ಬಿ.ಸಿ.ರೋಡಿನಲ್ಲಿ ನಾರಾಯಣ ಗುರು ವೃತ್ತ ಮರು ನಿರ್ಮಾಣ ; ಸ್ಥಳೀಯ ಸಮಿತಿ ನಿರ್ಣಯವೇ ಅಂತಿ‌ಮ, ಸಂಸದ ಬ್ರಿಜೇಶ್ ಚೌಟ ಭರವಸೆ 

16-09-24 11:02 pm       Mangalore Correspondent   ಕರಾವಳಿ

ಬಿ.ಸಿ. ರೋಡ್ ಜಂಕ್ಷನ್‌ನಲ್ಲಿರುವ ಬ್ರಹ್ಮರ್ಷಿ ನಾರಾಯಣ ಗುರು ವೃತ್ತವನ್ನು ಮಾದರಿ ವೃತ್ತವನ್ನಾಗಿ ಪುನರ್‌ ನಿರ್ಮಾಣ ಮಾಡುವ ಕುರಿತಂತೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸೋಮವಾರ ಬಿ.ಸಿರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಬಿಲ್ಲವ ಸಮುದಾಯದ ಮುಖಂಡರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.

ಬಂಟ್ವಾಳ, ಸೆ.16: ಬಿ.ಸಿ. ರೋಡ್ ಜಂಕ್ಷನ್‌ನಲ್ಲಿರುವ ಬ್ರಹ್ಮರ್ಷಿ ನಾರಾಯಣ ಗುರು ವೃತ್ತವನ್ನು ಮಾದರಿ ವೃತ್ತವನ್ನಾಗಿ ಪುನರ್‌ ನಿರ್ಮಾಣ ಮಾಡುವ ಕುರಿತಂತೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸೋಮವಾರ ಬಿ.ಸಿರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಬಿಲ್ಲವ ಸಮುದಾಯದ ಮುಖಂಡರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಕ್ಯಾ. ಚೌಟ ಅವರು "ಬಿ.ಸಿ. ರೋಡ್ ನಲ್ಲಿ ಮರು ನಿರ್ಮಾಣವಾಗಲಿರುವ ಬ್ರಹ್ಮರ್ಷಿ ನಾರಾಯಣ ಗುರು ವೃತ್ತವನ್ನು ನೋಡಿದಾಗ ಅದು ನಮ್ಮ ಸರ್ಕಲ್ ಎನ್ನುವ ಭಾವನೆ ಸ್ಥಳೀಯರಲ್ಲಿ ಮೂಡಬೇಕು. ಗುತ್ತಿಗೆದಾರರು ಅಲ್ಲಿ ಕೇವಲ ಸರ್ಕಲ್ ನಿರ್ಮಾಣ ಮಾಡಿದರೆ ಸಾಲದು. ಬದಲಾಗಿ ಇಲ್ಲಿನ ಜನರ ಅಭಿಪ್ರಾಯ ಸಂಗ್ರಹಿಸಿ ಅದರ ಆಧಾರದಲ್ಲಿ ಈ ವೃತ್ತವನ್ನು ಮಾದರಿ ವೃತ್ತವಾಗಿ ಅಭಿವೃದ್ದಿಪಡಿಸಬೇಕು. ಆ ಮೂಲಕ ಇದೊಂದು ಬಂಟ್ವಾಳ ಜನತೆಯ ಸರ್ಕಲ್ ಆಗಿ ರೂಪುಗೊಳ್ಳಬೇಕು" ಎಂದು ಸಲಹೆ ನೀಡಿದರು. 

ಬ್ರಹ್ಮರ್ಷಿ ನಾರಾಯಣ ಗುರು ವೃತ್ತ ನಿರ್ಮಾಣದ ಜಾಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೆದ್ದಾರಿ ಪ್ರಾಧಿಕಾರದವರು ಗುರುತಿಸಿರುವ ಅಷ್ಟೇ ಜಾಗದಲ್ಲಿ ವೃತ್ತವನ್ನು ಪುನರ್‌ ನಿರ್ಮಿಸಬೇಕಾಗುತ್ತದೆ. ಆದರೆ ವೃತ್ತದ ವಿನ್ಯಾಸದಲ್ಲಿ ನಮಗೆ ಬೇಕಾದಂತೆ ಕೆಲವೊಂದು ಬದಲಾವಣೆ ಮಾಡುವುದಕ್ಕೆ ಅವಕಾಶ ಇದೆ. ಈ ಸರ್ಕಲ್ ಜಿಲ್ಲೆಯ ಸಂಸ್ಕೃತಿ ಪ್ರತಿಬಿಂಬಿಸುವ ರೀತಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು. 

ವೃತ್ತದ ಮರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯರನ್ನು ಒಳಗೊಂಡ ಸಮಿತಿಯೊಂದನ್ನು ನಿರ್ಮಿಸಲಾಗುತ್ತದೆ. ಈ ಸಮಿತಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ವೃತ್ತವನ್ನು ಯಾವ ರೀತಿ ನಿರ್ಮಿಸಬೇಕೆಂಬ ನಿರ್ಧಾರ ತೆಗೆದುಕೊಳ್ಳುತ್ತಾರೆ. ಬಳಿಕ ಅದನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಅಂತಿಮ ರೂಪ ನೀಡಲಾಗುತ್ತದೆ ಎಂದು ಕ್ಯಾ. ಚೌಟ ತಿಳಿಸಿದ್ದಾರೆ.

ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ ಅಜ್ಮಿ, ಪುರಸಭಾ ಅಧ್ಯಕ್ಷ ವಾಸು ಪೂಜಾರಿ, ಬೂಡಾ ಅಧ್ಯಕ್ಷ ಬೇಬಿ ಕುಂದರ್, ಬಿಲ್ಲವ ಸಂಘದ ತಾಲೂಕು ಅದ್ಯಕ್ಷ ಸಂಜೀವ ಪೂಜಾರಿ, ಮಾಜಿ ಶಾಸಕ ರುಕ್ಮಯ ಪೂಜಾರಿ, ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಿಲ್ಲವ ಸಂಘದ ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ ಮತ್ತಿತರರು ಭಾಗವಹಿಸಿದ್ದರು.

Narayana guru Circle to be rebuilt in bc road says captain Brijesh Chowta in Mangalore.