ಅಂತಾರಾಜ್ಯ ಸಂಚಾರ ನಿರ್ಬಂಧಿಸುವಂತಿಲ್ಲ ; ರಾಜ್ಯ ಸರ್ಕಾರಗಳಿಗೆ ಕೇಂದ್ರ ನಿರ್ದೇಶನ 

22-08-20 10:08 pm       Headline Karnataka News Network   ಕರಾವಳಿ

ಕೇಂದ್ರ ಸರಕಾರದ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮತ್ತೊಮ್ಮೆ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಅಂತಾರಾಜ್ಯ ಸಂಚಾರ ನಿರ್ಬಂಧಿಸದಂತೆ ಸೂಚನೆ ನೀಡಿದ್ದಾರೆ. 

ಮಂಗಳೂರು, ಆಗಸ್ಟ್ 22: ಕೊರೊನಾ ನಿರ್ಬಂಧದ ಬಳಿಕ ಕೇಂದ್ರ ಸರಕಾರದ ಅನ್ ಲಾಕ್ - 3 ಗೈಡ್ ಲೈನ್ಸ್ ನಲ್ಲಿ ಅಂತಾರಾಜ್ಯ ಸಂಚಾರ ಮುಕ್ತಗೊಳಿಸಲು ಸೂಚನೆ ನೀಡಲಾಗಿತ್ತು. ಆದರೆ, ಕೆಲವು ಕಡೆ ಆಯಾ ರಾಜ್ಯಗಳ ಜಿಲ್ಲಾಡಳಿತಗಳು ಗಡಿಭಾಗದಲ್ಲಿ ಸಂಚಾರ ನಿರ್ಬಂಧ ಮುಂದುವರಿಸಿದ್ದವು. ಇದರಿಂದ ಆಯಾ ಭಾಗದ ಜನರು ಸಂಕಷ್ಟಕ್ಕೆ ಒಳಗಾಗಿದ್ದು ಆರ್ಥಿಕ ಚಟುವಟಿಕೆಗೆ ಸಮಸ್ಯೆ ಆಗಿರುವುದನ್ನು ಮನಗಂಡು ಕೇಂದ್ರ ಸರಕಾರದ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮತ್ತೊಮ್ಮೆ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಅಂತಾರಾಜ್ಯ ಸಂಚಾರ ನಿರ್ಬಂಧಿಸದಂತೆ ಸೂಚನೆ ನೀಡಿದ್ದಾರೆ.

 

ಪ್ರಮುಖವಾಗಿ ಕೇರಳ - ಕರ್ನಾಟಕದ ಗಡಿಭಾಗ ಕಾಸರಗೋಡು ಜಿಲ್ಲೆಯ ಜನರಿಗೆ ಸಂಕಷ್ಟ ಉಂಟಾಗಿತ್ತು. ಜುಲೈ 29ರಂದು ಕೇಂದ್ರ ಸರಕಾರ ಹೊರಡಿಸಿದ್ದ ಅನ್ ಲಾಕ್ - 3 ರ ಮಾರ್ಗದರ್ಶಿ ಸೂತ್ರದಲ್ಲಿ ಅಂತಾರಾಜ್ಯ ಸಂಚಾರಕ್ಕೆ ಅವಕಾಶ ಕೊಟ್ಟಿದ್ದರೂ, ಕೇರಳ ಸರಕಾರ ನಿರ್ಬಂಧ ಮುಂದುವರಿಸಿತ್ತು. ಕರ್ನಾಟಕ ಗಡಿ ಮಾತ್ರವಲ್ಲದೆ ತಮಿಳ್ನಾಡು ಗಡಿಯಲ್ಲೂ ಕೇರಳ ಸರಕಾರ ಇದೇ ನೀತಿ ಅನುಸರಿಸಿತ್ತು. ಈ ಬಗ್ಗೆ ಆಯಾ ಭಾಗದ ಜನರು ಸಂಕಷ್ಟಕ್ಕೆ ಈಡಾಗಿದ್ದಲ್ಲದೆ ಸರಕು ಸಾಗಣೆಯೂ ಅಸಾಧ್ಯವಾಗಿರುವ ವಿಚಾರದಲ್ಲಿ ಕೋರ್ಟ್ ಕಟಕಟೆ ಏರಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮತ್ತೆ ರಾಜ್ಯ ಸರಕಾರಗಳಿಗೆ ಅನ್ ಲಾಕ್ - 3 ರ ಕುರಿತು ಪುನರ್ಮನನ ಮಾಡಿದ್ದು ಯಾವುದೇ ಕಾರಣಕ್ಕೂ ಅಂತಾರಾಜ್ಯ ಸಂಚಾರವನ್ನು ನಿರ್ಬಂಧಿಸಬಾರದು. ಅದಕ್ಕಾಗಿ ಇ- ಪಾಸ್, ಇನ್ನಿತರ ರೀತಿಯಲ್ಲಿ ಪ್ರತ್ಯೇಕ ಅನುಮತಿ ಪಡೆಯುವಂತೆ ಜನರನ್ನು ನಿರ್ಬಂಧಿಸುವಂತಿಲ್ಲ. ಸರಕು ಸಾಗಣೆಗಾಗಲೀ, ಜನರ ಸಂಚಾರಕ್ಕಾಗಲೀ ನಿರ್ಬಂಧ ವಿಧಿಸದೆ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಹಾಗೊಂದು ವೇಳೆ ನಿರ್ಬಂಧಿಸಿದರೆ ಅದು 2005ರ ಗೃಹ ಸಚಿವಾಲಯದ ವಿಪತ್ತು ನಿರ್ವಹಣೆಯ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಹೀಗಾಗಿ ಕೇಂದ್ರ ಸರಕಾರದ ಆದೇಶವನ್ನು ರಾಜ್ಯ ಸರಕಾರಗಳು ಯಥಾವತ್ತಾಗಿ ಪಾಲನೆ ಮಾಡುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮನವರಿಕೆ ಮಾಡಿದ್ದಾರೆ.