ಆಧಾರ್ ಕಾರ್ಡ್ ಸೇರಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ, ವ್ಯವಸ್ಥಿತ ಜಾಲ ಪತ್ತೆ ; ಬ್ಯಾಂಕ್, ಸರಕಾರಿ ಉದ್ಯೋಗದಲ್ಲಿದ್ದೇ ಅಕ್ರಮ ವಹಿವಾಟು ! 

24-09-22 10:58 pm       Bangalore Correspondent   ಕ್ರೈಂ

​​​​​ನಕಲಿ ಆಧಾರ್ ಕಾರ್ಡ್ ಇನ್ನಿತರ ದಾಖಲೆ ದೃಷ್ಟಿಸಿ ದುರ್ಬಳಕೆ ಮಾಡುತ್ತಿದ್ದ ಗ್ಯಾಂಗ್‌ ಅನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್, ರಮೇಶ್, ನಾಗರಾಜ್, ಸುನಿಲ್.ಡಿ ರೂಪಂ ಭಟ್ಟಾಚಾರ್ಜಿ, ರವಿ ಬಂಧಿತರು.

ಬೆಂಗಳೂರು, ಸೆ. 24 : ನಕಲಿ ಆಧಾರ್ ಕಾರ್ಡ್ ಇನ್ನಿತರ ದಾಖಲೆ ದೃಷ್ಟಿಸಿ ದುರ್ಬಳಕೆ ಮಾಡುತ್ತಿದ್ದ ಗ್ಯಾಂಗ್‌ ಅನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್, ರಮೇಶ್, ನಾಗರಾಜ್, ಸುನಿಲ್.ಡಿ ರೂಪಂ ಭಟ್ಟಾಚಾರ್ಜಿ, ರವಿ ಬಂಧಿತರು.

ಆರೋಪಿಗಳು ನಕಲಿ ವಿಳಾಸ, ಹೆಸರು, ಫೋಟೋ ನೀಡಿ ಆಧಾರ್ ಕಾರ್ಡ್ ಮಾಡಿಸುತ್ತಿದ್ದರು. ಆರು ಜನರ ಪೈಕಿ ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ನಿರ್ವಹಿಸುತ್ತಿದ್ದರು. ಪ್ರವೀಣ್, ಮೊಬೈಲ್ ಸೆಂಟರ್ ನಡೆಸುತ್ತಿದ್ದ ಆರೋಪಿಯಾಗಿದ್ದು ಆಧಾರ್ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿಟ್ಟುಕೊಳ್ಳುತ್ತಿದ್ದ.‌ ಆಧಾರ್ ಬೇಕಿರುವವರ ಮಾಹಿತಿ‌ ಪಡೆದು ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸುತ್ತಿದ್ದ. 

ರಮೇಶ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು ಪ್ರವೀಣ್ ಕಳಿಸುತ್ತಿದ್ದ ಅರ್ಜಿದಾರನನ್ನ ಗೆಜೆಟೆಡ್ ಆಫೀಸರ್ ಬಳಿ‌ ಕರೆದೊಯ್ಯುತ್ತಿದ್ದ. ಸಹಿ ಹಾಕಿಸಲು ಸಹಾಯವನ್ನು ಮಾಡುತ್ತಿದ್ದ. ಆರೋಪಿ ಸುನಿಲ್.ಡಿ ಪ್ರೈಮರಿ ಹೆಲ್ತ್ ಸೆಂಟರಿನ ನಿವೃತ್ತ ವೈದ್ಯ. ನಿವೃತ್ತಿ ನಂತರವೂ ಗೆಜೆಟೆಡ್ ಸೀಲ್ ಅನ್ನು ತನ್ನ ಬಳಿ‌ ಇಟ್ಟುಕೊಂಡಿದ್ದಲ್ಲದೆ ದುರುಪಯೋಗ ಮಾಡುತ್ತಿದ್ದ. ಪ್ರವೀಣ್ ಕಳಿಸುತ್ತಿದ್ದ ಅಪ್ಲಿಕೇಶನ್ ಪಡೆದು ಸೀಲ್ ಸಹಿ‌ ಹಾಕಲು ಹಣವನ್ನು ಪಡೆಯುತ್ತಿದ್ದ. 

ನಾಗರಾಜ್ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದು ಅಧಿಕೃತವಾಗಿ ಆಧಾರ್ ಪಡೆಯಲು ಬೇಕಿರುವ ಸ್ಕ್ಯಾನರ್ ದುರ್ಬಳಕೆ ಮಾಡಿಕೊಳ್ತಿದ್ದ. ಸ್ಕ್ಯಾನ್ ಮಾಡಿ ನಕಲಿ ದಾಖಲಾತಿಗಳ ಸಹಿತ ಆಧಾರ್ ಫಾರ್ಮ್ ಅಪ್‌ಲೋಡ್ ಮಾಡುತ್ತಿದ್ದ ಎನ್ನಲಾಗಿದೆ. 

ರೂಪಂ ಭಟ್ಟಾಚಾರ್ಜಿ ಒರಿಸ್ಸಾ ಮೂಲದವನು. ಗಾರ್ಮೆಂಟ್ಸ್ ನಲ್ಲಿ ಸೂಪರ್ವೈಸರ್ ಕೆಲಸ ಮಾಡಿಕೊಂಡಿದ್ದ ಆರೋಪಿ.‌ ಸ್ಯಾಲರಿ ಪಡೆಯಲು ಆಧಾರ್ ಕಡ್ಡಾಯ ಇರುವುದರಿಂದ ದಾಖಲೆ ಬೇಕಿರುವವರನ್ನ ಪ್ರವೀಣ್ ಬಳಿ ಕಳಿಸಿಕೊಡುತ್ತಿದ್ದ. ರವಿ ಸರ್ಕಾರಿ ಆಸ್ಪತ್ರೆಯ ಉದ್ಯೋಗಿಯಾಗಿದ್ದು ಆಧಾರ್ ಅಗತ್ಯವಿರುವವರನ್ನ ಪ್ರವೀಣ್ ಬಳಿಯೇ ಕಳಿಸಿಕೊಡ್ತಿದ್ದ. 

ಎಲ್ಲರೂ ವ್ಯವಸ್ಥಿತವಾಗಿ ವ್ಯವಹಾರ ಮಾಡುತ್ತಿದ್ದರು. ಪ್ರತಿ ಹಂತದಲ್ಲಿ‌ ನೂರಿನ್ನೂರು ರೂಪಾಯಿ‌ ಪಡೆದು ಆಧಾರ್ ಪ್ರಕ್ರಿಯೆ ಕಂಪ್ಲೀಟ್ ಮಾಡಿಕೊಡ್ತಿದ್ದರು. ಬೊಮ್ಮನಹಳ್ಳಿ‌ ಪೊಲೀಸರು ಆರೋಪಿಗಳನ್ನ ಬಂಧಿಸಿ ಅವರಿಂದ ಸೀಲ್, ಕಂಪ್ಯೂಟರ್, ಪ್ರಿಂಟರ್, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಜಪ್ತಿ ಮಾಡಿದ್ದಾರೆ.

Fake aadhar racket in Bangalore by Bank and government employees in Bangalore busted.