ಕ್ಯಾಪ್ಟನ್ಸಿ ಬಿಟ್ಟುಕೊಡಲು ವಿರಾಟ್ ಕೊಹ್ಲಿ ಒಪ್ಪಿರಲಿಲ್ಲವೇ? ಕುತೂಹಲ ಮೂಡಿಸಿದೆ ಬೆಳವಣಿಗೆ

09-12-21 06:27 pm       Source: News 18 Kannada   ಕ್ರೀಡೆ

Virat Kohli vs BCCI- ಟಿ20 ಮತ್ತು ಓಡಿಐ ಎರಡೂ ತಂಡದ ನಾಯಕತ್ವವನ್ನು ತ್ಯಜಿಸಬೇಕೆಂದು ವಿರಾಟ್ ಕೊಹ್ಲಿಗೆ ಬಿಸಿಸಿಐ ಬಹಳ ಹಿಂದೆಯೇ ಸೂಚಿಸಿತ್ತೆನ್ನಲಾಗಿದೆ. ಆದರೆ, ಕೊಹ್ಲಿ ಕೇವಲ ಟಿ20 ತಂಡದ ನಾಯಕತ್ವ ಮಾತ್ರ ಬಿಟ್ಟುಕೊಟ್ಟಿದ್ದರು. ಈಗ ಬಿಸಿಸಿಐ ಮಧ್ಯ ಪ್ರವೇಶಿಸಿ ಕೊಹ್ಲಿಯಿಂದ ಓಡಿಐ ಕ್ಯಾಪ್ಟನ್ಸಿಯನ್ನ ಹಿಂಪಡೆದಿದೆ.

ನವದೆಹಲಿ, ಡಿ. 9 : ವಿರಾಟ್ ಕೊಹ್ಲಿ ಮತ್ತು ಕ್ರಿಕೆಟ್ ಮಂಡಳಿ ಮಧ್ಯೆ ಏನೋ ಆಗುತ್ತಿದೆ ಎಂದು ಹಲವು ತಿಂಗಳುಗಳಿಂದಲೇ ಸುಳಿವು ನೀಡುವಂಥ ಬೆಳವಣಿಗೆಳು ನಡೆಯುತ್ತಾ ಬಂದಿವೆ. ಅನಿಲ್ ಕುಂಬ್ಳೆ ಟೀಮ್ ಇಂಡಿಯಾ ಕೋಚಿಂಗ್ ಸ್ಥಾನ ತ್ಯಜಿಸಿದಾಗಲೇ ಅಂತರ್ಯುದ್ಧದ ಸುಳಿವು ಸಿಕ್ಕಿತ್ತು. ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ವೇಳೆಗೆ ವಿರಾಟ್ ಕೊಹ್ಲಿ, ರವಿಶಾಸ್ತ್ರಿ ಸುತ್ತ ಅನುಮಾನದ ಹುತ್ತ ಬೆಳೆಯಲು ಆರಂಭವಾಗಿದ್ದವು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಈ ಅನುಮಾನ ಇನ್ನಷ್ಟು ದಟ್ಟಗೊಂಡಿತು. ಟೀಮ್ ಇಂಡಿಯಾದಲ್ಲಿ ಸ್ಪ್ಲಿಟ್ ಕ್ಯಾಪ್ಟನ್ಸಿ ಪ್ರಯೋಗ ಮಾಡಲಾಗುತ್ತದೆ ಎಂಬಂತಹ ಸುದ್ದಿ ಹೆಚ್ಚೆಚ್ಚು ಕೇಳಿಬರತೊಡಗಿತು. ಅಷ್ಟರಲ್ಲಾಗಲೇ ತಂಡದ ಕೆಲ ಆಟಗಾರರ ಜೊತೆ ವಿರಾಟ್ ಕೊಹ್ಲಿ ಸಂಬಂಧ ಕೆಡಿಸಿಕೊಂಡಿದ್ದಾರೆಂಬ ಸುದ್ದಿಗಳು ಬಂದವು. ಕೊಹ್ಲಿ ನಾಯಕತ್ವದಲ್ಲಿ ಭಾರತ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ, ಆರ್​ಸಿಬಿ ಐಪಿಎಲ್ ಗೆಲ್ಲಲು ಆಗಿಲ್ಲ ಎಂಬಂತಹ ಟೀಕೆಗಳು ಹೆಚ್ಚಾಗಿ ಕೇಳಬರತೊಡಗಿದವು.

ಟೆಸ್ಟ್ ಸರಣಿ ಮುಗಿದು ಐಪಿಎಲ್ ಎರಡನೇ ಲೆಗ್ ಆರಂಭಕ್ಕೆ ಮುನ್ನವೇ ವಿರಾಟ್ ಕೊಹ್ಲಿ ಟಿ20 ತಂಡದ ಕ್ಯಾಪ್ಟನ್ಸಿ ತೊರೆಯುವುದಾಗಿ ಘೋಷಿಸಿದರು. ಆರ್​ಸಿಬಿ ತಂಡದ ನಾಯಕತ್ವವನ್ನೂ ಐಪಿಎಲ್ ನಂತರ ಬಿಡುವುದಾಗಿ ಅವರು ಹೇಳಿದರು. ಆದರೆ ಅವರು ಎಂದೂ ಕೂಡ ಓಡಿಐ ಟೀಮ್​ನ ಕ್ಯಾಪ್ಟನ್ಸಿ ತೊರೆಯುವ ಸುಳಿವನ್ನು ಕೊಟ್ಟಿರಲಿಲ್ಲ. ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕನಾಗಿ ಮುಂದುವರಿಯುವುದಾಗಿ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದರು. ಕೊಹ್ಲಿ ಓಡಿಐ ಕ್ಯಾಪ್ಟನ್ ಆಗಿ ಮುಂದುವರಿಯುತ್ತೇನೆ ಎಂದು ಹೇಳಿದ್ದರೂ ಬಿಸಿಸಿಐ ಯಾಕೆ ರೋಹಿತ್ ಶರ್ಮಾ ಅವರನ್ನ ನಾಯಕನನ್ನಾಗಿ ಮಾಡಿತು?

ತಾನಾಗಿಯೇ ಕ್ಯಾಪ್ಟನ್ಸಿ ತೊರೆಯುವಂತೆ ಸೂಚಿಸಿತ್ತಾ ಬಿಸಿಸಿಐ?

ಮೂಲಗಳು ಹೇಳುವ ಪ್ರಕಾರ, ಟಿ20 ಮತ್ತು ಏಕದಿನ ಎರಡೂ ತಂಡಗಳ ನಾಯಕತ್ವವನ್ನು ತ್ಯಜಿಸಬೇಕೆಂದು ವಿರಾಟ್ ಕೊಹ್ಲಿಗೆ ಬಿಸಿಸಿಐ ಬಹಳ ಮುಂಚೆಯೇ ಸೂಚಿಸಿತಂತೆ. ಆದರೆ, ವಿರಾಟ್ ಕೊಹ್ಲಿ ಆಗಿದ್ದು ಆಗಲಿ ಎಂಬಂತೆ ಓಡಿಐ ತಂಡದ ನಾಯಕನಾಗಿ ಮುಂದುವರಿಯುವುದಾಗಿ ಹೇಳಿದರು. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ಕೊಹ್ಲಿ ತಾನಾಗಿಯೇ ಕ್ಯಾಪ್ಟನ್ಸಿ ಬಿಟ್ಟುಕೊಡುವುದಾಗಿ ಹೇಳಬಹುದು ಎಂದು ಕಾದಿದ್ದ ಬಿಸಿಸಿಐ ಕೊನೆಗೆ ತಾನೇ ಮಧ್ಯ ಪ್ರವೇಶಿಸಿ ಕೊಹ್ಲಿ ಅವರನ್ನ ಓಡಿಐ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದೆ. ತಂಡವನ್ನು ಘೋಷಿಸುವಾಗ ನಾಯಕನ್ನೂ ಹೆಸರಿಸುವುದು ಅನಿವಾರ್ಯ. ಹೀಗಾಗಿ, ಟಿ20 ಮತ್ತು ಓಡಿಐ ಎರಡೂ ತಂಡಗಳಿಗೂ ರೋಹಿತ್ ಶರ್ಮಾ ಅವರೇ ನಾಯಕ ಎಂದು ಬಿಸಿಸಿಐ ಮೊದಲು ಘೋಷಿಸಿತು.

ಮುಂದಿನ ದಿನಗಳಲ್ಲಿ ಟೆಸ್ಟ್ ಕ್ಯಾಪ್ಟನ್ಸಿಯೂ ಹೋಗಲಿದೆಯಾ?

ವಿರಾಟ್ ಕೊಹ್ಲಿ ಅವರು ಇದೀಗ ಟೆಸ್ಟ್ ತಂಡದ ನಾಯಕರಾಗಿ ಮುಂದುವರಿಯುತ್ತಾರೆ. ಟಿ20 ಮತ್ತು ಓಡಿಐ ತಂಡಗಳಿಗೆ ಅವರು ಆಟಗಾರನಾಗಿ ಮಾತ್ರ ಲಭ್ಯರಿದ್ದಾರೆ. ಕುತೂಹಲ ಎಂದರೆ ರೋಹಿತ್ ಶರ್ಮಾ ಅವರು ಟೆಸ್ಟ್ ತಂಡಕ್ಕೆ ಉಪನಾಯಕನಾಗಿ ಬಡ್ತಿ ಪಡೆದಿದ್ದಾರೆ. ಇದು ಮುಂದಿನ ದಿನಗಳಲ್ಲಿ ಕೊಹ್ಲಿಯಿಂದ ಟೆಸ್ಟ್ ಕ್ಯಾಪ್ಟನ್ಸಿಯನ್ನ ಪಡೆದು ರೋಹಿತ್ ಅವರಿಗೆ ಕೊಡುವ ಮುಂದಾಲೋಚನೆಯನ್ನ ಬಿಸಿಸಿಐ ಮಾಡಿದೆಯಾ ಎಂದು ಅನುಮಾನ ಬಾರದೇ ಇರದು.

ರೋಹಿತ್ ಕೂಡ ಅಸಾಮಾನ್ಯ ನಾಯಕ:

ಅದೇನೇ ಇರಲಿ ರೋಹಿತ್ ಶರ್ಮಾ ಕೂಡ ಯಾವ ನಾಯಕನಿಗೂ ಕಡಿಮೆಯವರಲ್ಲ. ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಅವರು ಅಪಾಯ ಯಶಸ್ಸು ಕಂಡಿದ್ಧಾರೆ. 2013ರಲ್ಲಿ ಅವರು ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿದ್ದು. ಆಗಿನಿಂದ ಅವರ ನಾಯಕತ್ವದಲ್ಲಿ ಮುಂಬೈ 5 ಬಾರಿ ಐಪಿಎಲ್ ಟ್ರೋಫಿ ಜಯಿಸಿದೆ. ಇದು ಸಾಧಾರಣ ವಿಷಯವಲ್ಲ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಕೆಲ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಅವರ ನಾಯಕತ್ವದಲ್ಲಿ ಆಡಲಾದ 10 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಎಂಟರಲ್ಲಿ ಗೆದ್ದಿದೆ. 22 ಟಿ20 ಪಂದ್ಯಗಳಲ್ಲಿ 18ರಲ್ಲಿ ಭಾರತ ಗೆದ್ದಿದೆ.

ತೆರೆಯ ಹಿಂದಿನ ಕಥೆ ಏನಿದ್ದಿರಬಹುದು?

ವಿರಾಟ್ ಕೊಹ್ಲಿ ನಾಯಕನಾಗಿ ಐಸಿಸಿ ಟ್ರೋಫಿಗಳನ್ನ ಗೆಲ್ಲದಿದ್ದರೂ ಬಹಳಷ್ಟು ಪಂದ್ಯಗಳನ್ನ ಗೆದ್ದಿದ್ದಾರೆ. ಹಿಂದೆಂದೂ ಟೀಮ್ ಇಂಡಿಯಾದ ಕೈಗೆಟುಕದೇ ಇದ್ದ ಸ್ಥಳದಲ್ಲಿ ಮತ್ತು ಸರಣಿಗಳಲ್ಲಿ ಗೆಲುವು ಸಿಕ್ಕಿವೆ. ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಜಯಭೇರಿ ಭಾರಿಸಿದೆ. ಭಾರತದ ಕ್ರಿಕೆಟ್ ಇತಿಹಾಸದಲ್ಲೇ ಎಲ್ಲಾ ನಾಯಕರಿಗಿಂತ ವಿರಾಟ್ ಕೊಹ್ಲಿ ಅವರೇ ಹೆಚ್ಚು ಯಶಸ್ಸು ಕಂಡಿರುವುದು. ಹೀಗಿದ್ದರೂ ಅವರನ್ನ ಬಲವಂತವಾಗಿ ಕ್ಯಾಪ್ಟನ್ಸಿ ಕಿತ್ತುಕೊಳ್ಳುವ ಅಗತ್ಯ ಏನಿತ್ತು ಎಂಬ ಪ್ರಶ್ನೆ ಕಾಡೇ ಕಾಡುತ್ತದೆ. ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರವಂತೂ ಸಿಗುತ್ತದೆ.

Cricket did Virat Kohli refused to step down as odi captain. The Indian cricket board's removal of Virat Kohli as ODI captain was inevitable when he refused to step down after a dismal T20 World Cup, local media said on Thursday. The star batsman had relinquished his leadership of a T20 side who were eliminated in the group stage of the World Cup -- anathema to fans in a country obsessed by cricket. But Kohli sought to hold on to the ODI captaincy -- a plan that came to an unceremonious end when the Board of Control for Cricket in India (BCCI) said late Wednesday that Rohit Sharma would captain the one-day team on its South Africa tour. "Virat Kohli refuses to step down, BCCI cracks whip," the Press Trust of India said in a headline.