ಕಾಲೇಜು ವಿದ್ಯಾರ್ಥಿಗಳ ಬೀದಿ ಜಗಳ ; ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ತಿವಿದು ಹಲ್ಲೆ, ಪೊಲೀಸ್ ವಶಕ್ಕೆ 

17-09-22 08:47 pm       Mangalore Correspondent   ಕ್ರೈಂ

ನಗರದ ಕಾಲೇಜೊಂದರ ವಿದ್ಯಾರ್ಥಿಗೆ ಮತ್ತೊಂದು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ನಂತೂರು ಜಂಕ್ಷನ್ ಬಳಿ ನಡೆದಿದೆ.

ಮಂಗಳೂರು, ಸೆ.17: ನಗರದ ಕಾಲೇಜೊಂದರ ವಿದ್ಯಾರ್ಥಿಗೆ ಮತ್ತೊಂದು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ನಂತೂರು ಜಂಕ್ಷನ್ ಬಳಿ ನಡೆದಿದೆ.

ನಂತೂರು ಬಳಿಯ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸೆ.15ರಂದು ಸಂಜೆ ಕಾಲೇಜು ಬಿಟ್ಟು ತನ್ನ ಗೆಳೆಯರೊಂದಿಗೆ ನಂತೂರು ಜಂಕ್ಷನ್ ಕಡೆಗೆ ನಡೆದುಕೊಡು ಹೋಗುತ್ತಿದ್ದಾಗ ಮತ್ತೊಂದು ಪ.ಪೂ. ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಗಮಿಸಿ ‘ಮಾತನಾಡಲು ಇದೆ’ ಎಂದು ಹೇಳಿ ದೈವಸ್ಥಾನದ ಹಿಂಬದಿಗೆ ಕರೆದೊಯ್ದು ಹೊಟ್ಟೆ, ಎಡಕೈ, ಬೆನ್ನಿಗೆ ಚೂರಿಯಿಂದ ತಿವಿದು ಗಾಯಗೊಳಿಸಿದ್ದಾರೆ. ಗಾಯಗೊಂಡ 17 ವರ್ಷದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿಯು ಮತ್ತೊಂದು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತನ್ನ ಗೆಳೆಯನಿಗೆ ಅದೇ ಕಾಲೇಜಿನ ಮೂವರು ವಿದ್ಯಾರ್ಥಿಗಳು ಬೆದರಿಕೆ ಹಾಕಿದ ಬಗ್ಗೆ ಸಮಾಧಾನ ಮಾಡಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ಇಬ್ಬರು ವಿದ್ಯಾರ್ಥಿಗಳು ಕೊಲೆ ಮಾಡುವ ಉದ್ದೇಶದಿಂದ ಚೂರಿಯಿಂದ ತಿವಿದಿದ್ದಾರೆ ಎಂಬುದಾಗಿ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಗೊಂಡ ಮತ್ತು ಹಲ್ಲೆ ನಡೆಸಿದ ವಿದ್ಯಾರ್ಥಿಗಳು 17 ವರ್ಷ ಪ್ರಾಯದವರಾಗಿದ್ದು, ಕಾನೂನು ಸಂಕರ್ಷಕ್ಕೊಳಗಾದ ಬಾಲಕರಾದ ಹಿನ್ನೆಲೆಯಲ್ಲಿ ಅವರನ್ನು ಪೋಷಕರೊಂದಿಗೆ ವಿಚಾರಿಸಿ ಕಾನೂನು ಕ್ರಮ ಕೈಗೊಂಡು ಬಾಲ ನ್ಯಾಯ ಮಂಡಳಿಗೆ ವರದಿ ಸಲ್ಲಿಸಲಾಗಿದೆ ಎಂದು ಕದ್ರಿ ಪೊಲೀಸರು ತಿಳಿಸಿದ್ದಾರೆ.

Padua College students fight ends in stabbing, two minors produced to juvenile court in Mangalore