ಇಲೆಕ್ಟ್ರಿಕ್ ಸ್ಕೂಟರ್‌ ಡೆಲಿವರಿ ಆಗಿಲ್ಲವೆಂದು ಆನ್ಲೈನ್ ದೂರು ; ವ್ಯಕ್ತಿಯ ಖಾತೆಯಿಂದಲೇ ಎರಡು ಲಕ್ಷ ಖೋತಾ 

21-01-24 07:12 pm       Udupi Correspondent   ಕ್ರೈಂ

ಇಲೆಕ್ಟ್ರಿಕ್ ಸ್ಕೂಟರ್‌ ಬುಕ್ ಮಾಡಿದ್ದರೂ ಡೆಲಿವರಿ ಆಗಿಲ್ಲ ಎಂದು ಕಂಪೆನಿಯ ವಿರುದ್ಧ ಆನ್ಲೈನ್ ದೂರು ನೀಡಲು ಹೋದ ವ್ಯಕ್ತಿಯೊಬ್ಬರು ತನ್ನ ಬ್ಯಾಂಕ್‌ ಖಾತೆಯಿಂದಲೇ ಲಕ್ಷಾಂತರ ರೂಪಾಯಿ ಹಣ‌ ಕಳಕೊಂಡ ಪ್ರಸಂಗ ನಡೆದಿದೆ. 

ಉಡುಪಿ, ಜ.21: ಇಲೆಕ್ಟ್ರಿಕ್ ಸ್ಕೂಟರ್‌ ಬುಕ್ ಮಾಡಿದ್ದರೂ ಡೆಲಿವರಿ ಆಗಿಲ್ಲ ಎಂದು ಕಂಪೆನಿಯ ವಿರುದ್ಧ ಆನ್ಲೈನ್ ದೂರು ನೀಡಲು ಹೋದ ವ್ಯಕ್ತಿಯೊಬ್ಬರು ತನ್ನ ಬ್ಯಾಂಕ್‌ ಖಾತೆಯಿಂದಲೇ ಲಕ್ಷಾಂತರ ರೂಪಾಯಿ ಹಣ‌ ಕಳಕೊಂಡ ಪ್ರಸಂಗ ನಡೆದಿದೆ. 

ಉಡುಪಿ ಸಂತೆಕಟ್ಟೆಯ ರವಿರಾಜ್‌ ಎಂಬವರು ಇಲೆಕ್ಟ್ರಿಕ್‌ ವಾಹನ ಖರೀದಿಸಲು ಬುಕ್ಕಿಂಗ್ ಮಾಡಿಸಿದ್ದರು. ಆದರೆ ಸ್ಕೂಟರ್ ಪೂರೈಕೆಯಾಗದ ಸಿಟ್ಟಿನಲ್ಲಿ ಕಂಪೆನಿಯ ವಿರುದ್ಧ ದೂರು ನೀಡಲು ಜ.15ರಂದು ಗೂಗಲ್‌ ಸರ್ಚ್‌ ಮಾಡಿದ್ದರು. ಅದರಲ್ಲಿ ವೆಬ್‌ಸೈಟ್‌ ಬಗ್ಗೆ ಮಾಹಿತಿ ಬಂದಿದ್ದರಿಂದ ಅದನ್ನು ಅನುಸರಿಸಿದ್ದರು. 

ಅಲ್ಲಿ ವಿಷಯ ನಮೂದಿಸಿದ ಕೆಲವೇ ಕ್ಷಣಗಳಲ್ಲಿ ಮೆಸೇಜ್ ಬಂದಿತ್ತು. ನಿಮ್ಮ ದೂರನ್ನು ಸ್ವೀಕರಿಸಲಾಗಿದೆ. ವಾಟ್ಸ್‌ ಆ್ಯಪ್‌ನಲ್ಲಿ ಕಳುಹಿಸಿರುವ ಲಿಂಕ್‌ಗೆ ಮಾಹಿತಿಗಳನ್ನು ನಮೂದಿಸಿ ಎಂದು ಕರೆ ಮಾಡಿದ ವ್ಯಕ್ತಿ ತಿಳಿಸಿದ್ದರು. ಅದರಂತೆ ರವಿರಾಜ್‌ ತಾನು ಬುಕ್ಕಿಂಗ್ ಸಂದರ್ಭದಲ್ಲಿ ನೀಡಿದ್ದ ಹಣಕಾಸು ಸೇರಿದಂತೆ ಬ್ಯಾಂಕ್‌ ಮಾಹಿತಿ ಹಾಗೂ ಯುಪಿಐ ಸಂಖ್ಯೆಯನ್ನು ನಮೂದಿಸಿದ್ದರು. ಬಳಿಕ ಅವರ ಗಮನಕ್ಕೆ ಬರದಂತೆ ಬ್ಯಾಂಕ್‌ ಖಾತೆಯಿಂದ ಜ.20ರಂದು ಹಂತ ಹಂತವಾಗಿ 1,99,000 ರೂ. ಕಡಿತಗೊಂಡಿತ್ತು. ಅತ್ತ ಸ್ಕೂಟರ್‌ ಕೂಡ ಇಲ್ಲ, ಇತ್ತ ಬ್ಯಾಂಕ್‌ನಲ್ಲಿದ್ದ ಹಣವೂ ಇಲ್ಲ ಎಂಬ ಸ್ಥಿತಿ ಅವರದ್ದಾಗಿದೆ. ಈ ಬಗ್ಗೆ ಉಡುಪಿ ಸೆನ್‌ ಠಾಣೆಯಲ್ಲಿ ರವಿರಾಜ್ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

A man, who had gone to lodge an online complaint against an electric scooter for not being delivered despite booking it, lost lakhs of rupees from his bank account.