ಹೋಲ್ ಸೇಲ್ ಹೂವಿನ ವ್ಯಾಪಾರಿ ಅಂಗಡಿಗೆ ಕನ್ನ ; 9 ಲಕ್ಷ ರೂ. ನಗದು ಕಳವು 

18-11-22 07:46 pm       Mangalore Correspondent   ಕ್ರೈಂ

ಹೂವಿನ ಅಂಗಡಿಯಲ್ಲಿ ಇಟ್ಟಿದ್ದ 9 ಲಕ್ಷ ರೂ. ನಗದು ಮತ್ತು ಸಿಸಿ ಕೆಮರಾದ ಡಿವಿಆರ್‌ ಕಳವುಗೈದ ಘಟನೆ ಮಂಗಳೂರಿನ ಕೆ.ಎಸ್‌. ರಾವ್‌ ರಸ್ತೆಯ ನಲಪ್ಪಾಡ್ ಚೇಂಬರ್ ಕಟ್ಟಡದಲ್ಲಿ ನಡೆದಿದೆ. 

ಮಂಗಳೂರು, ನ.18: ಹೂವಿನ ಅಂಗಡಿಯಲ್ಲಿ ಇಟ್ಟಿದ್ದ 9 ಲಕ್ಷ ರೂ. ನಗದು ಮತ್ತು ಸಿಸಿ ಕೆಮರಾದ ಡಿವಿಆರ್‌ ಕಳವುಗೈದ ಘಟನೆ ಮಂಗಳೂರಿನ ಕೆ.ಎಸ್‌. ರಾವ್‌ ರಸ್ತೆಯ ನಲಪ್ಪಾಡ್ ಚೇಂಬರ್ ಕಟ್ಟಡದಲ್ಲಿ ನಡೆದಿದೆ. 

ಕಂಕನಾಡಿ ನಿವಾಸಿ ಉಮರಬ್ಬ ಅವರಿಗೆ ಸೇರಿದ ಹೂವಿನ ಅಂಗಡಿಯಲ್ಲಿ ಘಟನೆ ನಡೆದಿದ್ದು, ಕಳೆದ 12 ವರ್ಷಗಳಿಂದ ಹೋಲ್‌ಸೇಲ್‌ ಹೂವಿನ ವ್ಯಾಪಾರ ಮಾಡಿಕೊಂಡಿದ್ದರು. ಗುರುವಾರ ಬೆಳಗ್ಗೆ ಅವರ ಮಗ ರಿಯಾಜ್‌ ಅಂಗಡಿ ತೆರೆಯಲು ಬಂದಾಗ ಅಂಗಡಿಯ ಮುಖ್ಯ ದ್ವಾರದ ಶಟರ್‌ನ ಸೆಂಟರ್‌ ಲಾಕ್‌ ಮುರಿದಿತ್ತು. ಅಂಗಡಿಯ ಶಟರ್‌ ಮೇಲಕ್ಕೆತ್ತಿ ನೋಡಿದಾಗ ಟೇಬಲ್‌ನ ಡ್ರಾವರ್‌ ಲಾಕ್‌ ಮುರಿದು ಅದರಲ್ಲಿದ್ದ 9 ಲಕ್ಷ ರೂ. ನಗದು ಹಾಗೂ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಕೆಮರಾ ಡಿವಿಆರ್‌ ಬಾಕ್ಸ್‌ ಅನ್ನೂ ಕಿತ್ತು ತೆಗೆದುಕೊಂಡು ಹೋಗಿದ್ದಾರೆ.

ಉಮರಬ್ಬ ಅವರು ಪ್ರತಿನಿತ್ಯ ವ್ಯಾಪಾರದ ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಹೂವು ಪೂರೈಸುವ ರೈತರಿಗೆ ಕೊಡಬೇಕಾದ ಸುಮಾರು 9 ಲಕ್ಷ ರೂ. ಹಣವನ್ನು ಅಂಗಡಿಯ ಡ್ರಾವರ್‌ನಲ್ಲಿ ಇಟ್ಟು ಲಾಕ್‌ ಮಾಡಿ ಸಂಜೆ 6 ಗಂಟೆಗೆ ಬಾಗಿಲು ಮುಚ್ಚಿ ತೆರೆಳಿದ್ದರು.

ಚಿತ್ರದುರ್ಗ, ತುಮಕೂರು ಕಡೆಗಳಿಂದ ಹೂವಿನ ರೈತರು ಬರಲಿದ್ದರು. ಸುಮಾರು ಒಂದು ತಿಂಗಳಿನಿಂದ ಅವರಿಗಾಗಿ ನಗದನ್ನು ಇಟ್ಟುಕೊಂಡು ಕಾಯುತ್ತಿದ್ದೆ ಎಂದು ಉಮರಬ್ಬ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Mangalore Whole sale flower shop robbed, 9 lakhs cash stolen.