸರ್ ನಮ್ಮ ಒಡನಾಡಿ ಅನ್ನುವುದಕ್ಕಿಂತಲೂ ಗುರು ಸ್ಥಾನದಲ್ಲಿದ್ದವರು. 1994ರಲ್ಲಿ ಪತ್ರಿಕಾ ಕೆಲಸಕ್ಕೆ ಕಾಲಿಟ್ಟಾಗ, ನೀವು ಹೊಸದಾಗಿ ಸೇರಿದ್ರಾ ಎಂದು ಅವರಾಗಿಯೇ ಬಂದು ಪರಿಚಯ ಹೇಳಿಕೊಂಡಿದ್ದರು. ಅಷ್ಟು ಸರಳ ವ್ಯಕ್ತಿತ್ವ ಅವರದ್ದು. ಆನಂತರ, ಒಂದು ದಿನ ನನಗೆ ಮೆಸೇಜ್ ಮಾಡಿ ಕಚೇರಿಗೆ ಬರುವಂತೆ ಹೇಳಿದ್ರು. ಕಚೇರಿಗೆ ಕಾಲಿಟ್ಟಾಗ ಒಬ್ಬರು ಮಹಿಳೆ ಅಲ್ಲಿದ್ದರು. ಏಶ್ಯನ್ ಏಜ್ ಪತ್ರಿಕೆಯ ಎಡಿಟರ್ ಅವರಾಗಿದ್ದರು. ನನ್ನನ್ನು ಪರಿಚಯಿಸಿ ಇವರು ನಿಮಗೆ ಸೂಕ್ತ ವ್ಯಕ್ತಿ ಎಂದು ಶಿಫಾರಸು ಮಾಡಿದ್ದರು. ಆನಂತರ ಹಲವು ಪತ್ರಿಕೆಗಳಿಗೆ ಹೋಗಿ ಬಂದಿದ್ದೇನೆ. ಮನೋಹರಣ್ಣ ಆಟವಾಗಲೀ, ಊಟವಾಗಲೀ ಪರ್ಫೆಕ್ಟ್ ಟೈಮಿಂಗ್. ಈ ಗೋಪಾಲ್ ಲೇಟ್ ನಂದು ಗೋಪಾಲ್. ಹೋಗುವಾಗಲೂ ಅವರು ಮೊದಲು ಹೋಗೇ ಬಿಟ್ಟರು ಎಂದು ಕಣ್ಣೀರು ಹಾಕಿದರು.

ಅವರ ಅಗಾಧ ಮೆಮರಿಯೇ ಪವರ್ ನಮಗೆಲ್ಲ ಕುತೂಹಲ. ರಾತ್ರಿ ಒಂದು ಗಂಟೆ ವರೆಗೆ ನಾವು ಜೊತೆಗೆ ಕೂರುತ್ತಿದ್ದೆವು. ಬೆಳಗ್ಗೆ 6 ಗಂಟೆಗೆ ಬೇಕಿದ್ದರೂ ರೆಡಿಯಾಗಿ ಬರುತ್ತಿದ್ದರು. ಬೆಳಗ್ಗೆ ಕ್ರಿಕೆಟ್ ಇದ್ದರೆ, ಬಾಲ್, ಬ್ಯಾಟ್, ವಿಕೇಟ್ ಹಿಡ್ಕೊಂಡು ಬರುತ್ತಿದ್ದರು. ಅದರ ನಡುವೆ ಅಷ್ಟೆಲ್ಲಾ ಬರೀತಿದ್ದರು. ಇದನ್ನೆಲ್ಲ ಬರೆಯೋಕೆ, ಅದಕ್ಕೆ ರೆಡಿ ಮಾಡಿಕೊಳ್ಳಲು ಸಮಯ ಹೇಗೆ ಹೊಂದಿಸಿಕೊಳ್ಳುತ್ತಿದ್ದರು. ಯಾವಾಗ ಬರೀತಿದ್ದರು ಅನ್ನೋದೇ ಸೋಜಿಗ. ಪ್ರತಿ ವಾರ ಬರುತ್ತಿದ್ದ ನಮ್ಮೂರು ಅಂಕಣ 350 ಸಂಚಿಕೆ ಪೂರೈಸಿದ್ದು ದೊಡ್ಡ ದಾಖಲೆ. ಅವರು ಆರಂಭದಿಂದ ಈವತ್ತಿನ ವರೆಗೂ ಯಾವತ್ತೂ ಕಂಪ್ಯೂಟರ್ ಮುಟ್ಟಿರಲಿಲ್ಲ. ಪೂರ್ತಿ ಕೈಯಲ್ಲಿ ಬರೆದಿದ್ದೇ. ನಮ್ಮೂರು ಅಂಕಣವನ್ನು ಇಂಗ್ಲಿಷಲ್ಲಿ ತರಬೇಕೆಂದು ಅವರಲ್ಲೇ ಹೇಳಿದ್ದೆ. ಬರಲು ಹೇಳಿದ್ದರು. ಹೋಗಲು ಆಗಿರಲಿಲ್ಲ. ಆ ಕೆಲಸವನ್ನು ನಾನು ಇಂಗ್ಲಿಷಿನಲ್ಲಿ ಕಂತು ಕಂತಿನಲ್ಲಿ ಪುಸ್ತಕ ರೂಪದಲ್ಲಿ ತರುತ್ತೇನೆ ಎಂದರು ನಂದಗೋಪಾಲ್.

ಅನ್ನು ಮಂಗಳೂರು ಮಾತನಾಡಿ, 30 ವರ್ಷಗಳ ಹಿಂದೆಯೇ ಕೇಬಲ್ ವಾಹಿನಿ ಆರಂಭಿಸಲು ಮನೋಹರಣ್ಣ ಸ್ಫೂರ್ತಿಯಾಗಿದ್ದರು. ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿಯಂತಹ ತಾರಾಮಣಿಯರನ್ನು ತುಳುವಿನಲ್ಲೇ ಸಂದರ್ಶನ ಮಾಡಿದ್ದ ಐಕೈಕ ಪತ್ರಕರ್ತ ಮನೋಹರಣ್ಣ. ಮಂಗಳೂರಿಗೆ ಯಾರೇ ಸೆಲೆಬ್ರಿಟಿಗಳು ಬಂದರೂ ಅವರನ್ನು ಸಂದರ್ಶನ ಮಾಡುತ್ತಿದ್ದರು. ಇಡೀ ಕರ್ನಾಟಕದಲ್ಲಿ ನೋಡಿದರೆ ಮಂಗಳೂರಿನಲ್ಲೇ ಅತಿ ಹೆಚ್ಚು ಕೇಬಲ್ ವಾಹಿನಿಗಳಿವೆ, ಅದು ನಮ್ಮ ಹೆಚ್ಚುಗಾರಿಕೆ ಎಂದರು.

ವಿಜಯ ಕರ್ನಾಟಕ ಪತ್ರಿಕೆಯ ನಿವೃತ್ತ ಪತ್ರಕರ್ತ ಯುಕೆ ಕುಮಾರನಾಥ್ ಮಾತನಾಡಿ, ನಮಗೆಲ್ಲ ಕಾಲೇಜು ದಿನಗಳಲ್ಲಿ ಮನೋಹರ ಪ್ರಸಾದ್, ಚಿದಂಬರ ಬೈಕಂಪಾಡಿ, ಇಸ್ಮಾಯಿಲ್ ಎಲ್ಲ ರೋಲ್ ಮಾಡೆಲ್ ಗಳು. ಅವರನ್ನೆಂದೂ ನೇರವಾಗಿ ನೋಡಿರಲಿಲ್ಲ. ಮಂಗಳೂರು ಮಿತ್ರ ಪತ್ರಿಕೆಗೆ ಸೇರಿದ ಸಂದರ್ಭದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದೆ. ನನ್ನನ್ನು ಪುತ್ತಿಗೆ ಮಠದ ಪರ್ಯಾಯ ಕವರೇಜ್ ಗೆ ಕಳಿಸಿದ್ದರು. ಅಲ್ಲಿ ಸಿಕ್ಕವರು ನಾವು ಒಂದು ಆವರ್ತ ಆಯಿತು ಎಂದರು. ಅಂದ್ರೆ, 16 ವರ್ಷಗಳ ಪರ್ಯಾಯ ಮುಗಿಸಿದ್ದೇನೆ ಅಂತ. ನನಗೆ ಅರ್ಧ ಪೇಜ್ ಕವರೇಜ್ ಸೂಚಿಸಲಾಗಿತ್ತು. ಮನೋಹರ್ ಸರ್ ಮೂಲೆಯಲ್ಲಿ ಕುಳಿತು ಏನೋ ಬರೆಯುತ್ತಿದ್ದರು. ಮರುದಿನ ನೋಡಿದರೆ, ಒಬ್ಬರೇ ಎರಡು ಪುಟಕ್ಕೆ ಬರೆದಿದ್ದರು. ಬರವಣಿಗೆ ಮತ್ತು ನೆನಪಿನ ಶಕ್ತಿ ಅಗಾಧವಾಗಿತ್ತು ಎಂದು ಸ್ಮರಿಸಿದರು.

ಪ್ರೆಸ್ ಕ್ಲಬ್ ಅಧ್ಯಕ್ಷ, ಹಿರಿಯ ಪತ್ರಕರ್ತ ಹರೀಶ್ ರೈ ಮಾತನಾಡಿ, ಮನೋಹರ್ ಪ್ರಸಾದ್ ಹೆಸರಲ್ಲಿ ಒಂದು ಪ್ರಶಸ್ತಿ ಸ್ಥಾಪಿಸಿ ಮಾರ್ಚ್ 1ರಂದು ಪ್ರದಾನ ಕಾರ್ಯಕ್ರಮ ಆಗುವಂತೆ ಯೋಜನೆ ಹಾಕುತ್ತಿದ್ದೇವೆ. ಒಬ್ಬ ಪತ್ರಕರ್ತನಾಗಿ ಎಷ್ಟು ಜನರ ಪ್ರೀತಿ ಗಳಿಸಿದ್ದರು ಅಂದ್ರೆ, ನಿನ್ನೆ ಸೇರಿದ ಜನರೇ ಸಾಕ್ಷಿ ಎಂದರು. ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ ಮಾತನಾಡಿ, ಮನೋಹರ್ ಮತ್ತು ನನ್ನದು 40 ವರ್ಷಗಳ ಸಂಬಂಧ. 1988ರಲ್ಲಿ ಸರ್ವಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದಾಗ ಸುದ್ದಿಯ ವಿಚಾರದಲ್ಲಿ ಮನೋಹರ್ ಅವರ ಕಚೇರಿಗೆ ಹೋಗಿ ಜಗಳ ಮಾಡುತ್ತಿದ್ದೆವು. ಎದುರಾಳಿಗಳದ್ದು ಉದ್ದ ಬಂದಿದೆ. ನಮ್ಮದು ಚಿಕ್ಕದು ಬಂದಿದೆ ಅಂತ. ಐವನನ್ನ ಎಂದೇ ನನ್ನನ್ನು ಕರೆಯುತ್ತಿದ್ದರು. ಮರ್ಯಾದೆ ಕೊಡುವುದು, ಗಳಿಸುವುದನ್ನು ಅವರಿಂದ ಕಲಿಯಬೇಕ. ಒಬ್ಬ ಪತ್ರಕರ್ತನಿಗೆ ರಾಜ್ಯ ಮಟ್ಟದ ಗೌರವ ಅಂದ್ರೆ, ಸಣ್ಣ ವಿಚಾರವಲ್ಲ. ಅಗಲಿದಾಗ ರಾಜ್ಯ ಸರ್ಕಾರಿ ಗೌರವ ಸಿಕ್ಕಿರೋದು ಅವರ ಹಿರಿತನ, ಪತ್ರಿಕೋದ್ಯಮದ ಸಾಧನೆಗೆ ಸಂದ ಗೌರವ ಎಂದರು.

Udayavani Journalist Manohar Prasad death, memorial meeting held at press club Mangalore, journalists pay tribute. Senior journalist Manohar Prasad, 64, who served in Udayavani for over three decades, passed away in a hospital in Mangaluru on Friday. A native of Karvalu village of Karkala taluk in Udupi district, Mr. Prasad started his career in journalism with Navabharata Kannada. He then joined Udayavani as a reporter in Mangaluru. He served in Udayavani for 36 years, including as the Chief of Bureau in Mangaluru. He retired as Assistant Editor of the paper.