ಕಳವಾದ ಬೈಕಿನ ಸುಳಿವು ಕೊಟ್ಟ ಸೋನು! ಉಳ್ಳಾಲ, ಮಂಗಳೂರಲ್ಲಿ ಕರಾಮತ್ತು ತೋರಿದ ಬೈಕ್ ಕಳ್ಳರ ಬಂಧನದಲ್ಲಿ ಕಾರಣಿಕ ಮೆರೆದ ಕೊರಗಜ್ಜ ! 

30-03-23 08:44 pm       Mangalore Correspondent   ಕ್ರೈಂ

ತೊಕ್ಕೊಟ್ಟು, ಕೋಟೆಕಾರಿನ‌ ಕೊರಗಜ್ಜನ‌ ಕಟ್ಟೆ ಮತ್ತು ಮಂಗಳೂರಿನಲ್ಲಿ ಸರಣಿ ಬೈಕ್ ಕಳ್ಳತನ ನಡೆಸಿ ಕರಾಮತ್ತು ತೋರಿದ ಮೂವರು ಕಳ್ಳರನ್ನ ವ್ಯಕ್ತಿಯೋರ್ವರು ನೀಡಿದ ಸುಳಿವಿನ‌ ಆಧಾರದಲ್ಲಿ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.

ಉಳ್ಳಾಲ, ಮಾ.30 : ತೊಕ್ಕೊಟ್ಟು, ಕೋಟೆಕಾರಿನ‌ ಕೊರಗಜ್ಜನ‌ ಕಟ್ಟೆ ಮತ್ತು ಮಂಗಳೂರಿನಲ್ಲಿ ಸರಣಿ ಬೈಕ್ ಕಳ್ಳತನ ನಡೆಸಿ ಕರಾಮತ್ತು ತೋರಿದ ಮೂವರು ಕಳ್ಳರನ್ನ ವ್ಯಕ್ತಿಯೋರ್ವರು ನೀಡಿದ ಸುಳಿವಿನ‌ ಆಧಾರದಲ್ಲಿ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.

ಕಳೆದ ಮಂಗಳವಾರ ಮುಂಜಾನೆ ನಸುಕಿನ ವೇಳೆ ಕೋಟೆಕಾರಿನ ಸಾರ್ವಜನಿಕ ಕೊರಗಜ್ಜನ ಕಟ್ಟೆಯ ಬಳಿಯಲ್ಲಿ ಸ್ಥಳೀಯ ವಿನಾಯಕ ಇಲೆಕ್ಟ್ರಿಕಲ್ಸ್ ನ ಡಿಜೆ ಪ್ಲೇಯರ್ ರಾಜ್ ಯಾನೆ ರಾಜೇಶ್ ಎಂಬವರು ಒಳ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕನ್ನ ಇಬ್ಬರು ಕಳವುಗೈದಿದ್ದು ,ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಅದೇ ದಿನ ನಸುಕಿನ ವೇಳೆ ತೊಕ್ಕೊಟ್ಟಿನ ಕಾಂಗ್ರೆಸ್ ಕಚೇರಿ ಮುಂಭಾಗದ ಕೊರಗಜ್ಜನ ಕಟ್ಟೆಯ ಬಳಿ ನಿಲ್ಲಿಸಲಾಗಿದ್ದ ಬೈಕನ್ನೂ ಕಳ್ಳರು ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿತ್ತು. ಇಷ್ಟಲ್ಲದೆ ಮಂಗಳೂರಿನ‌‌ ಕೆಲವೆಡೆ ಕಳ್ಳರು ಬೈಕ್ ಗಳನ್ನ ಕದ್ದಿದ್ದರು.

ರಫೀಕನಿಗೆ ಬೈಕಿನ ಸುಳಿವು ಕೊಟ್ಟ ಸೋನು! 

ಕೋಟೆಕಾರಲ್ಲಿ ಕಳವಾದ ಬೈಕ್ ಮಾಲಕ ರಾಜೇಶ್ ಅವರ ಮಿತ್ರ ರಫೀಕ್ ಅವರಿಗೆ ಗುರುವಾರ ಬೆಳಗ್ಗೆ ಮಂಗಳೂರಿನ ಮಿನಿ ವಿಧಾನಸೌಧ ಬಳಿ ಕಳವಾದ ಬೈಕ್ ಕಾಣಸಿಕ್ಕಿದೆ. ರೈಲ್ವೆ ಸ್ಟೇಷನ್ ದಾರಿಯ ಅಂಗಡಿ ಎದುರು ನಿಲ್ಲಿಸಿದ್ದ ಬೈಕಿನ ನಂಬರ್ ಪ್ಲೇಟನ್ನ ಕಿತ್ತೆಸೆಯಲಾಗಿದ್ದು ಬೈಕ್ ನಲ್ಲಿ ಅಂಟಿಸಿದ್ದ ಸೋನು ಸ್ಟಿಕ್ಕರನ್ನ ಹಾಗೇ ಬಿಟ್ಟಿದ್ದರು. ಇದು ರಾಜೇಶ್ ಅವರ ಬೈಕ್ ಎಂದು ಖಾತರಿ ಪಡಿಸಿದ ರಫೀಕ್ ಅಂಗಡಿ ಎದುರಲ್ಲಿದ್ದ ಹುಡುಗರಲ್ಲಿ ಬೈಕ್ ಎಲ್ಲಿಂದ ಸಿಕ್ತು ಎಂದಾಗ ಗಲಿಬಿಲಿಗೊಂಡ ಹುಡುಗರು ಪಲಾಯನಗೈದಿದ್ದಾರೆ. ತಕ್ಷಣ ರಫೀಕ್ ಅವರು ಸ್ಥಳದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಯಲ್ಲಿ ವಿಚಾರ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಸಬಾ ಬೆಂಗ್ರೆ ಮತ್ತು ಪಡುಬಿದ್ರೆ ಮೂಲದ ಮೂವರು ಖದೀಮರನ್ನ ಬಂಧಿಸಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಸರಣಿ ಬೈಕ್ ಕಳ್ಳತನದಲ್ಲಿ ಇನ್ನಷ್ಟು ಆರೋಪಿಗಳು ಶಾಮೀಲಾಗಿರುವ ಸಾಧ್ಯತೆಗಳಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕಾರಣಿಕ ಮೆರೆದ ಕೊರಗಜ್ಜ 

ಕೋಟೆಕಾರು ಮತ್ತು ತೊಕ್ಕೊಟ್ಟಲ್ಲಿ ಕೊರಗಜ್ಜ ದೈವದ ಕಟ್ಟೆಯ ಬಳಿಯೇ ನಿಲ್ಲಿಸಲಾಗಿದ್ದ ಬೈಕ್ ಗಳನ್ನ ಖದೀಮರು ರಾಜಾರೋಷವಾಗಿ ಕದ್ದೊಯ್ದಿದ್ದರು. ಇದರಿಂದ ಬೈಕ್ ಮಾಲೀಕರಲ್ಲದೆ ಸ್ಥಳೀಯರು ಬೇಸರಗೊಂಡಿದ್ದು ನಿನ್ನೆ ಕೋಟೆಕಾರಿನ ಕೊರಗಜ್ಜನ ಕಟ್ಟೆಯಲ್ಲಿ ಶೀಘ್ರವೇ ಕಳ್ಳರ ಬಂಧನವಾಗುವಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು. ಸ್ವಾಮಿ ಕೊರಗಜ್ಜನ ಕಾರಣೀಕದಿಂದಲೇ ಕಳ್ಳರ ಬಂಧನ ಸಾಧ್ಯವಾಗಿದೆ ಎಂದು ವಿನಾಯಕ ಇಲೆಕ್ಟ್ರಿಕಲ್ಸ್ ಮಾಲಕರಾದ ರಾಜೇಶ್ ಪೂಜಾರಿ ಹೇಳಿದ್ದಾರೆ.

Mangalore Kotekar Bike robbery, three arrested by Ullal police. A video of bike robbery had gone viral on social media. Same day two bikes were robbed.