Mangalore Royal Travancore fraud, pigmy: ರಾಯಲ್ ಟ್ರಾವಂಕೂರ್ ಸಂಸ್ಥೆ ಹೆಸರಲ್ಲಿ ವಂಚನೆ ಆರೋಪ ; ಪಿಗ್ಮಿ ಠೇವಣಿದಾರರಿಂದ ಪೊಲೀಸ್ ಆಯುಕ್ತರಿಗೆ ದೂರು

06-12-23 10:42 pm       Mangalore Correspondent   ಕ್ರೈಂ

ರಾಯಲ್ ಟ್ರಾವಂಕೂರ್ ಹೆಸರಿನ ಹಣಕಾಸು ಸಂಸ್ಥೆಯಲ್ಲಿ ಠೇವಣಿದಾರರಿಗೆ ವಂಚನೆ ಆಗಿದೆ ಎಂಬ ಆರೋಪ ಕೇಳಿಬಂದಿದ್ದು, ಹಣ ಕಳಕೊಂಡ ಗ್ರಾಹಕರು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಮಂಗಳೂರು, ಡಿ.6: ರಾಯಲ್ ಟ್ರಾವಂಕೂರ್ ಹೆಸರಿನ ಹಣಕಾಸು ಸಂಸ್ಥೆಯಲ್ಲಿ ಠೇವಣಿದಾರರಿಗೆ ವಂಚನೆ ಆಗಿದೆ ಎಂಬ ಆರೋಪ ಕೇಳಿಬಂದಿದ್ದು, ಹಣ ಕಳಕೊಂಡ ಗ್ರಾಹಕರು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಮಂಗಳೂರು ನಗರದ ಪಿವಿಎಸ್ ವೃತ್ತದಲ್ಲಿ ರಾಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಹೆಸರಿನ ಹಣಕಾಸು ಸಂಸ್ಥೆಯಿದ್ದು, ಸೊಸೈಟಿ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಸರಿಯಾಗಿ ಒಂದು ವರ್ಷದ ಹಿಂದೆ ಮಂಗಳೂರಿನಲ್ಲಿ ಹೊಸ ಕಚೇರಿ ಆರಂಭಗೊಂಡಿತ್ತು. ಮಂಗಳೂರಿನಲ್ಲಿ ಪ್ರತಿ ದಿನ ಪಿಗ್ಮಿ ಕಲೆಕ್ಷನ್ ಆಗುತ್ತಿದ್ದರಿಂದ ಹೆಚ್ಚಾಗಿ ಅಂಗಡಿ, ವ್ಯಾಪಾರಸ್ಥರೇ ಇದರ ಗ್ರಾಹಕರಾಗಿದ್ದರು.

ಹಂಪನಕಟ್ಟೆಯ ದುಬೈ ಮಾರ್ಕೆಟ್ ನಲ್ಲಿ ಮೊಬೈಲ್ ಅಂಗಡಿ ಹೊಂದಿರುವ ಅಬ್ದುಲ್ ಅಜೀಜ್ ಎಂಬವರು 70 ಸಾವಿರ ಕಳಕೊಂಡಿದ್ದು, ಆಯುಕ್ತರಿಗೆ ದೂರು ನೀಡಲು ಹೋದವರಲ್ಲಿ ಒಬ್ಬರು. ಅವರು ಹೇಳುವ ಪ್ರಕಾರ, ಹಂಪನಕಟ್ಟೆಯಲ್ಲೇ 100ಕ್ಕೂ ಹೆಚ್ಚು ಗ್ರಾಹಕರಿದ್ದು, ದಿನವೂ ಒಂದಷ್ಟು ದುಡ್ಡು ಉಳಿತಾಯ ಆಗಲಿ ಎಂದು ಪಿಗ್ಮಿ ಕಟ್ಟುತ್ತಿದ್ದರು. ಆದರೆ ವಾರದ ಹಿಂದೆ ಕಲೆಕ್ಷನ್ ಆದ ಮೊತ್ತದಲ್ಲಿ ಹಣವನ್ನು ತೆಗೆಯೋಣ ಎಂದಾಗ, ಸಂಸ್ಥೆಯಲ್ಲಿ ಹಣ ಇಲ್ಲ ಎಂಬ ಮಾಹಿತಿ ಬಂದಿತ್ತು. ಪಿವಿಎಸ್ ನಲ್ಲಿರುವ ಕಚೇರಿಗೆ ತೆರಳಿ ನೋಡಿದಾಗ, ಮೇಲಿನಿಂದಲೇ ಹಣ ಇಲ್ಲ ಎಂದು ಸೂಚನೆ ಬಂದಿದೆ ಎನ್ನುವ ಮಾಹಿತಿಯನ್ನು ಸಿಬಂದಿ ನೀಡಿದ್ದಾರಂತೆ.

ಹೆಚ್ಚಿನ ಮಂದಿಗೆ ಸಂಸ್ಥೆಯಲ್ಲಿ ಸಮಸ್ಯೆ ಆಗಿರುವ ಮಾಹಿತಿ ಇಲ್ಲ. ಹೀಗಾಗಿ ಪೊಲೀಸ್ ದೂರು ನೀಡಲು ಬಂದಿಲ್ಲ. ಹಲವಾರು ಮಂದಿ 40-50 ಸಾವಿರ ಅಂತ ಹಣ ಕಳಕೊಂಡಿದ್ದಾರೆ ಎಂದು ಅಬ್ದುಲ್ ಅಜೀಜ್ ತಿಳಿಸಿದ್ದಾರೆ. ರಾಯಲ್ ಟ್ರಾವಂಕೂರ್ ಹಣಕಾಸು ಸಂಸ್ಥೆ 2021ರಲ್ಲಿ ಆರಂಭಗೊಂಡಿದ್ದು ಕೇರಳದ ಕಣ್ಣೂರಿನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಕಾಸರಗೋಡು, ಕಣ್ಣೂರು ಸೇರಿದಂತೆ ಉತ್ತರ ಕೇರಳದ ಹಲವು ಕಡೆಗಳಲ್ಲಿ ಶಾಖಾ ಕಚೇರಿಯಿದ್ದು, ಕರ್ನಾಟಕದ ಮಂಗಳೂರು ಮತ್ತು ತೊಕ್ಕೊಟ್ಟಿನಲ್ಲಿ ಕಳೆದ ವರ್ಷ ಕಚೇರಿ ಆರಂಭಿಸಿತ್ತು. ರಾಹುಲ್ ಚಕ್ರಪಾಣಿ ಎಂಬವರು ಸಂಸ್ಥೆಯ ಎಂಡಿ ಆಗಿದ್ದಾರೆ.

Mangalore Royal Travancore fraud to pigmy, case filed to Police Commissioner. Hundreds have been cheated in the name of collecting Pigmy. Crores of amount has been duped.