ಬ್ರೇಕಿಂಗ್ ನ್ಯೂಸ್

ಲೋಕಾಯುಕ್ತ ರಣಬೇಟೆ ; 40 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪುತ್ರ, 7.2 ಕೋಟಿ ರೂ. ಹಣ ಪತ್ತೆ

03-03-23 09:08 am       Bengaluru Correspondent   ಕ್ರೈಂ

ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ ಅಧ್ಯಕ್ಷರಾಗಿರುವ ಬಿಜೆಪಿ ಶಾಸಕ ಕೆ. ಮಾಡಾಳ್‌ ವಿರೂಪಾಕ್ಷಪ್ಪ ಪುತ್ರ ಕೆಎಎಸ್‌ ಅಧಿಕಾರಿ ಪ್ರಶಾಂತ್‌ ಮಾಡಾಳ್‌ 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗಲೇ ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮಂಗಳೂರು, ಮಾ.3: ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ ಅಧ್ಯಕ್ಷರಾಗಿರುವ ಬಿಜೆಪಿ ಶಾಸಕ ಕೆ. ಮಾಡಾಳ್‌ ವಿರೂಪಾಕ್ಷಪ್ಪ ಪುತ್ರ ಕೆಎಎಸ್‌ ಅಧಿಕಾರಿ ಪ್ರಶಾಂತ್‌ ಮಾಡಾಳ್‌ 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗಲೇ ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಎಸಿಬಿ ರದ್ದಾದ ಬಳಿಕ ಲೋಕಾಯುಕ್ತ ಪೊಲೀಸರು ನಡೆಸಿದ ಅತಿದೊಡ್ಡ ‘ಟ್ರ್ಯಾಪ್‌’ ಕಾರ್ಯಾಚರಣೆ ಇದಾಗಿದೆ. ಆಡಳಿತಾರೂಢ ಬಿಜೆಪಿ ಶಾಸಕರ ಪುತ್ರನ ಬಂಧನ ತೀವ್ರ ಸಂಚಲನ ಸೃಷ್ಟಿಸಿದೆ.

ಆರೋಪಿ ಪ್ರಶಾಂತ್‌ ಮಾಡಾಳ್‌ ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಪರಿಶೋಧಕರಾಗಿದ್ದಾರೆ. ‘ಕೆಎಸ್‌ಡಿಎಲ್‌’ಗೆ ಕಚ್ಚಾವಸ್ತು ಪೂರೈಕೆ ಟೆಂಡರ್‌ ನೀಡುವ ಸಂಬಂಧ ಗುತ್ತಿಗೆದಾರರೊಬ್ಬರಿಗೆ 80 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇರಿಸಲಾಗಿತ್ತು. ಈ ಪೈಕಿ 40 ಲಕ್ಷ ರೂ.ಗಳಿಗೆ ಒಪ್ಪಂದವಾಗಿತ್ತು. ಕ್ರೆಸೆಂಟ್‌ ರಸ್ತೆಯಲ್ಲಿರುವ ಶಾಸಕ ವಿರೂಪಾಕ್ಷಪ್ಪ ಅವರಿಗೆ ಸೇರಿದ ಕಚೇರಿಯಲ್ಲಿ ಗುರುವಾರ ಸಾಯಂಕಾಲ ಗುತ್ತಿಗೆದಾರರಿಂದ ಪ್ರಶಾಂತ್‌ 40 ಲಕ್ಷ ರೂ. ಲಂಚ ಸ್ಚೀಕರಿಸುವ ವೇಳೆ ಎಸ್ಪಿ ಕೆ.ವಿ ಅಶೋಕ್‌ ನೇತೃತ್ವದ ತಂಡ ಟ್ರ್ಯಾಪ್‌ ಮಾಡಿ ಬಂಧಿಸಿದೆ. ಕೆಎಸ್‌ಡಿಎಲ್‌ ಅಧ್ಯಕ್ಷರಾಗಿರುವ ತಮ್ಮ ತಂದೆಯ ಪರವಾಗಿ ಪ್ರಶಾಂತ್‌ ಲಂಚ ಸ್ವೀಕರಿಸಿದ್ದರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಟ್ರ್ಯಾಪ್‌ ನಡೆಸಿದ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ 2.2 ಕೋಟಿ ರೂ. ಅನಧಿಕೃತ ಹಣ ಪತ್ತೆಯಾಗಿದೆ. ಜತೆಗೆ, ಪ್ರಶಾಂತ್‌ ಅವರ ಬ್ಯಾಂಕ್‌ ಖಾತೆಗೆ ಗುರುವಾರ 94 ಲಕ್ಷ ರೂ. ಜಮಾವಣೆಯಾಗಿದ್ದು, ಈ ಹಣವನ್ನೂ ಜಪ್ತಿ ಮಾಡಲಾಗಿದೆ. ಆರೋಪಿಗೆ ಸೇರಿದ ಡಾಲರ್ಸ್‌ ಕಾಲೋನಿಯ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. 

94 ಲಕ್ಷ ರೂ.ಗಳನ್ನು ಬೇರೆಬೇರೆ ವ್ಯಕ್ತಿಗಳು ಆರೋಪಿತರ ಬ್ಯಾಂಕ್‌ ಖಾತೆಗೆ ಜಮಾವಣೆ ಮಾಡಿದ್ದಾರೆ. ಯಾವ ಉದ್ದೇಶಕ್ಕೆ ಹಣ ಸ್ವೀಕರಿಸಿದ್ದರು ಎಂಬುದನ್ನು ಪತ್ತೆ ಹಚ್ಚಲಾಗುವುದು. ಜತೆಗೆ, 2.2 ಕೋಟಿ ರೂ. ಹಣದ ಬಗ್ಗೆ ಇದುವರೆಗೂ ಸೂಕ್ತ ಮಾಹಿತಿ ದಾಖಲೆ ನೀಡಿಲ್ಲ. ಕಚೇರಿ ಬಳಕೆಯ ಉದ್ದೇಶ ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಆರೋಪಿ ಪ್ರಶಾಂತ್‌ ಅವರ ಮನೆ ಸೇರಿ ಇನ್ನಿತರೆ ಆಸ್ತಿಗಳ ಕುರಿತು ಮಾಹಿತಿ ಸಂಗ್ರಹಿಸಲಾಗುವುದು. ದಾಖಲೆಗಳ ಪರಿಶೀಲನೆ ವೇಳೆ ಅಕ್ರಮ ಆದಾಯ ಗಳಿಸಿರುವುದು ಕಂಡು ಬಂದರೆ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದೂ ಮೂಲಗಳು ತಿಳಿಸಿವೆ.

ಪುತ್ರನ ಬಂಧನದ ಬೆನ್ನಲ್ಲೇ ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೂ ತನಿಖೆ ಉರುಳು ಸುತ್ತಿಕೊಳ್ಳುವ ಸಾಧ್ಯತೆ. ಪ್ರಕರಣದ ಮೊದಲ ಆರೋಪಿಯನ್ನಾಗಿ ಪ್ರಶಾಂತ್‌ ಅವರನ್ನು ಪರಿಗಣಿಸಲಾಗಿದೆ. ಇನ್ನೂ ಹಲವರು ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ಆರೋಪಿ ನೇರವಾಗಿ ಲಂಚ ಕೇಳಿರುವುದಕ್ಕೆ ಪ್ರಬಲ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಅಷ್ಟೇ ಅಲ್ಲದೆ, ಯಾರ ಪ್ರಭಾವದಿಂದ ಲಂಚಕ್ಕೆ ಬೇಡಿಕೆ ಇರಿಸಲಾಗಿತ್ತು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ಅನುಮಾನ ಬಂದ ಆರೋಪಿಗಳಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.

ಪ್ರಶಾಂತ್ ಮಾಡಾಳ್, ಸಂಬಂಧಿ ಸಿದ್ದೇಶ್, ಅಕೌಂಟೆಂಟ್ ಸುರೇಂದ್ರ, ಹಣ ನೀಡಲು ಬಂದಿದ್ದ ನಿಕೋಲಸ್, ಗಂಗಾಧರ್ ಎನ್ನುವವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ ಕರೆದೊಯ್ದಿದ್ದು, ಇಂದು ಲೋಕಾಯುಕ್ತ ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರುಪಡಿಸಲಿದ್ದಾರೆ. ಇನ್ನಷ್ಟು ವಿಚಾರಣೆಗಾಗಿ ಐವರನ್ನು ತಮ್ಮ ವಶಕ್ಕೆ ನೀಡುವಂತೆ ಲೋಕಾಯುಕ್ತ ಪೊಲೀಸರು ನ್ಯಾಯಾಲಕ್ಕೆ ಮನವಿ ಮಾಡುವ ಸಾಧ್ಯತೆಗಳಿವೆ.

ಬೆಂಬಲಿಗರ ವಿರೋಧ:

ಮಾಡಾಳು ವಿರೂಪಾಕ್ಷ ಮನೆ ಮುಂದೆ ನಿನ್ನೆ ಲೋಕಾಯಕ್ತ ದಾಳಿ ನಡೆಯುತ್ತಿದ್ದಂತೆ ಅವರ ಬೆಂಬಲಿಗರು ಆಗಮಿಸಿ ಪ್ರತಿಭಟನೆ ಮಾಡಿ ಭಾರೀ ಹೈಡ್ರಾಮವೇ ನಡೆದಿದೆ. ಮಾಧ್ಯಮ ಪ್ರತಿನಿಧಿಗಳು ಮನೆ ಮುಂದೆ ಚಿತ್ರೀಕರಣ ಮಾಡುತ್ತಿದ್ದಾಗ ಬೆಂಬಲಿಗರು ಪ್ರತಿಭಟಿಸಿ ವಾಗ್ವಾದ ನಡೆಯಿತು.ಲೋಕಾಯುಕ್ತ ದಾಳಿ ನಡೆಯುತ್ತಿದ್ದಂತೆ ಶಾಸಕರು ತಮ್ಮ ಇನ್ನೊಬ್ಬ ಪುತ್ರ ಮಲ್ಲಿಕಾರ್ಜುನ ಜೊತೆ ಬೆಂಗಳೂರಿಗೆ ತೆರಳಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆ ತಾಲ್ಲೂಕು ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಬಿಜೆಪಿ ಸರ್ಕಾರ ಮತ್ತು ವಿರೂಪಾಕ್ಷಪ್ಪ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ತಾಲ್ಲೂಕು ತಹಸಿಲ್ದಾರ್ ಮೂಲಕ ರಾಜ್ಯಪಾಲರಿಗೆ ಕೈ ನಾಯಕರು ಮನವಿ ಮಾಡಲಿದ್ದಾರೆ. 

Lokayukta sleuths on Thursday trapped the chief accountant of Bangalore Water Supply and Sewerage Board (BWSSB) while he was allegedly receiving bribe of ₹40 lakh on behalf of his father who is an MLA and also chairman of Karnataka Soaps and Detergents Ltd. (KSDL). The accused Prashanth, a KAS officer and son of BJP MLA Madal Virupakshappa from Channagiri constituency, Davangere district, had allegedly demanded ₹81 lakh on behalf of his father to grant a tender to procure raw material for KSDL. Prashanth was caught while he was receiving ₹40 lakh cash, which were brought in many bags, officials said.