ಭೂತಾನ್ ನಿಂದ ಅಡಿಕೆ ಆಮದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ; ಕರಾವಳಿ ಕೃಷಿಕರಿಗೆ ಬೆಲೆ ಕುಸಿತದ ಭಯ, ದೇಸೀ ಬೆಳೆಗಾರರಿಗೆ ತೊಂದರೆ ಆಗಲ್ಲ ಎಂದ ಕ್ಯಾಂಪ್ಕೋ ಅಧ್ಯಕ್ಷರು 

20-09-24 05:18 pm       Mangalore Correspondent   ಕರಾವಳಿ

ಕೇಂದ್ರ ಸರ್ಕಾರ ಭೂತಾನ್‌ ದೇಶದಿಂದ ಕನಿಷ್ಠ ಆಮದು ಬೆಲೆಯ ಷರತ್ತಿಲ್ಲದೆ 17,000 ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ. ಕೇಂದ್ರ ವಾಣಿಜ್ಯ ಸಚಿವಾಲಯ ವ್ಯಾಪ್ತಿಯ ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ ಈ ಬಗ್ಗೆ ಮಾಹಿತಿ ನೀಡಿದೆ.

ಮಂಗಳೂರು, ಸೆ.20: ಕೇಂದ್ರ ಸರ್ಕಾರ ಭೂತಾನ್‌ ದೇಶದಿಂದ ಕನಿಷ್ಠ ಆಮದು ಬೆಲೆಯ ಷರತ್ತಿಲ್ಲದೆ 17,000 ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ. ಕೇಂದ್ರ ವಾಣಿಜ್ಯ ಸಚಿವಾಲಯ ವ್ಯಾಪ್ತಿಯ ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ ಈ ಬಗ್ಗೆ ಮಾಹಿತಿ ನೀಡಿದೆ. ಆದರೆ ಇದರಿಂದ ಕರಾವಳಿಯ ಅಡಿಕೆ ಕೃಷಿಕರಿಗೆ ತೊಂದರೆ ಆಗಲ್ಲ ಎನ್ನಲಾಗುತ್ತಿದೆ. 

ಒಡಿಶಾದ ಹತಿಸರ್ ಮತ್ತು ಅಸ್ಸಾಂನ ದರ್ರಂಗಾದ ಕಸ್ಟಮ್ಸ್ ಕೇಂದ್ರದ ಮೂಲಕ ಈ ಅಡಿಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿದೆ. 2022ರ ಸೆಪ್ಟೆಂಬರ್‌ನಲ್ಲಿ ಪ್ರತಿ ವರ್ಷ ಭೂತಾನ್‌ನಿಂದ ಕನಿಷ್ಠ ಆಮದು ಬೆಲೆ ಇಲ್ಲದೆ, 17,000 ಟನ್ ಅಡಿಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿತ್ತು. ಕೇಂದ್ರ ಸರ್ಕಾರ 2017ರಲ್ಲಿ ಪ್ರತಿ ಕೆ.ಜಿ. ಅಡಿಕೆಗೆ 251 ರೂಪಾಯಿ ಕನಿಷ್ಠ ಆಮದು ಬೆಲೆ ನಿಗದಿಪಡಿಸಿದ್ದು, ಕಳೆದ ವರ್ಷ ಈ ದರವನ್ನು ಕೆಜಿಗೆ 351 ರೂಪಾಯಿಗೆ ಹೆಚ್ಚಳ ಮಾಡಿದೆ. 

ಆದರೆ ಭೂತಾನ್‌ನಿಂದ ಆಮದು ಮಾಡಿಕೊಳ್ಳುವ ಅಡಿಕೆ ಪ್ರಮಾಣ ದೇಶಿಯ ಅಡಿಕೆ ದರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಲಾಗುತ್ತಿದೆ. ದೇಶೀ ವರ್ತಕರು ಇದರ ಲಾಭ ಪಡೆದು ಸ್ಥಳೀಯವಾಗಿ ಬೆಲೆ ಕಡಿಮೆ ಮಾಡುವ ಆತಂಕ ಬೆಳೆಗಾರರಲ್ಲಿ ಇದೆ. ಇದನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆದು ರೈತರಿಗೆ ಬೆಳೆಗೆ ತಕ್ಕ ನ್ಯಾಯಯುತ ಬೆಲೆ ಕೊಡಿಸಬೇಕು ಎಂಬುದು ರೈತರ ಆಗ್ರಹವಾಗಿದೆ. 2023ರಲ್ಲಿ ಭೂತಾನ್ ಅಡಿಕೆ ಭಾರತಕ್ಕೆ ಬಂದಾಗ ಕ್ವಿಂಟಾಲ್ ಅಡಿಕೆ ದರ 4,000 ರೂ. ವರೆಗೆ ಕುಸಿದಿದ್ದು, ಇದೀಗ ಮತ್ತೆ ದರ ಕುಸಿತದ ಆತಂಕದ ಪರಿಸ್ಥಿತಿ ಎದುರಾಗಿದೆ. 

ವಿದೇಶಿ ಅಡಿಕೆ ಆಮದಿನಿಂದ ಬೆಳೆಗಾರರಿಗೆ ತೊಂದರೆ ಆಗಲ್ಲ‌ ಎಂದು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್  ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ. ನೆರೆಯ ರಾಷ್ಟ್ರ ಭೂತಾನ್ ರಕ್ಷಣೆ ಹಾಗೂ ಸಹಕಾರದ ಭಾಗವಾಗಿ ಕೇಂದ್ರ ಸರ್ಕಾರ ಅಲ್ಲಿಯ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಭೂತಾನ್ ಅಡಿಕೆ ಆಮದು ರಾಷ್ಟ್ರೀಯ ಸಹಕಾರ, ಭದ್ರತೆಯ ಭಾಗವಾಗಿ ಕೈಗೊಂಡ ಕ್ರಮವಾಗಿದೆ” ಎಂದು ತಿಳಿಸಿದ್ದಾರೆ. 

”ಭೂತಾನ್ ದೇಶದಿಂದ ಕೇವಲ 17 ಸಾವಿರ ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದ್ದು ಅದನ್ನು ಸಂಸ್ಕರಣೆ ಮಾಡಿದರೆ ಅದು ಬಹಳ ಕಡಿಮೆ ಪ್ರಮಾಣದ ಅಡಿಕೆಯಾಗಿದೆ. ಅಡಿಕೆ ಆಮದು ಬಗ್ಗೆ ಅಡಿಕೆ ಬೆಳೆಗಾರರಲ್ಲಿ ಯಾವುದೇ ಆತಂಕ, ಗಲಿಬಿಲಿ, ಗೊಂದಲ ಬೇಡ” ಎಂದಿದ್ದಾರೆ.

Mangalore Import of areca nut from Bhutan gets green signal by government , CAMPCO says traders not to fear price collapse.