ಐಓಬಿ ಬ್ಯಾಂಕಿನ ಮ್ಯಾನೇಜರ್ ನಿಂದಲೇ ದೋಖಾ, ತನ್ನದೇ ಬ್ಯಾಂಕಿನಲ್ಲಿ ಬರೋಬ್ಬರಿ 21 ನಕಲಿ ಖಾತೆ ತೆರೆದು ಮೋಸ, 71 ಲಕ್ಷ ಸಾಲ ನೀಡಿ ಸಿಕ್ಕಿಬಿದ್ದ ! 

13-11-22 10:47 pm       Mangalore Correspondent   ಕ್ರೈಂ

ಒಂದೇ ಬ್ಯಾಂಕಿನಲ್ಲಿ ಬರೋಬ್ಬರಿ 21 ನಕಲಿ ಖಾತೆಗಳನ್ನು ತೆರೆದಿದ್ದಲ್ಲದೆ, ಸಿಬಂದಿಯೇ ಸಾಲ ಒದಗಿಸಿ ಹಣವನ್ನು ಬೇರೆ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿ ಸಿಕ್ಕಿಬಿದ್ದ ಪ್ರಕರಣ ಬೆಳಕಿಗೆ ಬಂದಿದೆ. 

ಪುತ್ತೂರು, ನ.13 : ಒಂದೇ ಬ್ಯಾಂಕಿನಲ್ಲಿ ಬರೋಬ್ಬರಿ 21 ನಕಲಿ ಖಾತೆಗಳನ್ನು ತೆರೆದಿದ್ದಲ್ಲದೆ, ಸಿಬಂದಿಯೇ ಸಾಲ ಒದಗಿಸಿ ಹಣವನ್ನು ಬೇರೆ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿ ಸಿಕ್ಕಿಬಿದ್ದ ಪ್ರಕರಣ ಬೆಳಕಿಗೆ ಬಂದಿದೆ. 

ಕಡಬ ತಾಲೂಕಿನ ರಾಮಕುಂಜದಲ್ಲಿರುವ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್ ನ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರಾಗಿದ್ದ ಚೇತನ್‌ ಶರ್ಮಾ ಎಂಬಾತ ಆರೋಪಿ. ಈ ಬಗ್ಗೆ  ಮಂಗಳೂರಿನ ಇಂಡಿಯನ್‌ ಓವರ್‌ ಸೀಸ್‌ ಬ್ಯಾಂಕ್‌ ವಲಯ ಕಚೇರಿ ಮ್ಯಾನೇಜರ್ ಅಮಿತ್‌ ಕುಮಾರ್ ಎಂಬವರು ಕಡಬ ಠಾಣೆಗೆ ದೂರು ನೀಡಿದ್ದಾರೆ. 

ಆರೋಪಿತ ಬ್ಯಾಂಕ್ ಮ್ಯಾನೇಜರ್ ಚೇತನ್‌ ಶರ್ಮಾ ಎಂಬಾತ ತಾನು ಕರ್ತವ್ಯದಲ್ಲಿದ್ದ ಬ್ಯಾಂಕ್‌ನಲ್ಲಿಯೇ ಮಹೇಶ್‌, ಸವಿತಾ ಶರ್ಮಾ, ರೇಣುಕ, ಅಕ್ಷಯ್‌ ಎಸ್, ನಿಖಿತಾ ಎಸ್, ರಾಹುಲ್‌ ಎಸ್, ಉಮಾ ಚತುರ್ವೇದಿ ಎಂಬವರ ಹೆಸರಿನಲ್ಲಿ 21 ನಕಲಿ ಲೋನ್‌ ಖಾತೆಗಳನ್ನು ತೆರೆದಿದ್ದ. ಅಲ್ಲದೆ, ಯಾವುದೇ ದಾಖಲೆ ಪತ್ರಗಳಿಲ್ಲದೆ ಖಾತೆಗಳನ್ನು ತೆರೆದು ಒಟ್ಟು71,29,350/- ರೂ. ಹಣವನ್ನು ಯಾವುದೇ ದಾಖಲೆಗಳನ್ನು ಪಡೆಯದೇ ಸಾಲ ನೀಡಿದ್ದ. ಆಯಾ ನಕಲಿ ಖಾತೆಗಳಿಗೆ ಹಣ ಜಮಾವಣೆ ಮಾಡಿ, ಆನಂತರ ಬೇರೆ ಬೇರೆ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ.

21 ನಕಲಿ ಲೋನ್‌ ಖಾತೆಗಳಿಗೆ ಆರೋಪಿ ಒಟ್ಟು 51,31,141/- ರೂ.ಗಳನ್ನು ಜಮೆ ಮಾಡಿದ್ದ. ಈ ಬಗ್ಗೆ ಬ್ಯಾಂಕ್ ಅಡಿಟ್‌ ಸಮಯದಲ್ಲಿಯೂ ಅಕ್ರಮವಾಗಿ ಬೇರೆ ಬೇರೆ ಖಾತೆಗಳಿಗೆ ಹಣ ಸಂದಾಯ ಮಾಡಿದ ಬಗ್ಗೆ ಪ್ರಾಥಮಿಕ ವಿಚಾರಣೆಯಲ್ಲಿ ಕಂಡುಬಂದಿದೆ. 

ಇದೇ ಕಾರಣದಿಂದ ಆರೋಪಿಯನ್ನು 2022 ರ ಮೇ 19 ರಂದು ಬ್ಯಾಂಕಿನ ಸೇವೆಯಿಂದ ಅಮಾನತು ಮಾಡಲಾಗಿತ್ತು. ಆರೋಪಿ ತೆರೆದಿದ್ದ ನಕಲಿ ಖಾತೆಗಳಿಂದ 19,98,208/- ರೂ. ಮರು ಪಾವತಿಯಾಗದೆ ಬಾಕಿ ಇರುತ್ತದೆ. ಆದುದರಿಂದ ನಕಲಿ ಖಾತೆಗಳನ್ನು ತೆರೆದು ಯಾವುದೇ ರೀತಿಯ ಕ್ರಯ, ಆಸ್ತಿಪತ್ರ, ಮೌಲ್ಯಮಾಪನ ವರದಿ, ಕಾನೂನು ಅಭಿಪ್ರಾಯ, ಅಡಮಾನ ತೆಗೆದುಕೊಳ್ಳದೇ ವಸತಿ ಸಾಲ ಮತ್ತು ಭೂಮಿ ಲಕ್ಷ್ಮೀ ಸಾಲ ಇತ್ಯಾದಿ ಸಾಲಗಳನ್ನು ಮಂಜೂರು ಮಾಡಿ ಬ್ಯಾಂಕ್‌ ಹಣವನ್ನು ದುರುಪಯೋಗಪಡಿಸಿ ಕೊಂಡಿರವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 96/2022 ಕಲಂ: ಕಲಂ: 409. 420 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Kadaba IOB Bank Manager accused of cheating, 21 fake accounts opened, 71 lakhs loan sanctioned illegally. A cheating case has been registered against him by Mangalore Indian oversees bank manager Amith  to Kadaba police station.