B Y Vijayendra, Mangalore, Siddaramaiah: ಸಿದ್ದರಾಮಯ್ಯ ಒಬ್ಬ ಪ್ರಾಮಾಣಿಕ ಮುಖ್ಯಮಂತ್ರಿ, ಕಾಂಗ್ರೆಸ್ ಹಗರಣವನ್ನು ತಾವಾಗಿಯೆ ಒಪ್ಪಿಕೊಂಡಿದ್ದಾರೆ ; ವಿಜಯೇಂದ್ರ ಹೊಸ ವ್ಯಾಖ್ಯಾನ

15-10-24 05:36 pm       Mangalore Correspondent   ಕರಾವಳಿ

ಸಿದ್ದರಾಮಯ್ಯ ಒಬ್ಬ ಭ್ರಷ್ಟ ಮತ್ತು ಪ್ರಾಮಾಣಿಕ ಮುಖ್ಯಮಂತ್ರಿ ಎಂದು ಹೇಳುತ್ತೇನೆ. ಯಾಕಂದ್ರೆ, ವಾಲ್ಮೀಕಿ ಹಗರಣದ ಬಗ್ಗೆ ನಾವು ಹೋರಾಟ ಮಾಡಿದಾಗ, ಅದರಲ್ಲಿ 187 ಕೋಟಿ ಅಲ್ಲ, 87 ಕೋಟಿ ಹಗರಣ ಆಗಿದೆಯೆಂದು ಸದನದಲ್ಲೇ ಸಿದ್ದರಾಮಯ್ಯ ಒಪ್ಪಿಕೊಂಡಿದ್ದರು.

ಬಂಟ್ವಾಳ, ಅ.15: ಸಿದ್ದರಾಮಯ್ಯ ಒಬ್ಬ ಭ್ರಷ್ಟ ಮತ್ತು ಪ್ರಾಮಾಣಿಕ ಮುಖ್ಯಮಂತ್ರಿ ಎಂದು ಹೇಳುತ್ತೇನೆ. ಯಾಕಂದ್ರೆ, ವಾಲ್ಮೀಕಿ ಹಗರಣದ ಬಗ್ಗೆ ನಾವು ಹೋರಾಟ ಮಾಡಿದಾಗ, ಅದರಲ್ಲಿ 187 ಕೋಟಿ ಅಲ್ಲ, 87 ಕೋಟಿ ಹಗರಣ ಆಗಿದೆಯೆಂದು ಸದನದಲ್ಲೇ ಸಿದ್ದರಾಮಯ್ಯ ಒಪ್ಪಿಕೊಂಡಿದ್ದರು. ಮುಡಾ ಪ್ರಕರಣದಲ್ಲಿ ನಾವು ಹೋರಾಟ ನಡೆಸಿದ ಬಳಿಕ 14 ಸೈಟ್ ಗಳನ್ನು ವಾಪಸ್ ಕೊಟ್ಟು ತಮ್ಮ ಭ್ರಷ್ಟಾಚಾರವನ್ನೂ ಒಪ್ಪಿಕೊಂಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಕೇವಲ ಭ್ರಷ್ಟರು ಮಾತ್ರವಲ್ಲ, ಪ್ರಾಮಾಣಿಕರು ಕೂಡ. ಹೀಗೆಂದು ಹೊಸ ವ್ಯಾಖ್ಯಾನ ನೀಡಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ. 

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳದ ಬಂಟರ ಭವನದಲ್ಲಿ ನಡೆದ ಬಿಜೆಪಿ ಜನಪ್ರತಿನಿಧಿಗಳ ಮತ್ತು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಭ್ರಷ್ಟಾಚಾರ ಎಲ್ಲಿ ಮುಟ್ಟಿದೆಯಂದ್ರೆ, ಜನರಿಗೂ ರೇಸಿಗೆ ಹುಟ್ಟಿಸಿದೆ.‌ ಅಭಿವೃದ್ಧಿ ಕಾರ್ಯಕ್ಕೆ ಹಣ ಇಲ್ಲದೆ ಆಡಳಿತ ಪಕ್ಷದ ಹಿರಿಯ ಶಾಸಕರೇ ಪ್ರಶ್ನೆ ಮಾಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ ಎಂದು ರಾಜು ಕಾಗೆ ಹೇಳಿದ್ದಾರೆ. ಕರಾವಳಿ ಜಿಲ್ಲೆಯ ಜನರು ಕಾಂಗ್ರೆಸಿಗೆ ಓಟು ಕೊಡಲ್ಲ ಅಂತ ಈ ಭಾಗದ ಅಭಿವೃದ್ಧಿಯನ್ನೇ ಮರೆತಿದ್ದಾರೆ. ಯಾವುದೇ ಒಬ್ಬ ಸಚಿವನೂ ಕರಾವಳಿ ಜಿಲ್ಲೆಗೆ ಕಾಲಿಟ್ಟಿದ್ದಾರೆಯೇ? ಸರ್ಕಾರದ ಯೋಜನೆ ಇಲ್ಲ, ಅಭಿವೃದ್ಧಿಗೆ ಅನುದಾನ ಇಲ್ಲ, ಹೀಗಾಗಿ ಸಚಿವರೂ ಅತೃಪ್ತಿಯಲ್ಲೇ ಇದ್ದಾರೆ. 

ಕಾಂಗ್ರೆಸ್ ಸರ್ಕಾರ ಬಂದಿದೆ ಅಂತ ಪಕ್ಷದ ಕಾರ್ಯಕರ್ತರು ಸಂತೃಪ್ತಿಯಲ್ಲಿ ಪಡುತ್ತಿಲ್ಲ. ಅಷ್ಟರ ಮಟ್ಟಿಗೆ ಭ್ರಷ್ಟಾಚಾರ ಮತ್ತು ಅಭಿವೃದ್ಧಿ ರಹಿತ ಆಡಳಿತ ರಾಜ್ಯದಲ್ಲಿದೆ. ಶಾಸಕರ ಕ್ಷೇತ್ರಾಭಿವೃದ್ಧಿಗೂ ಅನುದಾನ ಇಲ್ಲ. ಇಂಥ ಭಂಡ ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಬಾಳಿಕೆ ಬರಲ್ಲ, ಜನರ ಶಾಪದಿಂದಲೇ ಕುಸಿದು ಬೀಳಲಿದೆ ಎಂದರು. 

ಮುಸ್ಲಿಮರ ತುಷ್ಟೀಕರಣಕ್ಕಾಗಿ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯಲು ಮುಂದಾಗಿದ್ದಾರೆ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ, ಪೊಲೀಸರಿಗೆ ಕಲ್ಲು ತೂರಿ ಗಲಭೆ ನಡೆಸಿ ದೇಶದ್ರೋಹಿಗಳ ಕೇಸನ್ನು ವಾಪಸ್ ಪಡೆಯುತ್ತಿದ್ದಾರೆ. ಅದರ ನೆಪದಲ್ಲಿ ದೇಶದ್ರೋಹಿಗಳ ಜೊತೆಗೆ ಸಂಘ ಪರಿವಾರದ ಕಾರ್ಯಕರ್ತರನ್ನು ಹೋಲಿಸುತ್ತಿದ್ದಾರೆ. ಆರೆಸ್ಸೆಸ್, ಬಜರಂಗದಳ ಕಾರ್ಯಕರ್ತರು ದೇಶದ್ರೋಹಿ ಕೆಲಸ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. 

ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಪರಿಷತ್ತಿನಲ್ಲಿ ನಮ್ಮ ಸ್ಥಾನ 29 ಇದೆ, ಕೋಟ ಸ್ಥಾನವನ್ನು  ಕಿಶೋರ್ ಕುಮಾರ್ ತುಂಬಲಿದ್ದು 30 ಆಗಲಿದೆ. ಅಷ್ಟೊತ್ತಿಗೆ ಕಾಂಗ್ರೆಸ್ ಸರ್ಕಾರ ಉಳಿಯುತ್ತೋ ಅನ್ನುವ ಗ್ಯಾರಂಟಿ ಇಲ್ಲ ಎಂದರು.‌

ವೇದಿಕೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಸದಾನಂದ ಗೌಡ, ಮಾಜಿ ಸಂಸದ ನಳಿನ್ ಕುಮಾರ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಉಪಸ್ಥಿತರಿದ್ದರು.

B Y Vijayendra in mangalore, says Cm Siddaramaiah is a honest chief minister. Says Siddaramaiah is not only corrupt but also hes most honest he slammed.