By elections, Kota Srinivas Poojary; ಕೋಟರಿಂದ ತೆರವಾದ ಪರಿಷತ್ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆ ; ಅ.21ರಂದು ಮತದಾನ, ತಕ್ಷಣದಿಂದಲೇ ನೀತಿಸಂಹಿತೆ ಜಾರಿ 

19-09-24 04:53 pm       HK News Desk   ಕರಾವಳಿ

ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿರುವ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಗೆ ವಿಧಾನ ಪರಿಷತ್ ಕ್ಷೇತ್ರದ ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ.

ಮಂಗಳೂರು, ಸೆ.19: ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿರುವ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಗೆ ವಿಧಾನ ಪರಿಷತ್ ಕ್ಷೇತ್ರದ ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ.

ಸೆಪ್ಟೆಂಬರ್ 26ರಂದು ಪರಿಷತ್ ಚುನಾವಣೆಗೆ ಅಧಿಸೂಚನೆ ಜಾರಿಗೆ ಬರಲಿದ್ದು, ಅಕ್ಟೋಬರ್ 21ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಅ.3 ಕೊನೆಯ ದಿನ. 4ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಅಕ್ಟೋಬರ್ 7 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. 

ಅಕ್ಟೋಬರ್ 21ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆಯ ವರೆಗೆ ಎರಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್ 24ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ. ಇಂದಿನಿಂದಲೇ ಎರಡು ಜಿಲ್ಲೆಗಳ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಹೀಗಾಗಿ ಶಾಸಕ, ಸಂಸದರು ಅಧಿಕಾರಿಗಳ ಜೊತೆಗೆ ಸಭೆ ನಡೆಸುವಂತಿಲ್ಲ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಸಂಜೆ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಕರೆಯಲಾಗಿದ್ದ ರೈಲ್ವೆ ಅಧಿಕಾರಿಗಳ ಸಭೆಯನ್ನು ರದ್ದುಪಡಿಸಲಾಗಿದೆ.

ಕೋಟ ಶ್ರೀನಿವಾಸ ಪೂಜಾರಿ ಕಳೆದ ಮೇ 5ರಂದು ತಮ್ಮ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅವರ ಪರಿಷತ್ ಅವಧಿ 2028ರ ವರೆಗೆ ಇದೆ. ಉಳಿಕೆ ಅವಧಿಗೆ ಸದಸ್ಯರಾಗಲು ಉಪ ಚುನಾವಣೆ ನಡೆಸಲಾಗುತ್ತಿದೆ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಗ್ರಾಪಂ, ಜಿಪಂ, ನಗರ ಪಂ., ಪುರಸಭೆ, ಮಹಾನಗರ ಪಾಲಿಕೆ ಹೀಗೆ ಎಲ್ಲ ಸ್ತರದ ಸ್ಥಳೀಯಾಡಳಿತ ಸದಸ್ಯರಿಗೆ ಮತದಾನ ಅವಕಾಶ ಇರುತ್ತದೆ.

By elections date announced for vacant post of Kota Srinivas Poojary on october 21st, 2024