Murder case in Kolar, Student: ಕೋಲಾರ ; ಶಾಲೆ ಆವರಣದಲ್ಲೇ 17 ವರ್ಷದ ಪಿಯುಸಿ ವಿದ್ಯಾರ್ಥಿ ಬರ್ಬರ ಕೊಲೆ, ಸ್ನೇಹಿತರಿಂದಲೇ ಕೃತ್ಯ, ಪೊಲೀಸ್ ಅಧಿಕಾರಿ ಪುತ್ರನ ಶಾಮೀಲು ! 

04-11-23 07:47 pm       HK News Desk   ಕ್ರೈಂ

ಕೋಲಾರ ನಗರದ ಪೇಟೆಚಾಮನಹಳ್ಳಿ ಬಡಾವಣೆಯ ಸರ್ಕಾರಿ ಶಾಲೆಯ ಆವರಣದಲ್ಲಿ 17 ವರ್ಷದ ಪಿಯುಸಿ ವಿದ್ಯಾರ್ಥಿಯನ್ನು ಸ್ನೇಹಿತರೇ ಸೇರಿ ಬರ್ಬರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಕೋಲಾರ, ನ.4 : ಕೋಲಾರ ನಗರದ ಪೇಟೆಚಾಮನಹಳ್ಳಿ ಬಡಾವಣೆಯ ಸರ್ಕಾರಿ ಶಾಲೆಯ ಆವರಣದಲ್ಲಿ 17 ವರ್ಷದ ಪಿಯುಸಿ ವಿದ್ಯಾರ್ಥಿಯನ್ನು ಸ್ನೇಹಿತರೇ ಸೇರಿ ಬರ್ಬರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಪುತ್ರ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು ಈ ಕುರಿತ ಹಳೆ ವಿಡಿಯೋ ವೈರಲ್ ಆಗಿದೆ. 

ಕಾರ್ತಿಕ್ ಸಿಂಗ್(17) ಕೊಲೆಯಾದ ಬಾಲಕ. ಪ್ರಥಮ‌ ಪಿಯುಸಿ ಓದುತ್ತಿದ್ದ ಕಾರ್ತಿಕ್ ನನ್ನು ಅದೇ ವಯಸ್ಸಿನ ಯುವಕರ ಗುಂಪು ಹರಿತ ಆಯುಧಗಳಿಂದ ಹೊಡೆದು ಕೊಲೆ‌‌ ಮಾಡಿದ್ದಾರೆ. ಕೋಲಾರ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೋಲಾರದ ಎಸ್​.ಡಿ.ಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಕಾರ್ತಿಕ್​, ನ.3ರಂದು ಬೆಳಗ್ಗೆಯಿಂದ ಹೊಟ್ಟೆ ನೋವೆಂದು ಕಾಲೇಜಿಗೆ ಹೋಗದೆ ಮನೆಯಲ್ಲೇ ಇದ್ದನಂತೆ. ಸಂಜೆ ವೇಳೆ ಯಾರೋ ಸ್ನೇಹಿತರು ಕರೆ ಮಾಡಿ ಬರಲು ಹೇಳಿದ್ದಾರೆ. 5.30ರ ವೇಳೆಗೆ ಕಾರ್ತಿಕ್​ ಮನೆಯಿಂದ ಹೊರ ಹೋಗಿದ್ದು ಬಳಿಕ ಆತನ ಮೊಬೈಲ್​ ಸ್ವಿಚ್​ ಆಫ್​ ಆಗಿತ್ತು. ರಾತ್ರಿ 9 ಗಂಟೆಗೆ ಕರೆ ಮಾಡಿದ ವ್ಯಕ್ತಿಯೊಬ್ಬರು, ನಿಮ್ಮ ಮಗನನ್ನು ಹೊಡೆದು ಕೊಲೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಕೂಡಲೇ ಶಾಲೆ ಬಳಿ ಬಂದ ಕುಟುಂಬಸ್ಥರು ಕಾರ್ತಿಕ್​ ಕೊಲೆಯಾಗಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. 

ಈ ಹಿಂದೆ ಪಿ.ಸಿ. ಬಡಾವಣೆ ಹಾಗೂ ಆರೋಹಳ್ಳಿ ಏರಿಯಾದ ಹುಡುಗರ ಗ್ಯಾಂಗ್​​ನೊಂದಿಗೆ ಸ್ನೇಹ ಮಾಡಿದ್ದ ಕಾರ್ತಿಕ್,​ ಇತ್ತೀಚೆಗೆ ಅದೇ ಗ್ಯಾಂಗ್ ಹುಡುಗರ ಜೊತೆ ಗಲಾಟೆಯಾಗಿ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿತ್ತು. ಎಂಟು ತಿಂಗಳ ಹಿಂದೆ ಬರ್ತ್​ಡೇ ಪಾರ್ಟಿಗೆ ಹೋಗಿಲ್ಲ ಎಂದು ಕಾರ್ತಿಕ್​ ಬಟ್ಟೆ ಬಿಚ್ಚಿ ಥಳಿಸಿದ್ದ ವಿಡಿಯೋ ಕೂಡ ವೈರಲ್​ ಆಗಿತ್ತು. ಇದೇ ಹುಡುಗರು ಕಾರ್ತಿಕ್​ ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು ಇದೇ ವೇಳೆ ಹುಡುಗನಿಗೆ ಚಿತ್ರಹಿಂಸೆ ನೀಡಿದ್ದ ವಿಡಿಯೋವೊಂದು ವೈರಲ್ ಆಗಿದೆ. 

ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾಗುತ್ತಿರುವ ದಿಲೀಪ್ ಅಲಿಯಾಸ್ ಶೈನ್ ಎಂಬಾತ ಪೊಲೀಸ್ ಅಧಿಕಾರಿಯೊಬ್ಬರ ಪುತ್ರನೆಂದು ಹೇಳಲಾಗುತ್ತಿದೆ. ಈ ಹಿಂದೆ ಕಾರ್ತಿಕ್ ಮೇಲೆ ಚಿತ್ರಹಿಂಸೆ ನೀಡಿದ್ದ ವಿಡಿಯೋದಲ್ಲಿ ದಿಲೀಪ್ ಇದ್ದಾನೆ. ಹೀಗಾಗಿ ಪೊಲೀಸರೇ ಒಟ್ಟು ಪ್ರಕರಣವನ್ನು ಮುಚ್ಚಿ ಹಾಕುತ್ತಾರೆಯೇ, ಕ್ರಮ ಕೈಗೊಳ್ಳುತ್ತಾರೆಯೇ ಎಂಬ ಚರ್ಚೆ ಸ್ಥಳೀಯರಲ್ಲಿದೆ. ಸ್ಥಳೀಯರ ಪ್ರಕಾರ, ಆರು ಮಂದಿ ಒಂದೇ ವಯಸ್ಸಿನ ಹುಡುಗರು ಸೇರಿ ನಡು ಬೀದಿಯಲ್ಲಿ ಕಾರ್ತಿಕನ್ನು ಹೊಡೆದು ಹಾಕಿದ್ದರು. ಶುಕ್ರವಾರ ರಾತ್ರಿ ಶಾಲೆ ಆವರಣದಲ್ಲಿಯೇ ಕೃತ್ಯ ನಡೆದಿದ್ದು ಹಳೆ ದ್ವೇಷದಿಂದಲೇ ಕೃತ್ಯ ಎಸಗಿದ್ದಾರೆ ಎನ್ನುವ ಮಾಹಿತಿಗಳಿವೆ.

A day after the murder of Congress leader Srinivas in Srinivasapura, the district is once again bleeding. A 17-year-old boy was brutally murdered in the premises of a government school in Petchamanahalli layout in the city.