ವಿನೂತನ ಒಳ ಮೀಸಲಾತಿ ನೀತಿ ಪ್ರಕಟಿಸಲು ಒತ್ತಾಯ ; ಬೀದಿ ಗುಡಿಸುವವರ ಮಕ್ಕಳು ಮತ್ತು ಜಿಲ್ಲಾಧಿಕಾರಿ ಮಕ್ಕಳು ಒಂದೇ ಕೋಟಾದಲ್ಲಿ ನೌಕರಿಗಾಗಿ ಸ್ಪರ್ಧೆ ನಡೆಸುವುದು ಅಮಾನವೀಯ ! 

21-04-25 10:32 pm       Mangalore Correspondent   ಕರಾವಳಿ

ಶಿಕ್ಷಕರಿಲ್ಲದ, ಸರಿಯಾಗಿ ಪಠ್ಯ ಪುಸ್ತಕಗಳೇ ಇಲ್ಲದೆ, ಕಾಲಿಗೆ ಚಪ್ಪಲಿಯೂ ಇಲ್ಲದೆ ಸರಕಾರಿ ಶಾಲೆಗಳಲ್ಲಿ ಓದುವ ನಮ್ಮ ನಗರಗಳಲ್ಲಿ ಬೀದಿ ಗುಡಿಸುವ, ಚರಂಡಿ ಸ್ವಚ್ಛ ಮಾಡುವ ಬಡ ಪೌರ ಕಾರ್ಮಿಕರ ಮಕ್ಕಳು, ರಸ್ತೆ ಬದಿಗಳಲ್ಲಿ ಬೂಟ್ ಪಾಲಿಶ್ ಮಾಡುವವರ ಮಕ್ಕಳು ಮತ್ತು ಎಲ್ಲ ಸೌಲಭ್ಯ, ಸೌಕರ್ಯಗಳೊಂದಿಗೆ ಮೊಂಟೆಸ್ಸರಿ, ಸಿಬಿಎಸ್ಇ ಮತ್ತು ಐಸಿಎಸ್ ಇ ಶಾಲೆಗಳಲ್ಲಿ ಓದುವ ಮತ್ತು ಐಎಎಸ್, ಐಪಿಎಸ್ ಅಧಿಕಾರಿಗಳು ಮತ್ತು ಮಂತ್ರಿಗಳ ಮಕ್ಕಳು, ಕೇವಲ ಅವರೆಲ್ಲರ ಜಾತಿ ಒಂದೇ ಎಂಬ ಕಾರಣಕ್ಕಾಗಿ, ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಮತ್ತು ಸರಕಾರಿ ನೌಕರಿ ಪಡೆಯಲು ಒಂದೇ ಕೋಟಾದಡಿಯಲ್ಲಿ ಸ್ಪರ್ಧೆ ಎದುರಿಸಬೇಕು ಎಂಬ ಚಿಂತನೆ ಮತ್ತು ಅಂತಹ ನೀತಿಯೇ ಅತ್ಯಂತ ಅಮಾನವೀಯ.

ಮಂಗಳೂರು, ಎ.21 : ಶಿಕ್ಷಕರಿಲ್ಲದ, ಸರಿಯಾಗಿ ಪಠ್ಯ ಪುಸ್ತಕಗಳೇ ಇಲ್ಲದೆ, ಕಾಲಿಗೆ ಚಪ್ಪಲಿಯೂ ಇಲ್ಲದೆ ಸರಕಾರಿ ಶಾಲೆಗಳಲ್ಲಿ ಓದುವ ನಮ್ಮ ನಗರಗಳಲ್ಲಿ ಬೀದಿ ಗುಡಿಸುವ, ಚರಂಡಿ ಸ್ವಚ್ಛ ಮಾಡುವ ಬಡ ಪೌರ ಕಾರ್ಮಿಕರ ಮಕ್ಕಳು, ರಸ್ತೆ ಬದಿಗಳಲ್ಲಿ ಬೂಟ್ ಪಾಲಿಶ್ ಮಾಡುವವರ ಮಕ್ಕಳು ಮತ್ತು ಎಲ್ಲ ಸೌಲಭ್ಯ, ಸೌಕರ್ಯಗಳೊಂದಿಗೆ ಮೊಂಟೆಸ್ಸರಿ, ಸಿಬಿಎಸ್ಇ ಮತ್ತು ಐಸಿಎಸ್ ಇ ಶಾಲೆಗಳಲ್ಲಿ ಓದುವ ಮತ್ತು ಐಎಎಸ್, ಐಪಿಎಸ್ ಅಧಿಕಾರಿಗಳು ಮತ್ತು ಮಂತ್ರಿಗಳ ಮಕ್ಕಳು, ಕೇವಲ ಅವರೆಲ್ಲರ ಜಾತಿ ಒಂದೇ ಎಂಬ ಕಾರಣಕ್ಕಾಗಿ, ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಮತ್ತು ಸರಕಾರಿ ನೌಕರಿ ಪಡೆಯಲು ಒಂದೇ ಕೋಟಾದಡಿಯಲ್ಲಿ ಸ್ಪರ್ಧೆ ಎದುರಿಸಬೇಕು ಎಂಬ ಚಿಂತನೆ ಮತ್ತು ಅಂತಹ ನೀತಿಯೇ ಅತ್ಯಂತ ಅಮಾನವೀಯ. ಆದ್ದರಿಂದ ಪರಿಶಿಷ್ಟ ಜಾತಿಗಳ ನಡುವೆ ಒಳ ಮೀಸಲಾತಿ ಕಲ್ಪಿಸುವುದು ಅತ್ಯಗತ್ಯವಾಗಿದೆ. ಹೀಗಾಗಿ ಮೀಸಲಾತಿ ನೀತಿಯನ್ನು ಆಮೂಲಾಗ್ರ ಪರಿಷ್ಕರಿಸಿ ಶೋಷಿತ ಜಾತಿಗಳಲ್ಲಿ ಅತ್ಯಂತ ದುರ್ಬಲ ಶ್ರಮಜೀವಿಗಳ ವರ್ಗಗಳಿಗೆ ವಿಶೇಷ ಆದ್ಯತೆ ಮತ್ತು ಸಂರಕ್ಷಣೆ ನೀಡುವ ವಿನೂತನ ಮೀಸಲಾತಿ ನೀತಿಯನ್ನು ರೂಪಿಸಲಾಗಿದೆ ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಹೇಳಿದ್ದಾರೆ.

ಭಾನುವಾರ ಮಂಗಳೂರು ನಗರದ ಹೊಟೇಲ್ ಶ್ರೀನಿವಾಸ್ ನಲ್ಲಿ ಸಂಘಟಿಸಲಾಗಿದ್ದ 'ಪರಿಶಿಷ್ಟ ಜಾತಿಗಳ ನಡುವೆ ಒಳಮೀಸಲಾತಿ ಕುರಿತ ಸಮಾಲೋಚನಾ ಸಭೆ'ಯಲ್ಲಿ ಮಾತನಾಡಿದರು. ಪವರ್ ಪಾಯಿಂಟ್ ಮೂಲಕ ಪರಿಶಿಷ್ಟ ಜಾತಿಗಳು ಹಾಗೂ ಸಂವಿಧಾನದ ಪರಿಕಲ್ಪನೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕುರಿತಾಗಿ ಸಾಕಷ್ಟು ಸರಕಾರಿ ವರದಿ, ದತ್ತಾಂಶಗಳನ್ನು  ಪ್ರಸ್ತುತ ಪಡಿಸಿ ವಿಶ್ಲೇಷಣೆ ನಡೆಸಲಾಯಿತು. 

ಆಳುವ ವರ್ಗಗಳು ಸಿದ್ಧ ಪಡಿಸುವ ನೀತಿಗೆ ಪರ್ಯಾಯವಾಗಿ, ತಾವು ಸಿದ್ಧಪಡಿಸಿದ ಒಳಮೀಸಲಾತಿ ನೀತಿ ಮತ್ತು ಅದರ ಪರಿಣಾಮಕಾರಿ ಅನುಷ್ಠಾನ ಹೇಗೆ ಮತ್ತು ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳು ಎಂದು ಅಧಿಸೂಚಿತ 101 ಜಾತಿಗಳಲ್ಲಿರುವ ವಿವಿಧ ವರ್ಗಗಳ ಜನರ ಸಂರಕ್ಷಣೆ ಹೇಗೆ ಖಾತರಿ ಮಾಡಬಹುದು ಎಂಬುದನ್ನು 100 ಪಾಯಿಂಟ್ ರೋಸ್ಟರ್ ಮೂಲಕ ವಿವರಿಸಿದರು.

ಈ ವಿನೂತನ ಮೀಸಲಾತಿ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವಲ್ಲಿ ನಮ್ಮ ಪ್ರಜ್ಞಾವಂತ ನಾಗರಿಕ ಸಮಾಜ ನಮಗೆ ನೆರವು ನೀಡಬೇಕು ಎಂದು ಮನವಿ ಮಾಡಿದ ಅವರು, ಈ ಬಗ್ಗೆ ಶೀಘ್ರದಲ್ಲಿ ಮಹಾ ಒಕ್ಕೂಟದ ನಿಯೋಗ ನಮ್ಮ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಚರ್ಚಿಸಲಿದೆ ಎಂದು ಹೇಳಿದರು.

'ಆಯೋಗದಿಂದಲೇ  ಸಂವಿಧಾನಕ್ಕೆ ಅಪಚಾರ'

ಕರ್ನಾಟಕ ರಾಜ್ಯಕ್ಕೆ ಅಧಿಸೂಚಿತವಾಗಿರುವ 'ಆದಿ ಆಂಧ್ರ', 'ಆದಿ ದ್ರಾವಿಡ' ಮತ್ತು 'ಆದಿ ಕರ್ನಾಟಕ' ಎಂಬ ಹೆಸರಿನ ಜಾತಿಗಳನ್ನು 'ಅವುಗಳು ಜಾತಿಗಳಲ್ಲ, ಜಾತಿಗಳ ಗುಂಪುಗಳು. ಆದ್ದರಿಂದ ಈ ಗುಂಪುಗಳಿಗೆ ಸೇರಿದವರು ಸಮೀಕ್ಷೆಯಲ್ಲಿ ತಮ್ಮ ಉಪ ಜಾತಿಗಳನ್ನೇ ದಾಖಲಿಸಬೇಕು ಎಂದು ಅಭಿಪ್ರಾಯಪಟ್ಟ ಲೋಲಾಕ್ಷ, ಸರಕಾರದ ಓರ್ವ ಸಚಿವರು ಮತ್ತು ಸ್ವತಃ ವರದಿ ಸಿದ್ಧಪಡಿಸಿದ ನ್ಯಾ. ನಾಗಮೋಹನ್ ದಾಸ್ ಅವರು ಪರಿಶಿಷ್ಟ ಸಮುದಾಯಗಳಲ್ಲಿ ಅನಗತ್ಯ ಗೊಂದಲಗಳನ್ನು ಮೂಡಿಸುತ್ತಿದ್ದಾರೆ. 

ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ, 1950 ಇರಬಹುದು ಅಥವಾ ದಿ. 27.07.1977 ರಂದು ಜಾರಿಗೆ ಬಂದಿರುವ ತಿದ್ದುಪಡಿ ಆದೇಶ (Act 108 of 1976- Govt of India) ಇರಬಹುದು, ಈ ಮೂರನ್ನೂ ಪರಿಶಿಷ್ಟ ಜಾತಿಗಳು ಎಂದೇ ಅಧಿಸೂಚಿಸಲಾಗಿದೆ. ಇವುಗಳನ್ನು 'ಜಾತಿಗಳ ಗುಂಪುಗಳು' ಎಂದು ಕರೆಯಲು, ಪರಿಗಣಿಸಲು ಆಯೋಗಕ್ಕಾಗಲಿ, ಸಚಿವರಿಗೆ ಆಗಲಿ ಯಾವುದೇ ಅಧಿಕಾರ ಇಲ್ಲ. ಇದು ಸಂವಿಧಾನಕ್ಕೆ ಮಾಡುವ ಅಪಚಾರ. ಹೇಗಾದರೂ ಮಾಡಿ ಪರಿಶಿಷ್ಟ ಜಾತಿಗಳನ್ನು, ಜಾತೀಯ ನೆಲೆಯಲ್ಲಿಯೇ ಒಡೆದು, ಅವರನ್ನು ಇನ್ನಷ್ಟು ದುರ್ಬಲಗೊಳಿಸಬೇಕು ಎಂಬ ವಿಕೃತ ಮನಸ್ಸು ಇದು ಎಂದವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯದ 101 ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಿ, ಅದರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 13 ಜಾತಿಗಳು ಸೇರಿ, 89 ಅತ್ಯಂತ ದುರ್ಬಲ ಜಾತಿಗಳಿಗೆ ಶೇಕಡಾ 1 ಮೀಸಲಾತಿ ನಿಗದಿಗೊಳಿಸಿ, ಈ ಬಗ್ಗೆ ಸಂವಿಧಾಕ್ಕೆ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ದಿ. 27.03.2023 ರಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು. ನಮ್ಮ ಮಹಾಒಕ್ಕೂಟ ಇದನ್ನು ಆಗಲೇ ತೀವ್ರವಾಗಿ ವಿರೋಧಿಸಿತ್ತು. ಈ ವರ್ಷ ಏಪ್ರಿಲ್ 14 ರಂದು ತೆಲಂಗಾಣದ ಸರಕಾರ ಆ ರಾಜ್ಯದ 59 ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ, ಅತೀ ಹೆಚ್ಚು ಹಿಂದುಳಿದಿರುವ 25 ಪರಿಶಿಷ್ಟ ಜಾತಿಗಳಿಗೆ ಶೇಕಡಾ 1 ಮೀಸಲಾತಿ ಕಲ್ಪಿಸಿ ಅಧಿಸೂಚನೆ ಹೊರಡಿಸಿದೆ.

ಈ ವರ್ಷದ ಏಪ್ರಿಲ್ 17 ರಂದು ಆಂಧ್ರ ಪ್ರದೇಶ ಸರಕಾರ ಆ ರಾಜ್ಯದ 59 ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಿ, ಅತ್ಯಂತ ಹಿಂದುಳಿದ 12 ಪರಿಶಿಷ್ಟ ಜಾತಿಗಳಿಗೆ ಶೇಕಡಾ 1 ಮೀಸಲಾತಿ ನಿಗದಿಗೊಳಿಸಿ Andhra Pradesh Scheduled Castes ( Sub Classification) Ordinance, 2025 ನ್ನು ಹೊರಡಿಸಿದೆ. ಇವೆಲ್ಲವೂ ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾಗಿವೆ.  ಇದರಿಂದ, ಪರಿಶಿಷ್ಟ ಜಾತಿಗಳನ್ನು ಒಡೆದು ಆಳುವ ನೀತಿಯನ್ನು ಈ ಮೂರೂ ರಾಜ್ಯಗಳ ಆಳುವ ವರ್ಗ ಅನುಸರಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ ಎಂದವರು ಅಭಿಪ್ರಾಯಪಟ್ಟರು.

'ಅಸಮಾನ ಶಿಕ್ಷಣದಿಂದ ಆತಂಕಕಾರಿ ಅಸಮಾನತೆ' 

ಸಮಾಲೋಚನಾ ಸಭೆಯಲ್ಲಿ ತಮ್ಮ ಚಿಂತನೆಗಳನ್ನು ಪ್ರಸ್ತುತಪಡಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಮತ್ತು ಮಕ್ಕಳ ಹಕ್ಕುಗಳ ಕುರಿತ ತಜ್ಞ ರೆನ್ನಿ ಡಿಸೋಜ, ಸಮಾಜದಲ್ಲಿ ಇರುವ  ಶ್ರೇಣೀಕೃತ ವ್ಯವಸ್ಥೆಯಂತೆಯೇ ಶಿಕ್ಷಣ ಪದ್ಧತಿಯಲ್ಲೂ ಶ್ರೇಣೀಕರಣ ಇದ್ದು, ಇದು ಪರಿಶಿಷ್ಟ ಜಾತಿಗಳಲ್ಲಿ ಆತಂಕಕಾರಿಯಾದ ಅಸಮಾನತೆಗೆ ಕಾರಣವಾಗುತ್ತಿದೆ ಎಂದು ಪಿಪಿಟಿ ಮೂಲಕ ವಿಶ್ಲೇಷಣೆ ನಡೆಸಿದರು.

ಸಮಾಲೋಚನಾ ಕಾರ್ಯಕ್ರಮವನ್ನು ವಿಶ್ರಾಂತ ಪೌರ ಕಾರ್ಮಿಕೆ ಪೂವಮ್ಮ ಉದ್ಘಾಟಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎ.ಎಂ ಹನೀಫ್, ಸುಳ್ಯ ತಾಪಂ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಹಿರಿಯ ಪತ್ರಕರ್ತರಾದ ಎಸ್. ಜಯರಾಮ್ ಮತ್ತು ರಮೇಶ್ ಪೆರ್ಲ, ಮಾಜಿ ಕಾರ್ಪೊರೇಟರ್ ಪ್ರೇಮ್ ಬಲ್ಲಾಳ್ ಭಾಗ್, ಡಿ.ಎಸ್.ಎಸ್ ಸಂಚಾಲಕ ಗಿರೀಶ್ ಉಳ್ಳಾಲ್, ಮಹಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್, ಉಪಾಧ್ಯಕ್ಷರಾದ ಮೋಹನಾಂಗಯ್ಯ ಸ್ವಾಮಿ, ಸೀತಾರಾಮ್ ಕೊಂಚಾಡಿ, ಉಪ ಕಾರ್ಯದರ್ಶಿ ಪದ್ಮನಾಭ ಮೂಡಬಿದರೆ, ಪ್ರೊ. ಐಡಾ ಡಿಸೋಜ, ಜಿಲ್ಲಾ ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಅನಿಲ್ ಕಂಕನಾಡಿ,  ವಿವಿಯ ಶಿಕ್ಷಕ ಡಾ. ಅನಿಲ್ ಮತ್ತು ಜಿಲ್ಲೆಯ ವಿವಿಧ ಪರಿಶಿಷ್ಟ ಜಾತಿಗಳ ಸಂಘಟನೆಗಳ ನಾಯಕರು, ವಿವಿಧ ನೌಕರರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

Mangalore, Call for Equity, New Internal Reservation Policy Demands Fair Opportunities for Children of Street Sweepers and District Collectors.