ಆಸ್ತಿಗಾಗಿ ತಂದೆಯನ್ನೇ ಕೊಲ್ಲಿಸಿದ ಏಕೈಕ ಮಗ ; ಹಾಗೇ ಬಿಡುತ್ತಿದ್ದರೆ ಇನ್ನೂ 20 ವರ್ಷ ಬದುಕಿರುತ್ತಿದ್ದರು, ಅದಕ್ಕಾಗಿ ಕೊಲ್ಲಿಸಿದೆ ಎಂದ ಪಾಪಿ  

22-05-23 09:57 pm       Bangalore Correspondent   ಕ್ರೈಂ

ಯುವಕನೊಬ್ಬ ತನ್ನ ತಂದೆಯನ್ನೇ ಹಣ ಮತ್ತು ಆಸ್ತಿಗಾಗಿ ರೌಡಿಗಳ ತಂಡಕ್ಕೆ ಸುಪಾರಿ ಕೊಟ್ಟು ಕೊಲ್ಲಿಸಿದ ಘಟನೆ ಮಾರತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು, ಮೇ 22: ಯುವಕನೊಬ್ಬ ತನ್ನ ತಂದೆಯನ್ನೇ ಹಣ ಮತ್ತು ಆಸ್ತಿಗಾಗಿ ರೌಡಿಗಳ ತಂಡಕ್ಕೆ ಸುಪಾರಿ ಕೊಟ್ಟು ಕೊಲ್ಲಿಸಿದ ಘಟನೆ ಮಾರತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾರಾಯಣಸ್ವಾಮಿ ಫೆ.13ರಂದು ಕೊಲೆಯಾಗಿದ್ದು, ಪುತ್ರ ಮಣಿಕಂಠನನ್ನು ಈಗ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಶಾಕಿಂಗ್ ವಿಚಾರವನ್ನು ಮಣಿಕಂಠ ಹೇಳಿದ್ದು, ತಂದೆ ಆರೋಗ್ಯದಲ್ಲಿದ್ದರು. ತನಗೆ ಬೇಕಾದಷ್ಟು ಹಣ ಕೊಡುತ್ತಿರಲಿಲ್ಲ. ಹಾಗೇ ಬಿಡುತ್ತಿದ್ದರೆ ಇನ್ನೂ 20 ವರ್ಷ ಬದುಕಿರುತ್ತಿದ್ದರು. ಒಬ್ಬನೇ ಪುತ್ರನಾಗಿದ್ದರೂ, ಸಾಕಷ್ಟು ಆಸ್ತಿ ಇದ್ದರೂ ಯುವಕನಿದ್ದಾಗ ನನಗೆ ಅನುಭವಿಸಲು ಬಿಡುತ್ತಿರಲಿಲ್ಲ. ಹೀಗಾಗಿ ತಂದೆಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದೆ ಎಂದು ಹೇಳಿಕೆ ನೀಡಿದ್ದಾನೆ.

ಮಣಿಕಂಠ ತನ್ನ ಮೊದಲ ಪತ್ನಿಯನ್ನು ಕೊಂದ ಪ್ರಕರಣದಲ್ಲಿ ಜೈಲು ಸೇರಿದ್ದ. ಈ ವೇಳೆ, ಜೈಲಿನಲ್ಲಿ ನಟೋರಿಯಸ್ ಗ್ಯಾಂಗ್ ನಡುವಟ್ಟಿ ಶಿವು ತಂಡದವರು ಪರಿಚಯ ಆಗಿದ್ದರು. ತನ್ನ ತಂದೆಯ ಆಸ್ತಿ ಬಗ್ಗೆ ಹೇಳಿಕೊಂಡಿದ್ದ ಮಣಿಕಂಠ, ತಂದೆಯನ್ನು ಕೊಲ್ಲಲು ಸಂಚು ರೂಪಿಸಿದ್ದನ್ನು ರೌಡಿಗಳಿಗೆ ಹೇಳಿದ್ದ. ಅದನ್ನು ಕಾರ್ಯಗತ ಮಾಡಲು ಒಪ್ಪಿದ್ದ ರೌಡಿಗಳ ತಂಡ ಅದಕ್ಕಾಗಿ ಸುಪಾರಿ ನೀಡುವಂತೆ ಹೇಳಿದ್ದ.

ಅದರಂತೆ, ಜೈಲಿನಿಂದ ಹೊರಬಂದಿದ್ದ ಮಣಿಕಂಠ, ಗ್ಯಾಂಗ್ ಸದಸ್ಯ ಚಿಟ್ಟಿ ಬಾಬು ಎಂಬವನಿಗೆ ತನ್ನ ತಂದೆಯ ಕೊಲ್ಲಲು ಸುಪಾರಿ ಕೊಟ್ಟಿದ್ದ. ಕೊಂದ ನಂತರ ನಡುವಟ್ಟಿ ಶಿವು ತಂಡದ ಸದಸ್ಯರು ತಾವೇ ಮಾಡಿದ್ದಾಗಿ ಹೇಳಿ ಪೊಲೀಸರಿಗೆ ಶರಣಾಗುವುದೆಂದು ಒಪ್ಪಂದ ಆಗಿತ್ತು. ಆದರೆ ನಾರಾಯಣಸ್ವಾಮಿ ಕೊಲೆಯ ಸಂದರ್ಭದಲ್ಲಿ ಕೆಲವು ಸುಳಿವುಗಳನ್ನು ಪಡೆದಿದ್ದ ಪೊಲೀಸರು ಚಿಟ್ಟಿ ಬಾಬುವನ್ನು ಅರೆಸ್ಟ್ ಮಾಡಿದ್ದರು. ವಿಚಾರಣೆ ವೇಳೆ ಚಿಟ್ಟಿ ಬಾಬು ಕೊಲೆ ಕೃತ್ಯದ ಹಿಂದಿನ ಕಾರಣ ಮತ್ತು ಮಣಿಕಂಠನ ಸುಪಾರಿ ವಿಚಾರವನ್ನು ಹೇಳಿದ್ದ.

ಪೊಲೀಸರು ಮಣಿಕಂಠನನ್ನು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಈ ವೇಳೆ, ಒಬ್ಬನೇ ಪುತ್ರನಾಗಿದ್ದು ಎಲ್ಲ ಆಸ್ತಿಯೂ ನಿನಗೇ ಆಗಿರುವಾಗ ಯಾಕಾಗಿ ತಂದೆಯನ್ನು ಕೊಲೆ ಮಾಡಿದೆ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ತಂದೆ ತನಗೆ ಆಸ್ತಿ ಪಾಲು ಕೊಟ್ಟಿರಲಿಲ್ಲ. ಹಣ ಕೇಳುವಾಗಲೂ ಕೊಡುತ್ತಿರಲಿಲ್ಲ. ಇವರು ಹಾಗೇ ಇರುತ್ತಿದ್ದರೆ, ಇನ್ನೂ 20 ವರ್ಷ ಬದುಕಿರುತ್ತಿದ್ದರು. ಅಷ್ಟರಲ್ಲಿ ನನಗೂ ವಯಸ್ಸು ಮೀರುತ್ತಿತ್ತು. ಯುವಕನಾಗಿದ್ದಾಗ ಆಸ್ತಿ ಅನುಭವಿಸಲು ಸಾಧ್ಯವಾಗಲ್ಲ ಎಂದು ಈ ನಿರ್ಧಾರ ಕೈಗೊಂಡೆ ಎಂದು ಹೇಳಿಕೆ ನೀಡಿದ್ದಾನೆ.

In a shocking revelation, a man accused of his father's murder has told Karnataka police that he got latter killed as he was healthy and could have lived for 20 more years, due to which the former could have enjoyed the property only when he gets old.