Delhi, Assistant Commissioner Son Killed: ಮದುವೆಗೆಂದು ಸ್ನೇಹಿತರ ಜತೆ ಹರ್ಯಾಣಕ್ಕೆ ತೆರಳಿದ್ದ ದಿಲ್ಲಿ ಪೊಲೀಸ್ ಅಧಿಕಾರಿಯ ಮಗ ; ಹಣಕಾಸಿನ ವಿಚಾರಕ್ಕೆ ಗಲಾಟೆ, ಸ್ವಂತ ಸ್ನೇಹಿತರಿಂದಲೇ ಕೊಲೆ, 16 ಅಡಿ ಆಳದ ಕಾಲುವೆಗೆ ತಳ್ಳಿ ಪರಾರಿ, ಇನ್ನೂ ಸಿಗದ ಬಾಡಿ

27-01-24 04:32 pm       HK News Desk   ಕ್ರೈಂ

ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹರ್ಯಾಣಕ್ಕೆ ತೆರಳಿದ್ದ ದಿಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮಗ ಶವವಾಗಿ ಪತ್ತೆಯಾಗಿದ್ದಾರೆ. ದಿಲ್ಲಿಯ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಯಶಪಾಲ್ ಚೌಹಾಣ್ ಅವರ 26 ವರ್ಷದ ಮಗ ಲಕ್ಷ್ಯ ಚೌಹಾಣ್ ಮೃತ ವ್ಯಕ್ತಿ.

ಹೊಸದಿಲ್ಲಿ, ಜ 27: ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹರ್ಯಾಣಕ್ಕೆ ತೆರಳಿದ್ದ ದಿಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮಗ ಶವವಾಗಿ ಪತ್ತೆಯಾಗಿದ್ದಾರೆ. ದಿಲ್ಲಿಯ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಯಶಪಾಲ್ ಚೌಹಾಣ್ ಅವರ 26 ವರ್ಷದ ಮಗ ಲಕ್ಷ್ಯ ಚೌಹಾಣ್ ಮೃತ ವ್ಯಕ್ತಿ. ಆತ ಇಬ್ಬರ ಜತೆ ಹರ್ಯಾಣಕ್ಕೆ ತೆರಳಿದ್ದ. ಆತನ ಶವ ಇನ್ನೂ ಪತ್ತೆಯಾಗಿಲ್ಲ.

ಟಿಸ್ ಹಜಾರಿ ನ್ಯಾಯಾಲಯದಲ್ಲಿ ವಕೀಲರಾಗಿದ್ದ ಲಕ್ಷ್ಯ ಚೌಹಾಣ್ ಅವರನ್ನು ಅವರ ಇಬ್ಬರು ಸ್ನೇಹಿತರಾದ ವಿಕಾಸ್ ಭಾರದ್ವಾಜ್ ಮತ್ತು ಅಭಿಷೇಕ್ ಸೇರಿ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಣಕಾಸು ವಿವಾದವೊಂದಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ ಎನ್ನಲಾಗಿದೆ.

ಸುಮಾರು 16 ಅಡಿ ಆಳದ ಕಾಲುವೆಯು ನಾಲ್ಕು ಚಾನೆಲ್‌ಗಳನ್ನು ಹೊಂದಿದೆ. ಅವುಗಳಲ್ಲಿ ಎರಡು ದಿಲ್ಲಿ ಕಡೆ ಹರಿಯುತ್ತವೆ. ಶವಕ್ಕಾಗಿ ಮುಳುಗು ತಜ್ಞರು ತೀವ್ರ ಹುಡುಕಾಟ ನಡೆಸಿದ್ದಾರೆ.

ಹರ್ಯಾಣದ ಸೋನೆಪತ್‌ನಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ಸ್ನೇಹಿತರಾದ ವಿಕಾಸ್ ಮತ್ತು ಅಭಿಷೇಕ್ ಜತೆ ಲಕ್ಷ್ಯ ಚೌಹಾಣ್ ಸೋಮವಾರ ತೆರಳಿದ್ದರು. ಮರುದಿನ ಅವರು ಮನೆಗೆ ವಾಪಸಾಗಿರಲಿಲ್ಲ. ಫೋನ್ ಸಂಪರ್ಕಕ್ಕೂ ಅವರು ಸಿಕ್ಕಿರಲಿಲ್ಲ. ಇದರಿಂದ ಆತಂಕಗೊಂಡ ಎಸಿಪಿ ಯಶಪಾಲ್ ಚೌಹಾಣ್, ಮಗನ ನಾಪತ್ತೆ ಕುರಿತು ದೂರು ನೀಡಿದ್ದರು. ಬಳಿಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಹುಡುಕಾಟದ ವೇಳೆ ಘೋರ ದುರಂತ ಬೆಳಕಿಗೆ ಬಂದಿದೆ.

ಮದುವೆ ಮನೆಗೆ ಹೋಗುತ್ತಿದ್ದ ವೇಳೆ, ಲಕ್ಷ್ಯ ಮತ್ತು ವಿಕಾಸ್ ನಡುವಿನ ಹಣಕಾಸು ವಹಿವಾಟಿನ ವಿವಾದದ ಮಾತುಕತೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿತ್ತು. ತನ್ನ ಹಣ ವಾಪಸ್ ನೀಡುವಂತೆ ಲಕ್ಷ್ಯಗೆ ವಿಕಾಸ್ ಒತ್ತಾಯಿಸಿದ್ದ. ಈ ವಿಚಾರವಾಗಿ ಜಗಳ ಜೋರಾದಾಗ, ಲಕ್ಷ್ಯ ಅವರನ್ನು ಮುಗಿಸಲು ವಿಕಾಸ್ ಅಲ್ಲಿಯೇ ಸಂಚು ನಡೆಸಿದ್ದ. ಲಕ್ಷ್ಯ ತನ್ನಿಂದ ಸಾಲ ಪಡೆದಿದ್ದು, ಅದನ್ನು ವಾಪಸ್ ನೀಡಲು ನಿರಾಕರಿಸುತ್ತಿದ್ದ. ಇದರಿಂದ ಒಬ್ಬರ ಮಧ್ಯೆ ಜಗಳವಾಗಿತ್ತು ಎಂದು ವಿಕಾಸ್ ಭಾರದ್ವಾಜ್ ಹೇಳಿದ್ದಾನೆ.

ಸುಮಾರು ಒಂದು ವಾರದ ಹುಡುಕಾಟದ ಬಳಿಕ ಅಭಿಷೇಕ್, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಮದುವೆ ಕಾರ್ಯಕ್ರಮಕ್ಕೆ ಹೋಗೋಣ ಎಂದು ವಿಕಾಸ್ ಭಾರದ್ವಾಜ್ ತನ್ನನ್ನು ಕರೆದಿದ್ದಾಗಿ ಆಹ್ವಾನಿಸಿದ್ದ. ಈ ವೇಳೆ ಲಕ್ಷ್ಯ ಚೌಹಾಣ್ ತನ್ನ ಹಣ ವಾಪಸ್ ನೀಡದೆ ಸತಾಯಿಸುತ್ತಿರುವ ವಿಚಾರವನ್ನು ತಿಳಿಸಿದ್ದ. ಮದುವೆ ಮುಗಿಸಿ ವಾಪಸ್ ಬರುವ ವೇಳೆ ಲಕ್ಷ್ಯ ಹತ್ಯೆ ಮಾಡುವ ಬಗ್ಗೆ ಇಬ್ಬರೂ ಸಂಚು ನಡೆಸಿದ್ದಾಗಿ ಬಾಯ್ಬಿಟ್ಟಿದ್ದಾನೆ.

ಮಧ್ಯರಾತ್ರಿ ಬಳಿಕ ಮೂವರೂ ಮದುವೆ ಮನೆಯಿಂದ ಮರಳಿ ದಿಲ್ಲಿ ಕಡೆಗೆ ಹೊರಟಿದ್ದರು. ಮೂತ್ರ ವಿಸರ್ಜನೆ ನೆಪದಲ್ಲಿ ಮುನಾಕ್ ಕಾಲುವೆ ಬಳಿ ಅವರು ವಾಹನ ನಿಲ್ಲಿಸಿ ಇಳಿದಿದ್ದರು. ಕತ್ತಲೆ ಹಾಗೂ ನಿರ್ಜನ ಪ್ರದೇಶದ ಲಾಭ ಪಡೆದ ವಿಕಾಸ್ ಮತ್ತು ಅಭಿಷೇಕ್ ಇಬ್ಬರೂ ಕಾಲುವೆಗೆ ಲಕ್ಷ್ಯನನ್ನು ತಳ್ಳಿ, ಆತನ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದರು.

ದಿಲ್ಲಿಗೆ ವಾಪಸಾದ ಬಳಿಕ ಅಭಿಷೇಕ್‌ನನ್ನು ನರೇಲಾದಲ್ಲಿ ಇಳಿಸಿದ ವಿಕಾಸ್, ನಂತರ ಪೊಲೀಸರ ಕೈಗೆ ಸಿಗದಂತೆ ಎಲ್ಲಿಗೋ ಪರಾರಿಯಾಗಿದ್ದಾನೆ. ಸಾಕಷ್ಟು ಹುಡುಕಾಟದ ಬಳಿಕ, ಅಡಗಿಕೊಂಡಿದ್ದ ಅಭಿಷೇಕ್ ಸಿಕ್ಕಿಬಿದ್ದಿದ್ದಾನೆ. ಆತನ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಟಿಸ್ ಹಜಾರಿ ಕೋರ್ಟ್‌ನಲ್ಲಿ ಕ್ಲರ್ಕ್ ಆಗಿರುವ ವಿಕಾಸ್ ಭಾರದ್ವಾಜ್‌ನ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.

Lakshya Chauhan, the 26-year-old son of Delhi Police's Assistant Commissioner Yashpal Singh, went to Haryana with two others to attend a wedding. By the end of the revelry, he was killed and his body was found in a canal.