ನಿಸರ್ಗ ಸಿರಿಯ ಮಧ್ಯೆ ಅರಳಿದನೇ ಗಣೇಶ ! ಕೆತ್ತಿಕಲ್ ನಲ್ಲೊಂದು ಪ್ರಕೃತಿ ವಿಸ್ಮಯ

22-08-20 05:14 pm       Mangalore Reporter   ಕರಾವಳಿ

ಕರಾವಳಿ ಜನ ಗಣೇಶನ ಆರಾಧನೆಯಲ್ಲಿ ತೊಡಗಿದ್ದರೆ ಇತ್ತ ಹಸಿರ ಸಿರಿಯ ಪ್ರಕೃತಿಯೇ ಗಣಪನ ರೂಪದಲ್ಲಿ ಕಂಡುಬಂದಿದ್ದಾಳೆ. ವಾಮಂಜೂರು ಬಳಿಯ ಕೆತ್ತಿಕಲ್ ಎಂಬಲ್ಲಿ ಅಪರೂಪದ ದೃಶ್ಯ ಕಂಡುಬಂದಿದ್ದು ಜನರ ಕುತೂಹಲಕ್ಕೆ ಕಾರಣವಾಗಿದೆ.

ಮಂಗಳೂರು, ಆಗಸ್ಟ್ 22: ಕರಾವಳಿಯಲ್ಲಿ ಕೊರೊನಾ ಸಂಕಷ್ಟದ ನಡುವೆ ಗಣೇಶನ ಪೂಜೆ ನಡೆದಿದೆ. ಆದರೆ, ಕರಾವಳಿ ಜನ ಗಣೇಶನ ಆರಾಧನೆಯಲ್ಲಿ ತೊಡಗಿದ್ದರೆ ಇತ್ತ ಹಸಿರ ಸಿರಿಯ ಪ್ರಕೃತಿಯೇ ಗಣಪನ ರೂಪದಲ್ಲಿ ಕಂಡುಬಂದಿದ್ದಾಳೆ. 

ಹೌದು.. ಮಂಗಳೂರು ನಗರ ಹೊರವಲಯದ ವಾಮಂಜೂರು ಬಳಿಯ ಕೆತ್ತಿಕಲ್ ಎಂಬಲ್ಲಿ ಅಪರೂಪದ ದೃಶ್ಯ ಕಂಡುಬಂದಿದ್ದು ಜನರ ಕುತೂಹಲಕ್ಕೆ ಕಾರಣವಾಗಿದೆ. ಈಚಲು ಮರಕ್ಕೆ ಸುತ್ತಿಕೊಂಡ ಗಿಡ, ಬಳ್ಳಿಗಳೆಲ್ಲ ಸೇರಿ ಗಣೇಶನ ಆಕೃತಿ ಪಡೆದಿದ್ದು ರಮಣೀಯ ನಿಸರ್ಗ ಸಿರಿ ಭಕ್ತಜನರನ್ನು ಮಂತ್ರಮುಗ್ಧಗೊಳಿಸಿದೆ. ಕೆತ್ತಿಕಲ್ ತಿರುವಿನಿಂದ ಅಮೃತೇಶ್ವರಿ ದೇವಸ್ಥಾನಕ್ಕೆ ತಿರುಗುವ ರಸ್ತೆಯಲ್ಲಿ ಸಾಗುತ್ತಿದ್ದಂತೆ ಈ ಗಣೇಶ ರೂಪ ಕಂಡುಬರುತ್ತಿದ್ದು ಇದನ್ನು ವಿಶಾಲ್ ವಾಮಂಜೂರು ಎನ್ನುವ ಫೋಟೋಗ್ರಾಫರ್ ಸೆರೆ ಹಿಡಿದು ಆ ಫೋಟೊವನ್ನು ಹಂಚಿಕೊಂಡಿದ್ದಾರೆ. 

ಕಾಕತಾಳೀಯ ಎಂಬಂತೆ, ಗಣೇಶನ ಹಬ್ಬದ ದಿವಸವೇ ಇಂಥ ನಿಸರ್ಗ ಸಿರಿ ಕಂಡುಬಂದಿದ್ದು ಆ ಚಿತ್ರಣದ ಫೋಟೊ ಈಗ ವೈರಲ್ ಆಗಿದೆ. ಈಚಲು ಮರಕ್ಕೆ ಪೊದೆಗಳು ಬೆಳೆದು ನಿಂತಿರುವುದು ಅತ್ತ ರಸ್ತೆಯಲ್ಲಿ ಸಾಗುವ ಪ್ರಯಾಣಿಕರಿಗೆ ಗಣಪತಿಯ ಸೊಂಡಿಲಿನ ರೂಪ ಮನಸ್ಸಿಗೆ ಬರುತ್ತದೆ. ಇದನ್ನೇ ಫೋಟೋಗ್ರಾಫರ್ ತನ್ನ ಕಣ್ಣಿಗೆ ನಿಲುಕಿದಂತೆ ಕ್ಕಿಕ್ಕಿಸಿದ್ದು ಫೋಟೊ ವೈರಲ್ ಆಗುತ್ತಿದ್ದಂತೆ ಜನರು ಸ್ಥಳಕ್ಕೆ ಆಗಮಿಸ ತೊಡಗಿದ್ದಾರೆ. ನಿಸರ್ಗದಲ್ಲಿ  ಅರಳಿದ ಗಣಪನನ್ನ ಕಂಡು ಜನರು ಭಕ್ತಿಯಿಂದ ನಮಿಸುತ್ತಿದ್ದಾರೆ. ತಮ್ಮ ಮೊಬೈಲ್ ಗಳಲ್ಲಿ ಫೋಟೊ ತೆಗೆದು ಕಣ್ಣು ತುಂಬಿಸಿಕೊಳ್ಳುತ್ತಿದ್ದಾರೆ. ಗಣೇಶೋತ್ಸವ ಸಡಗರದ ನಡುವಲ್ಲೇ ಹಸಿರ ಸಿರಿಯ ಮಧ್ಯೆ ಗಣೇಶನ ರೂಪ ಕಂಡಿರುವುದು, ಭಕ್ತ ಜನರ ಕುತೂಹಲಕ್ಕೆ ಕಾರಣವಾಗಿದೆ.

Photo Courtesy : Vishal Vamanjoor

Video: