ಸಾಲೆತ್ತೂರಿನಲ್ಲಿ ಎರಡು ತಂಡಗಳ ಹೊಡೆದಾಟ, ಚಾಕು ಇರಿದು ಹಲ್ಲೆ, ಇಬ್ಬರು ಆಸ್ಪತ್ರೆಗೆ ದಾಖಲು, ದೂರು-ಪ್ರತಿ ದೂರು

20-06-22 12:11 pm       Mangalore Correspondent   ಕ್ರೈಂ

ವಿಟ್ಲ ಠಾಣೆ ವ್ಯಾಪ್ತಿಯ ಸಾಲೆತ್ತೂರಿನ ಅಗರಿ ಎಂಬಲ್ಲಿ ಭಾನುವಾರ ಸಂಜೆ 5.30ಕ್ಕೆ ಬಜರಂಗದಳ ಸ್ಥಳೀಯ ಮುಖಂಡನೊಬ್ಬನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಈ ಬಗ್ಗೆ ದೂರು – ಪ್ರತಿ ದೂರು ದಾಖಲಾಗಿದೆ.

ಬಂಟ್ವಾಳ, ಜೂನ್ 20: ವಿಟ್ಲ ಠಾಣೆ ವ್ಯಾಪ್ತಿಯ ಸಾಲೆತ್ತೂರಿನ ಅಗರಿ ಎಂಬಲ್ಲಿ ಭಾನುವಾರ ಸಂಜೆ 5.30ಕ್ಕೆ ಬಜರಂಗದಳ ಸ್ಥಳೀಯ ಮುಖಂಡನೊಬ್ಬನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಈ ಬಗ್ಗೆ ದೂರು – ಪ್ರತಿ ದೂರು ದಾಖಲಾಗಿದೆ.

ವಿಟ್ಲ ಪ್ರಖಂಡ ಸಂಚಾಲಕ ಚಂದ್ರಹಾಸ ಎಂಬವರ ಮೇಲೆ ತಂಡವೊಂದು ಹಲ್ಲೆ ನಡೆಸಿದೆ. ಈ ಬಗ್ಗೆ ಚಂದ್ರಹಾಸ ನೀಡಿದ ದೂರಿನಲ್ಲಿ ಪ್ರಶಾಂತ, ತೇಜಸ್, ಗಿರೀಶ್, ಗಣೇಶ್, ಶರತ್, ಧನು, ಮುನ್ನ, ಚೇತನ, ವಿನಿತ, ದಿನೇಶ್, ಶಶಿಕುಮಾರ್ ಹಾಗೂ ಇತರ ಇಬ್ಬರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆಂದು ತಿಳಿಸಿದ್ದಾರೆ. ಚೂರಿಯಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದು ಹಲ್ಲೆಗೊಳಗಾದ ಚಂದ್ರಹಾಸ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದಕ್ಕೆದುರಾಗಿ ಸುರತ್ಕಲ್ ಇಡ್ಯಾ ಗ್ರಾಮದ ಪ್ರಶಾಂತ್ ಅಲಿಯಾಸ್ ಪಚ್ಚು (30) ಎಂಬಾತ ವಿಟ್ಲ ಠಾಣೆಯಲ್ಲಿ ಪ್ರತಿದೂರು ನೀಡಿದ್ದು, ತಮ್ಮ ಸಹವರ್ತಿ ಹುಡುಗರ ನಡುವಿನ ವೈಷಮ್ಯದ ಬಗ್ಗೆ ಮಾತನಾಡಲು ಸಾಲೆತ್ತೂರು ಗ್ರಾಮದ ನಾಗೇಶ್ ಎಂಬವರ ಮನೆಯ ಬಳಿಗೆ ಹೋಗಿದ್ದು, ಅಲ್ಲಿ ಚಂದ್ರಹಾಸ, ದೇವದಾಸ ಮತ್ತು ನಾಗೇಶ್ ಇದ್ದರು. ಈ ವೇಳೆ, ಮಾತಿಗೆ ಮಾತು ಬೆಳೆದು ಚಂದ್ರಹಾಸ ಮತ್ತು ದೇವದಾಸ ತನ್ನನ್ನು ಹಿಡಿದು ಕೊಲೆಗೆ ಯತ್ನಿಸಿದ್ದಾರೆ. ಕುತ್ತಿಗೆ ಬೆನ್ನಿಗೆ ಚಾಕುವಿನಲ್ಲಿ ಕೊಯ್ದು ತೀವ್ರ ಹಲ್ಲೆ ಮಾಡಿದ್ದು, ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಅಲ್ಲಿನ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೇಲ್ನೋಟಕ್ಕೆ ಎರಡು ತಂಡಗಳ ನಡುವೆ ಜಗಳ ನಡೆದು ಹೊಡೆದಾಟ ನಡೆದಿರುವ ಸಾಧ್ಯತೆಯಿದೆ. ಇಬ್ಬರಿಗೂ ಹಲ್ಲೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಟ್ಲ ಠಾಣೆಯಲ್ಲಿ ಇತ್ತಂಡಗಳ ದೂರಿನಂತೆ ಪ್ರಕರಣ ದಾಖಲಾಗಿದೆ.

Fight between two groups in Bantwal, Bajrang Dal local leader Chandrahas stabbed. Police are now on search for the accused.