Tumkur Car Burnt, Mangalore, Crime, Gold trap: ಚಿನ್ನದ ಹಂಡೆ ಸಿಕ್ಕಿದೆಯೆಂದು ನಂಬಿಸಿದ್ದ ಕಿರಾತಕರು ; ನಿಧಿಯಾಸೆಗೆ ಬಿದ್ದು ಬೆಳ್ತಂಗಡಿಯಿಂದ ತುಮಕೂರು ತೆರಳಿದ್ದವರ ಮಟಾಷ್, ಹಣದ ಗಂಟು ಸಹಿತ ಎಸ್ಕೇಪ್ ಆಗಿದ್ದ ಹಂತಕರು ಪೊಲೀಸ್ ವಶಕ್ಕೆ 

23-03-24 05:38 pm       Bangalore Correspondent   ಕ್ರೈಂ

ತುಮಕೂರಿನ ಕುಚ್ಚಂಗಿ ಕೆರೆ ಸಮೀಪ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಕಾರು ಮತ್ತು ಮೂವರ ಶವಗಳ ಬೆನ್ನುಹತ್ತಿದ ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.

ಬೆಂಗಳೂರು, ಮಾ.23: ತುಮಕೂರಿನ ಕುಚ್ಚಂಗಿ ಕೆರೆ ಸಮೀಪ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಕಾರು ಮತ್ತು ಮೂವರ ಶವಗಳ ಬೆನ್ನುಹತ್ತಿದ ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೆ, ಒಟ್ಟು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದ್ದಾರೆ. ಬಂಗಾರದ ಆಸೆಗೆ ಬಿದ್ದು ಹೋದವರು ಹಂತಕರ ಕೈಗೆ ಸಿಲುಕಿ ಸಾವು ಕಂಡಿದ್ದಾರೆ ಎನ್ನಲಾಗುತ್ತಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಇಸಾಕ್ (56), ಸಾಹುಲ್ (45), ಇಮ್ಮಿಯಾಜ್ (34) ಮೃತರಾಗಿದ್ದು ಬಂಗಾರದ ಆಸೆಗೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಇಸಾಕ್‌ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದರೆ, ಸಾಹುಲ್ ಹಮೀದ್ ಆಟೋ ಚಾಲಕ ಹಾಗೂ ಇಮ್ತಿಯಾಜ್ ಸಿದ್ದಿಕ್ ಫೂಟ್ ವೇರ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚಿಗೆ ಇಸಾಕ್‌ಗೆ ತುಮಕೂರಿನ ಪರಿಚಿತರೊಬ್ಬರಿಂದ ಫೋನ್‌ ಕರೆ ಬಂದಿತ್ತು. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ. ಕಡಿಮೆ ಬೆಲೆಗೆ ಎಲ್ಲ ಚಿನ್ನವನ್ನು ಕೊಡುತ್ತೇವೆ ಎಂದು ಹೇಳಿದ್ದರು. ಚಿನ್ನದಾಸೆ ತೋರಿಸಿ ಹಣವನ್ನು ದೋಚುವ ಪ್ಲ್ಯಾನ್‌ ಮಾಡಿದ್ದರು.

ಸಂಚಿನ ಬಗ್ಗೆ ತಿಳಿಯದೆ ಇಸಾಕ್‌ ತನ್ನ ಸ್ನೇಹಿತ ರಫೀಕನ ಎಸ್ ಪ್ರೆಸ್ಸೋ ಕಾರನ್ನು ಪಡೆದಿದ್ದ.‌ ಅಲ್ಲದೆ, ಸ್ನೇಹಿತರಾದ ಹಮೀದ್ ಹಾಗೂ ಇಮ್ತಿಯಾಜ್ ಸಿದ್ದಿಕ್‌ಗೆ ಒಂದು ಡೀಲ್ ಇದೆ ಬನ್ನಿ ಎಂದು ಹೇಳಿ ಹಣದ ಚೀಲ ಒಟ್ಟು ಮಾಡಿ ತುಮಕೂರಿಗೆ ಹೋಗಿದ್ದ. ತುಮಕೂರಿನಲ್ಲಿ ಸ್ವಾಮಿ ಎಂಬಾತನ ಪರಿಚಯದಲ್ಲಿ ಇಸಾಕ್‌ ಬಂದಿದ್ದ.

 

ಹಂತಕರು ನಕಲಿ ಚಿನ್ನ ತೋರಿಸಿ, ಹಣ ದೋಚಲು ಮುಂದಾಗಿದ್ದರು. ಈ ಮೂವರನ್ನು ಜನರಿಲ್ಲದ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಕೈ ಕಾಲು ಕಟ್ಟಿ ಕೊಲೆ ಮಾಡಿದ್ದರು. ನಂತರ ಅದೇ ಕಾರಿನ ಡಿಕ್ಕಿಯಲ್ಲಿ ಇಬ್ಬರ ಮೃತದೇಹ ಹಾಗೂ ಕಾರಿನ ಮಧ್ಯಭಾಗದ ಸೀಟಿನಲ್ಲಿ ಮತ್ತೊಬ್ಬನ ಮೃತದೇಹ ಇಟ್ಟು ಕುಚ್ಚಂಗಿ ಕೆರೆಯ ಬಳಿ ತಂದಿರಿಸಿ ಕಾರಿಗೆ ಬೆಂಕಿ ಹಚ್ಚಿದ್ದರು. ಶವ ಸಹಿತ ಸುಟ್ಟು ಹೋದರೆ ಗುರುತು ಪತ್ತೆ ಸಾಧ್ಯವಾಗದು ಎಂಬ ಲೆಕ್ಕ ಹಾಕಿದ್ದರು. 

ಆದರೆ ಕಾರಿನ ನಂಬರ್ ಆಧರಿಸಿ ಮಾಲೀಕನನ್ನು ಸಂಪರ್ಕಸಿದಾಗ, 15 ದಿನಗಳ ಹಿಂದೆ ಕಾರು ಕೊಟ್ಟಿದ್ದಾಗಿ ತಿಳಿಸಿದ್ದ. ಇಸಾಕ್ ವಿಷಯ ತಿಳಿಯುತ್ತಲೇ ಮೂವರ ಗುರುತು ಪತ್ತೆಯಾಗಿತ್ತು. ಸದ್ಯ ಪ್ರಕರಣ ಸಂಬಂಧಿಸಿ ಪ್ರಮುಖ ಆರೋಪಿ ಸ್ವಾಮಿ ಸೇರಿ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತುಮಕೂರು ತಾಲೂಕಿನ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Car found in brunt condition at Tumkur case, trapped by fake gold and killed, police shocking details. Three charred bodies from Mangalore were found in a burnt car on a lake bed on the outskirts of this district headquarters town about 70 km from Bengaluru.