ಬೆಂಗಳೂರಿನಲ್ಲಿ ಖೋಟಾ ನೋಟು ಜಾಲ ಪತ್ತೆ ; 1.28 ಕೋಟಿ ರೂ. ನಕಲಿ ನೋಟು ವಶಕ್ಕೆ

06-01-23 08:47 pm       Bangalore Correspondent   ಕ್ರೈಂ

ತಮಿಳುನಾಡಿನಲ್ಲಿ ಭಾರತೀಯ ಕರೆನ್ಸಿಯ 2 ಸಾವಿರ ಮತ್ತು 500 ರೂ. ಮುಖಬೆಲೆಯ ಖೋಟಾ ನೋಟು ಮುದ್ರಣ ಮಾಡಿಕೊಂಡು ಚಲಾವಣೆ ಮಾಡಲು ತಮಿಳುನಾಡಿನ ಬಸ್‍ನಲ್ಲಿ ಆರೋಪಿಗಳು ಬೆಂಗಳೂರಿಗೆ ಬರುತ್ತಿದ್ದಾರೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.

ಬೆಂಗಳೂರು, ಜ.6: ಭಾರತೀಯ ಕರೆನ್ಸಿ 2 ಸಾವಿರ ಹಾಗೂ 500 ರೂ. ಮುಖಬೆಲೆಯ ಖೋಟಾ ನೋಟು ತಯಾರಿ ಮಾಡಿ ನಗರದಲ್ಲಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ ತಮಿಳು ನಾಡಿನ ಮೂವರು ಆರೋಪಿಗಳನ್ನು ಬಂಧಿಸಿ 1.28 ಕೋಟಿ ರೂ. ಖೋಟಾ ನೋಟುಗಳು ಮತ್ತು ನೋಟು ತಯಾರಿಸಲು ಉಪಯೋಗಿಸುತ್ತಿದ್ದ ಪ್ರಿಂಟರ್ ಹಾರ್ಡ್‍ಡಿಸ್ಕ್ ಮತ್ತು ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳು ನಾಡಿನ ಪಿಚ್ಚಿಮುತ್ತು(48), ನಲ್ಲಕಣಿ(53) ಮತ್ತು ಸುಬ್ರಮಣಿಯನ್(60) ಬಂಧಿತ ಆರೋಪಿಗಳು. ತಮಿಳುನಾಡಿನಲ್ಲಿ ಭಾರತೀಯ ಕರೆನ್ಸಿಯ 2 ಸಾವಿರ ಮತ್ತು 500 ರೂ. ಮುಖಬೆಲೆಯ ಖೋಟಾ ನೋಟು ಮುದ್ರಣ ಮಾಡಿಕೊಂಡು ಚಲಾವಣೆ ಮಾಡಲು ತಮಿಳುನಾಡಿನ ಬಸ್‍ನಲ್ಲಿ ಆರೋಪಿಗಳು ಬೆಂಗಳೂರಿಗೆ ಬರುತ್ತಿದ್ದಾರೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.

ತಕ್ಷಣ ಸಿಸಿಬಿ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಖೋಟಾ ನೋಟುಗಳನ್ನು ಸಾಗಿಸುತ್ತಿದ್ದ ಒಬ್ಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಈ ಜಾಲದ ಮತ್ತಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ವಶದಿಂದ 2 ಸಾವಿರ ರೂ. ಮುಖಬೆಲೆಯ 6203 ಭಾರತೀಯ ಖೋಟಾ ನೋಟುಗಳು (1,24,06,000 ರೂ.) ಹಾಗೂ 500 ರೂ. ಮುಖಬೆಲೆಯ 174 ಭಾರತೀಯ ಖೋಟಾ ನೋಟುಗಳು (87 ಸಾವಿರ ರೂ.) ಮತ್ತು ಬಿಳಿ ಬಣ್ಣದ ರೆಡ್ಮಿ-6 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Bengaluru CCB Police bust fake currency, seize 1.28 crores.