ತಾಲೂಕು ಪಂಚಾಯತ್ ಯೋಜನಾಧಿಕಾರಿಯ ಪರ್ಸ್ ಎಗರಿಸಿದ ಚಾಲಾಕಿ ಮಹಿಳೆ ; ಕೃತ್ಯ ಬಸ್ಸಿನ ಸಿಸಿಟಿವಿಯಲ್ಲಿ ಸೆರೆ 

21-09-22 03:25 pm       Mangalore Correspondent   ಕ್ರೈಂ

ಖಾಸಗಿ ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಇನ್ನೊಬ್ಬ ಮಹಿಳೆಯ ಪರ್ಸ್ ಕದ್ದಿರುವುದು ಬಸ್ ಒಳಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದ್ದು ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪುತ್ತೂರು, ಸೆ.21: ಖಾಸಗಿ ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಇನ್ನೊಬ್ಬ ಮಹಿಳೆಯ ಪರ್ಸ್ ಕದ್ದಿರುವುದು ಬಸ್ ಒಳಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದ್ದು ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುತ್ತೂರು ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಆಗಿರುವ ಸುಕನ್ಯಾ ಎಂಬ ಮಹಿಳೆ ಪರ್ಸ್ ಕಳೆದುಕೊಂಡವರಾಗಿದ್ದು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. 

ಸುಕನ್ಯಾ ಪ್ರತಿ ದಿನ ಮಂಗಳೂರಿನಿಂದ ಪುತ್ತೂರಿಗೆ ಬಸ್​​ನಲ್ಲಿ ತೆರಳುತ್ತಾರೆ. ಸೆ.20ರಂದು ಮಹೇಶ್ ಹೆಸರಿನ ಖಾಸಗಿ ಬಸ್​​ನಲ್ಲಿ ಸಂಚರಿಸುತ್ತಿದ್ದಾಗ ಕಲ್ಲಡ್ಕದಲ್ಲಿ ಬಸ್ ಹತ್ತಿದ ಓರ್ವ ಮಹಿಳೆ ಅವರ ಪಕ್ಕದಲ್ಲೇ ಕುಳಿತಿದ್ದರು. ಸುಕನ್ಯಾ ಬಳಿಕ ಪುತ್ತೂರು ಪೋಸ್ಟ್ ಆಫೀಸ್ ತಂಗುದಾಣದ ಬಳಿ ಬಸ್​​ ಇಳಿದು ಹೋಗಿದ್ದರು.

 

ಪುತ್ತೂರು ತಾ.ಪಂಗೆ ನಡೆದುಕೊಂಡು ಹೋಗುತ್ತಿದ್ದಾಗ ಪರ್ಸ್ ತಡಕಾಡುವಷ್ಟರಲ್ಲಿ ಬ್ಯಾಗ್ ಜಿಪ್ ಓಪನ್ ಆಗಿ ಪರ್ಸ್ ಕಳ್ಳತನ ಆಗಿದ್ದು ಗೊತ್ತಾಗಿತ್ತು. ಆನಂತರ ಪರಿಚಯದ ಬಸ್​​ ಚಾಲಕರೊಬ್ಬರಿಗೆ ಈ ಬಗ್ಗೆ ತಿಳಿಸಿದ್ದು ತಾನು ಬಂದಿದ್ದ ಮಹೇಶ್ ಬಸ್​​ ಕುರಿತಾಗಿಯೂ ಮಾಹಿತಿ ನೀಡಿದ್ದರು. 

ಚಾಲಕನ ಸಲಹೆಯಂತೆ ಸುಕನ್ಯಾ ಅವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು. ಅಲ್ಲದೆ, ಬಸ್ಸಿನಲ್ಲಿ ಸಿಸಿಟಿವಿ ಇರುವ ಬಗ್ಗೆಯೂ ತಿಳಿಸಿದ್ದರು. ಪೊಲೀಸರು ಸಿಸಿಟಿವಿಯನ್ನು ಸಂಗ್ರಹಿಸಿದ್ದು ಚಾಲಾಕಿ ಮಹಿಳೆಯನ್ನು ಹುಡುಕಾಟ ನಡೆಸಿದ್ದಾರೆ.

ಚಾಲಾಕಿ ಮಹಿಳೆ ಮಂಗಳೂರಿನಲ್ಲಿ ಸೆರೆ 

ಪರ್ಸ್ ಕಳ್ಳತನ ಮಾಡಿದ್ದ ಮಹಿಳೆ ಇಂದು ಬೆಳಗ್ಗೆ ಮಂಗಳೂರಿನಿಂದ ಉಪ್ಪಿನಂಗಡಿಗೆ ಹೊರಟಿದ್ದ ಬಸ್ ನಲ್ಲಿ ಇದ್ದರು. ಇದನ್ನು ಕಂಡ ಬಸ್ಸಿನ ನಿರ್ವಾಹಕ, ಮಹೇಶ್ ಬಸ್ಸಿನ‌ ಚಾಲಕನಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿ ಬಿ.ಸಿ.ರೋಡಿನಲ್ಲಿ ಪೊಲೀಸರೂ ಸಿದ್ಧರಾಗಿದ್ದರು. ಈ‌ ಬಗ್ಗೆ ಅರಿತ ವೃದ್ಧ ಮಹಿಳೆ, ಪಡೀಲ್ ನಲ್ಲಿ ಬಸ್ಸಿನಿಂದ ಇಳಿಯಲು ಯತ್ನಿಸಿದ್ದು, ನಿರ್ವಾಹಕ ಮತ್ತು ಚಾಲಕ ತಡೆದಿದ್ದಾರೆ. ನಂತರ ಸ್ಥಳಕ್ಕೆ ಬಂದ ಗ್ರಾಮಾಂತರ ಪೊಲೀಸರು ವೃದ್ಧೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

Police identified the elderly woman who had stolen a purse from the bag on a private bus (Mahesh) on Tuesday. She was detained and taken to Kankanady police station.