Mangalore Mayor elections 2024: ಮಂಗಳೂರು ಮಹಾನಗರ ಪಾಲಿಕೆ ; ಮೇಯರ್ ಸ್ಥಾನಕ್ಕೆ ಮನೋಜ್ ದೇರೆಬೈಲ್ ಅವಿರೋಧ ಆಯ್ಕೆ ಸಾಧ್ಯತೆ, ಉಪ ಮೇಯರ್ ಸ್ಥಾನಕ್ಕೆ ಭಾನುಮತಿ ಬಿಜೆಪಿ ಅಭ್ಯರ್ಥಿ

18-09-24 10:45 pm       Mangalore Correspondent   ಕರಾವಳಿ

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಬಿಜೆಪಿ ಹೆಸರು ಅಂತಿಮಗೊಳಿಸಿದೆ. ಉತ್ತರ ವಿಧಾನಸಭೆ ಕ್ಷೇತ್ರದ 17ನೇ ವಾರ್ಡ್ ಸದಸ್ಯ ಮನೋಜ್ ದೇರೆಬೈಲ್ ಅವರನ್ನು ಮೇಯರ್ ಸ್ಥಾನಕ್ಕೆ ಅಭ್ಯರ್ಥಿಯಾಗಿಸಿದೆ.

ಮಂಗಳೂರು, ಸೆ.18: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಬಿಜೆಪಿ ಹೆಸರು ಅಂತಿಮಗೊಳಿಸಿದೆ. ಉತ್ತರ ವಿಧಾನಸಭೆ ಕ್ಷೇತ್ರದ 17ನೇ ವಾರ್ಡ್ ಸದಸ್ಯ ಮನೋಜ್ ದೇರೆಬೈಲ್ ಅವರನ್ನು ಮೇಯರ್ ಸ್ಥಾನಕ್ಕೆ ಅಭ್ಯರ್ಥಿಯಾಗಿಸಿದೆ. ಮೇಯರ್ ಸ್ಥಾನ ಈ ಬಾರಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಕಾಂಗ್ರೆಸಿನಲ್ಲಿ ಅಭ್ಯರ್ಥಿ ಇಲ್ಲದಿರುವುದರಿಂದ ಬಹುತೇಕ ಅವಿರೋಧ ಆಯ್ಕೆಯಾಗಲಿದೆ.
 
ಉಪ ಮೇಯರ್ ಸ್ಥಾನಕ್ಕೆ ದಕ್ಷಿಣ ವಿಧಾನಸಭೆ ಕ್ಷೇತ್ರದ ವಾರ್ಡ್ ನಂಬರ್ 58ರ ಬೋಳಾರದ ಬಿಜೆಪಿ ಸದಸ್ಯೆ ಭಾನುಮತಿ ಪಿ.ಎಸ್ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ. ಉಪ ಮೇಯರ್ ಸ್ಥಾನ ಸಾಮಾನ್ಯ ಮೀಸಲಾತಿಗೆ ಒಳಪಟ್ಟಿದ್ದು, ಯಾರಿಗೂ ಈ ಸ್ಥಾನಕ್ಕೆ ಸ್ಪರ್ಧಿಸಬಹುದು. ಕಾಂಗ್ರೆಸಿನಿಂದ ಉಪ ಮೇಯರ್ ಸ್ಥಾನಕ್ಕೆ ಅಭ್ಯರ್ಥಿ ಇಳಿಸುವ ಸಾಧ್ಯತೆಯಿದೆ. ಆದರೆ ಬಿಜೆಪಿ 33 ಸದಸ್ಯರೊಂದಿಗೆ ಪೂರ್ಣ ಬಹುಮತ ಹೊಂದಿರುವುದು ಮತ್ತು ಕಾಂಗ್ರೆಸ್ ಕೇವಲ 14 ಸದಸ್ಯರನ್ನು ಹೊಂದಿರುವುದರಿಂದ ಫಲಿತಾಂಶ ಬದಲಾಗಲ್ಲ.
 
ಈಗಾಗಲೇ ಮಹಾನಗರ ಪಾಲಿಕೆಯ ಅವಧಿ ಮುಗಿಯಲು ಇನ್ನು ಆರು ತಿಂಗಳು ಬಾಕಿಯಿದೆ. ಹೀಗಾಗಿ ಕೊನೆಯ ಅವಧಿಯ ಮೇಯರ್ ಸ್ಥಾನದಲ್ಲಿದ್ದವರು ಆರು ತಿಂಗಳ ಕಾಲ ಅಷ್ಟೇ ಅಧಿಕಾರದಲ್ಲಿರುತ್ತಾರೆ. ಎರಡನೇ ಅವಧಿಯಲ್ಲಿ ಮೀಸಲಾತಿ ಘೋಷಣೆ ವಿಳಂಬ ಆಗಿದ್ದರಿಂದ ಕೊನೆಯ ಮೇಯರ್ ಗಳಿಗೆ ಅಧಿಕಾರಾವಧಿ ಕಡಿಮೆಯಾಗಿದೆ. ಸಾಮಾನ್ಯವಾಗಿ ಒಂದು ವರ್ಷದ ಅವಧಿಗೆ ಮೇಯರ್ ಆಯ್ಕೆ ನಡೆಯುತ್ತದೆ. ಐದು ಅವಧಿಯಲ್ಲಿ ದಿವಾಕರದಾಸ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ದಕ್ಷಿಣ ವಿಧಾನಸಭೆ ಕ್ಷೇತ್ರದಿಂದಲೇ ಮೇಯರ್ ಆಗಿದ್ದರು. ಉತ್ತರದಿಂದ ಕೆಪಿಟಿ ವಾರ್ಡಿನ ಜಯಾನಂದ ಅಂಚನ್ ಒಂದು ಅವಧಿಗೆ ಮೇಯರ್ ಆಗಿದ್ದರು. ಈ ಬಾರಿ ಮತ್ತೆ ಉತ್ತರ ಕ್ಷೇತ್ರದ ದೇರಬೈಲ್ ವಾರ್ಡಿನ ಸದಸ್ಯರಿಗೆ ಮೇಯರ್ ಸ್ಥಾನ ನೀಡಲಾಗಿದೆ. ಎಸ್ಸಿ ಅಭ್ಯರ್ಥಿ ದಕ್ಷಿಣ ಕ್ಷೇತ್ರದಲ್ಲಿ ಮತ್ತೊಬ್ಬರಿದ್ದರೂ, ಮೊದಲ ಬಾರಿ ಕಾರ್ಪೊರೇಟರ್ ಆಗಿರುವ ಮನೋಜ್ ಕುಮಾರ್ ಉತ್ತರ ಕ್ಷೇತ್ರದ ಲಾಬಿಯಿಂದಾಗಿ ಮೇಯರ್ ಸ್ಥಾನಕ್ಕೆ ಅಂತಿಮಗೊಂಡಿದ್ದಾರೆ.
 
ಸೆ.19ರ ಗುರುವಾರ ಬೆಳಗ್ಗೆ 11 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮೇಯರ್ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಮೈಸೂರು ವಿಭಾಗೀಯ ಆಯುಕ್ತರು ಚುನಾವಣಾ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ. ಮೇಯರ್ ಸ್ಥಾನಕ್ಕೆ ಒಬ್ಬರದ್ದೇ ನಾಮಪತ್ರ ಸಲ್ಲಿಕೆಯಾದರೆ ಅವಿರೋಧ ಆಯ್ಕೆ ಘೋಷಣೆ ಆಗಲಿದೆ.

Mangalore Manoj Kumar set to be new mayor of Mcc. For the upcoming term, the BJP has nominated Manoj Kumar from Derebail North Ward as the candidate for Mayor, and Bhanumathi P.S. from Bolar Ward as the candidate for Deputy Mayor. This selection was finalized during a meeting held at the BJP’s Dakshina Kannada District Office.