ಮಂಡ್ಯದಲ್ಲಿ ಬಾಲಕಿ ಅತ್ಯಾಚಾರ, ಕೊಲೆ ಹಿನ್ನೆಲೆ ; ರಾಜ್ಯದಾದ್ಯಂತ ಅನಧಿಕೃತ ಟ್ಯೂಶನ್ ಸೆಂಟರ್ ಮೇಲೆ ಕಠಿಣ ಕ್ರಮಕ್ಕೆ ಸೂಚನೆ

26-10-22 01:27 pm       Bangalore Correspondent   ಕ್ರೈಂ

ಮಂಡ್ಯದಲ್ಲಿ ಟ್ಯೂಶನ್ ನೆಪದಲ್ಲಿ ಶಿಕ್ಷಕನೇ ಹತ್ತು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣದ ಬಳಿಕ ಶಿಕ್ಷಣ ಇಲಾಖೆ ಎಚ್ಚತ್ತುಕೊಂಡಿದೆ.‌

ಬೆಂಗಳೂರು, ಅ.26: ಮಂಡ್ಯದಲ್ಲಿ ಟ್ಯೂಶನ್ ನೆಪದಲ್ಲಿ ಶಿಕ್ಷಕನೇ ಹತ್ತು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣದ ಬಳಿಕ ಶಿಕ್ಷಣ ಇಲಾಖೆ ಎಚ್ಚತ್ತುಕೊಂಡಿದೆ.‌ ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಟ್ಯೂಷನ್ ತರಬೇತಿ ಕೇಂದ್ರಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. 

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಬಾಲಕಿ ಹತ್ಯೆ ಘಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನಧಿಕೃತ ಕೋಚಿಂಗ್ ಸೆಂಟರ್ ಕುರಿತಂತೆ ಮಾಹಿತಿ ಸಂಗ್ರಹಿಸಿ, ಕಠಿಣ ಕ್ರಮಕ್ಕೆ ಸೂಚನೆ ನೀಡಿದೆ. ಘಟನೆ ನಡೆದ ಬಳಿಕ ಸರ್ಕಾರ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲ ಎಂಬ ಮಾತು ಕೇಳಿಬಂದಿತ್ತು. ಇದರಿಂದ ಎಚ್ಚೆತ್ತ ಶಿಕ್ಷಣ ಇಲಾಖೆ ಆಯುಕ್ತ ವಿಶಾಲ್ ಆರ್. ರಾಜ್ಯದ ಎಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದು, ಅನಧಿಕೃತ ಕೋಚಿಂಗ್ ಸೆಂಟರ್ ಗಳ ಬಗ್ಗೆ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ‌

ಶೀಘ್ರದಲ್ಲೇ ರಾಜ್ಯದೆಲ್ಲೆಡೆ ದಾಳಿ ಸಾಧ್ಯತೆ 

ಪ್ರತೀ ಜಿಲ್ಲೆಯಲ್ಲಿ ಅಧಿಕೃತ ಹಾಗೂ ಅನಧಿಕೃತ ಕೋಚಿಂಗ್ ಸೆಂಟರ್ ಗಳು ಎಷ್ಟಿವೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದೀಪಾವಳಿ ಹಬ್ಬವಿರುವ ಕಾರಣದಿಂದ ತಡವಾಗಿದೆ. ಹಬ್ಬ ಮುಗಿದ ಕೂಡಲೇ ಅದರ ಮಾಹಿತಿಯನ್ನು ಇಲಾಖೆಗೆ ಕಳುಹಿಸುತ್ತೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಟಿ.ಜವರೇಗೌಡ ಹೇಳಿದ್ದಾರೆ.

ಅನಧಿಕೃತ ಟ್ಯೂಷನ್ ತರಬೇತಿ ಹಾಗೂ ವಸತಿ ಮನೆ ಪಾಠಗಳ ಹಾವಳಿ ತಡೆಯುವಂತೆ ದೂರುಗಳು ಬಂದ ಹಿನ್ನೆಲೆ ಕರ್ನಾಟಕ ಶಿಕ್ಷಣ ಕಾಯಿದೆ 1983 ರ ನಿಯಮ 35 ರಡಿ ಟ್ಯುಟೋರಿಯಲ್ ಕೇಂದ್ರಗಳನ್ನ ನೊಂದಾಯಿಸುವುದು ಅವಶ್ಯವಾಗಿರುತ್ತದೆ. ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವಿಭಾಗಕ್ಕೆ ಜಿಲ್ಲಾ ಉಪ ನಿರ್ದೇಶಕರನ್ನು ನೊಂದಣಿ ಪ್ರಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿರುತ್ತದೆ. ಆದ್ದರಿಂದ 1 ರಿಂದ 7 ಹಾಗೂ 8 ರಿಂದ 10 ನೇ ತರಗತಿವರೆಗೆ ಟ್ಯುಟೋರಿಯಲ್ ಸಂಸ್ಥೆಗಳನ್ನು ನೊಂದಾಯಿಸಲು ಜಿಲ್ಲಾ ಉಪನಿರ್ದೇಶಕರೇ ನೊಂದಣಿ ಪ್ರಾಧಿಕಾರಿಗಳಾಗಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಟ್ಯೂಷನ್ ತರಬೇತಿ ಕೇಂದ್ರಗಳು ಅನಧಿಕೃತವಾಗಿ ನಡೆಯುತ್ತಿದ್ದಲ್ಲಿ ನಿಮಮಾನುಸಾರ ಪರಿಶೀಲಿಸಿ ಶಿಕ್ಷಣ ಕಾಯಿದೆಯನ್ವಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.

Mandya minor student rape and murder case, illegal tuitions to be raided soon in Karnataka says education department. The police probing the rape and murder case of a 10-year-old girl, submitted a charge sheet in a record 14 days time. The gruesome incident had taken place in Malavalalli town triggering public outcry and protests.