Mahalakshmi Jewellers in Bangalore, fake Raid: ಬೆಂಗಳೂರಿನ ಮಹಾಲಕ್ಷ್ಮಿ ಜ್ಯುವೆಲರ್ಸ್  ಶಾಪ್ ಗೆ ಬಿಐಎಸ್ ಅಧಿಕಾರಿಗಳ ಸೋಗಿನಲ್ಲಿ ನಕಲಿ ದಾಳಿ, 1 ಕೆಜಿ ಚಿನ್ನ ಇಟ್ಕೊಂಡು ಪರಾರಿ, ಸಿನಿಮಾ ಸ್ಟೈಲ್ ನಲ್ಲಿ ಕ್ಯಾಚ್ ಮಾಡಿದ ಪೊಲೀಸರು, ಲಾಕ್ ಆದ ಕಳ್ಳರು ! 

29-01-24 06:50 pm       Bangalore Correspondent   ಕ್ರೈಂ

ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಅಧಿಕಾರಿಗಳ ಸೋಗಿನಲ್ಲಿ ಜ್ಯುವೆಲ್ಲರ್ಸ್ ಶಾಪ್​ ದೋಚಿ ಪರಾರಿಯಾಗಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಕೆ.ಆರ್.ಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಜ 29: ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಅಧಿಕಾರಿಗಳ ಸೋಗಿನಲ್ಲಿ ಜ್ಯುವೆಲ್ಲರ್ಸ್ ಶಾಪ್​ ದೋಚಿ ಪರಾರಿಯಾಗಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಕೆ.ಆರ್.ಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಂಪತ್ ಕುಮಾರ್, ಜೊಶಿ ಥಾಮಸ್, ಅವಿನಾಶ್ ಹಾಗೂ ಸಂದೀಪ್ ಬಂಧಿತ ಆರೋಪಿಗಳು.

ಜನವರಿ 27ರಂದು ಕಾರಿನಲ್ಲಿ ಕೆ.ಆರ್.ಪುರಂನ ಮಹಾಲಕ್ಷ್ಮಿ ಜ್ಯುವೆಲರ್ಸ್ ಶಾಪ್​ಗೆ ಬಂದಿದ್ದ ಆರೋಪಿಗಳು, ತಾವು 'ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಧಿಕಾರಿಗಳು, ಬೆಂಗಳೂರಿನ ಹಲವು ಚಿನ್ನದಂಗಡಿಗಳ ಮೇಲೆ ದಾಳಿ ಮಾಡಲಾಗಿದೆ ಅದರಲ್ಲಿ‌ ನಿಮ್ಮದೂ ಒಂದು. ಹಾಲ್ ಮಾರ್ಕ್ ಇಲ್ಲದೆ ಅಕ್ರಮವಾಗಿ ನೀವು ಚಿನ್ನ ಮಾರಾಟ ಮಾಡುತ್ತಿದ್ದೀರಿ ಎಂಬ ಮಾಹಿತಿ ನಮಗೆ ದೊರೆತಿದೆ. ಹೀಗಾಗಿ ದಾಳಿ ಮಾಡಿದ್ದೇವೆ' ಎಂದಿದ್ದರು.

ಸುಮಾರು 40 ನಿಮಿಷ ಅಂಗಡಿಯಲ್ಲಿ ಶೋಧ ನಡೆಸಿದಂತೆ ಮಾಡಿ ಬಳಿಕ 80 ಲಕ್ಷ ರೂ. ಮೌಲ್ಯದ 1 ಕೆಜಿಗೂ ಅಧಿಕ ಚಿನ್ನ ತೆಗೆದುಕೊಂಡು, ಬಳಿಕ ಅಂಗಡಿ ಮಾಲೀಕನ ಕೈಗೆ ನಕಲಿ ನೋಟಿಸ್ ನೀಡಿ, ಮುಂದಿನ ವಾರ ತಮಿಳುನಾಡಿನ ಬಿಐಎಸ್ ಕಚೇರಿಗೆ ಬರುವಂತೆ ಹೇಳಿ ತೆರಳಿದ್ದರು. ಆದರೆ ಹೊರಡುವ ಮುನ್ನ ಚಿನ್ನದ ಅಂಗಡಿಯ ಸಿಸಿಟಿವಿ ಡಿವಿಆರ್​ನ್ನು ಆರೋಪಿಗಳು ಪಡೆದುಕೊಂಡಿದ್ದರು.

ಇದರಿಂದ ಅನುಮಾನಗೊಂಡ ಚಿನ್ನದ ಅಂಗಡಿಯ ಕೆಲ ಸಿಬ್ಬಂದಿ ನಕಲಿ ಅಧಿಕಾರಿಗಳನ್ನು ಹಿಂಬಾಲಿಸಿದ್ದಾರೆ. ಇತ್ತ ಅಂಗಡಿ ಮಾಲೀಕ ಸಹ ಅನುಮಾನಗೊಂಡು ಕೆಆರ್​ಪುರಂ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹಿಂಬಾಲಿಸುತ್ತಿರುವುದನ್ನು ತಿಳಿದ ಆರೋಪಿಗಳು ತಪ್ಪಿಸಿಕೊಳ್ಳುವ ಭರದಲ್ಲಿ ಟಿ.ಸಿ ಪಾಳ್ಯ ಜಂಕ್ಷನ್ ಬಳಿ ಸರಣಿ ಅಪಘಾತವೆಸಗಿದ್ದಾರೆ. ಆದರೆ ಸಿನಿಮೀಯ ಮಾದರಿಯಲ್ಲಿ ಆರೋಪಿಗಳನ್ನು ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರ ಪೈಕಿ ಸಂಪತ್ ಈ ಹಿಂದೆ ಮಂಡ್ಯದಲ್ಲಿ ಕಳ್ಳತನ ಪ್ರಕರಣದ ಆರೋಪಿಯಾಗಿದ್ದು, ಸೆರೆವಾಸ ಅನುಭವಿಸಿ ಬಿಡುಗಡೆಯಾಗಿದ್ದ. ಬಳಿಕ ತಮಿಳುನಾಡು ಮೂಲದ ವ್ಯಕ್ತಿಯೊಬ್ಬನ ಸೂಚನೆಯಂತೆ ಈ ಕೃತ್ಯಕ್ಕೆ ಕೈ ಹಾಕಿದ್ದ ಎಂದು ತಿಳಿದು ಬಂದಿದೆ. ಆರೋಪಿಗಳ ಬಂಧನವಾಗುತ್ತಿದ್ದಂತೆ ತಮಿಳುನಾಡು ಮೂಲದ ಪ್ರಮುಖ ಆರೋಪಿ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

Four make fake raid as BIS officers at Mahalakshmi Jewellers in Bangalore, arrested. The four were caught just like movie style by police